ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಿತ ಸ್ಫೋಟಕಗಳನ್ನು ಹೊಂದಿದ್ದ ಐಎಸ್‌ ಶಂಕಿತ ಉಗ್ರ ದೆಹಲಿಯಲ್ಲಿ ಸೆರೆ

Last Updated 22 ಆಗಸ್ಟ್ 2020, 5:51 IST
ಅಕ್ಷರ ಗಾತ್ರ

ದೆಹಲಿ: ಸುಧಾರಿತ ಸ್ಪೋಟಕ ಸಾಧನಗಳನ್ನು (ಐಇಡಿ) ಹೊಂದಿದ್ದ, ಶಂಕಿತ ಐಎಸ್‌ಐಎಸ್‌ ಉಗ್ರನೊಬ್ಬನನ್ನು ದೆಹಲಿಯ ರಿಡ್ಜ್‌ ರಸ್ತೆಯ ಪ್ರದೇಶದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಬಂಧಿತನನ್ನು ಉತ್ತರ ಪ್ರದೇಶದ ಮೂಲದ ಅಬ್ದುಲ್‌ ಯೂಸೂಫ್‌ ಖಾನ್‌ ಎಂದು ಗುರುತಿಸಲಾಗಿತ್ತು. ದೆಹಲಿಯಲ್ಲಿ ಭಾರಿ ಪ್ರಮಾಣದ ಸ್ಫೋಟದ ಸಂಚಿನಲ್ಲಿ ನಿರತನಾಗಿದ್ದ ಎಂದು ತಿಳಿದು ಬಂದಿದೆ. ಐಇಡಿ ಅಲ್ಲದೆ, ಒಂದು ಪಿಸ್ತೂಲ್‌ ಅನ್ನೂ ಈಗನಿಂದ ವಶಕ್ಕೆ ಪಡೆಯಲಾಗಿದೆ.

‘ಧೌಲಾ ಕುವಾನ್ ಮತ್ತು ಕರೋಲ್ ಬಾಗ್ ನಡುವಿನ ರಿಡ್ಜ್‌ ರಸ್ತೆಯ ಬುದ್ಧ ಜಯಂತಿ ಪಾರ್ಕ್‌ ಬಳಿ ಶುಕ್ರವಾರ ರಾತ್ರಿ ನಡೆದ ಗುಂಡಿನ ಚಕಮಕಿಯ ನಂತರ ಶಂಕಿತ ಐಎಸ್‌ ಉಗ್ರನನ್ನು ಬಂಧಿಸಲಾಗಿದೆ. ಐಎಸ್‌ ತಂಡವೊಂದು ದೆಹಲಿಯಲ್ಲಿ ಸಂಚು ನಡೆಸುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿಂದ ಪೊಲೀಸರು ತಂಡದ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಸದ್ಯ ಸೆರೆ ಹಿಡಿದಿರುವ ಯೂಸೂಫ್‌ ಖಾನ್‌ ರಿಡ್ಜ್‌ ಪ್ರದೇಶಕ್ಕೆ ಬರುತ್ತಿರುವುದಾಗಿ ನಮಗೆ ಮಾಹಿತಿ ಸಿಕ್ಕಿತ್ತು. ಅದರಂತೆ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ,’ ಎಂದು ಪೊಲೀಸ್ ಉಪ ಆಯುಕ್ತ (ವಿಶೇಷ ವಿಭಾಗ) ಪ್ರಮೋದ್ ಸಿಂಗ್ ಕುಶ್ವಾಹಾ ಹೇಳಿದರು.

ಶಂಕಿತ ಉಗ್ರ ಸೆರೆ ಸಿಕ್ಕ ಪ್ರದೇಶವಾದ ಬುದ್ಧ ಜಯಂತಿ ಪಾರ್ಕ್‌ ಬಳಿ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಕಮಾಂಡೋಗಳು ಬೀಡು ಬಿಟ್ಟಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬಂಧಿತನಿಂದ ವಶಕ್ಕೆ ಪಡೆಯಲಾಗಿರುವ ಇಐಡಿಗಳ ಅಧ್ಯಯನ ನಡೆಸುವುದಾಗಿಯೂ ಎನ್‌ಎಸ್‌ಜಿ ತಿಳಿಸಿದೆ.

ಐಎಸ್‌ ಜೊತೆಗೆ ಸಂಪರ್ಕವುಳ್ಳ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಣ್ಣಿನ ವೈದ್ಯನೊಬ್ಬನನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು. ಇದರ ಬೆನ್ನಿಗೇ ದೆಹಲಿಯಲ್ಲಿ ಮತ್ತೊಬ್ಬನನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT