ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದು ಪ್ಯಾಕೇಜ್ ಅಲ್ಲ, ಸರ್ಕಾರದ ಮತ್ತೊಂದು ಸುಳ್ಳು: ರಾಹುಲ್‌ ಗಾಂಧಿ ಟೀಕೆ

ಆರ್ಥಿಕತೆ ಪುನಶ್ಚೇತನ ಪ್ಯಾಕೇಜ್‌
Last Updated 29 ಜೂನ್ 2021, 10:18 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ -19 ನಿಂದ ಜರ್ಜರಿತಗೊಂಡ ಆರ್ಥಿಕತೆಯ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಪ್ರಕಟಿಸಿರುವ ಹೊಸ ಪ್ಯಾಕೇಜ್‌ನಿಂದ ಸಾರ್ವಜನಿಕರ ನಿತ್ಯ ಜೀವನಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಇದು ಪ್ಯಾಕೇಜ್‌ ಅಲ್ಲ, ಸರ್ಕಾರ ಜನರಿಗೆ ಹೇಳಿರುವ ಮತ್ತೊಂದು ಸುಳ್ಳು‘ ಎಂದು ಆರೋಪಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕತೆಯ ಪುನಶ್ಚೇತನಕ್ಕಾಗಿ ಸೋಮವಾರ ಮತ್ತೊಂದು ಆರ್ಥಿಕ ನೆರವಿನ ಪ್ಯಾಕೇಜ್‌ ಘೋಷಿಸಿದ್ದು, ಅದರಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗಾಗಿ ₹1.1 ಲಕ್ಷ ಕೋಟಿಗಳ ಸಾಲ ಖಾತರಿ ಯೋಜನೆ ಪ್ರಕಟಿಸಿದ್ದಾರೆ. ಇದರ ಜತೆಗೆ, ಆರೋಗ್ಯ ಕ್ಷೇತ್ರ, ಪ್ರವಾಸೋದ್ಯಮ ಏಜೆನ್ಸಿ ಹಾಗೂ ಟೂರ್‌ ಗೈಡ್‌ಗಳಿಗೆ ಸಾಲ ಸೌಲಭ್ಯ, ವಿದೇಶಿ ಪ್ರವಾಸಿಗರಿಗೆ ವೀಸಾ ಶುಲ್ಕ ವಿನಾಯಿತಿ ಸೇರಿದಂತೆ ಹಲವು ಕ್ರಮಗಳೂ ಪ್ಯಾಕೇಜ್‌ನಲ್ಲಿವೆ.

ಈ ಪ್ಯಾಕೇಜ್‌ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ‘ದೇಶದ ಯಾವುದೇ ಕುಟುಂಬವು ತಮ್ಮ ಜೀವನ-ಆಹಾರ-ಔಷಧ-ಮಗುವಿನ ಶಾಲಾ ಶುಲ್ಕಕ್ಕಾಗಿ ಹಣಕಾಸು ಸಚಿವರು ಘೋಷಿಸಿರುವ ಈ ‘ಆರ್ಥಿಕ ಪ್ಯಾಕೇಜ್'ನ ಹಣವನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ‘ ಎಂದು ಹೇಳಿದ್ದಾರೆ. ‘ಇದು ಪ್ಯಾಕೇಜ್‌ ಅಲ್ಲ, ಮತ್ತೊಂದು ಸುಳ್ಳು‘ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿಂದಂಬರಂ ಅವರೂ ಈ ಪ್ಯಾಕೇಜ್‌ ಕುರಿತು ಟೀಕೆ ಮಾಡಿದ್ದಾರೆ. ‘ಪ್ರಸ್ತುತದ ಬಿಕ್ಕಟ್ಟಿಗೆ ನಿಜವಾಗಿಯೂ ಪರಿಹಾರ ಎಂದರೆ, ಜನರ ಕೈಯಲ್ಲಿ ಅದರಲ್ಲೂ ವಿಶೇಷವಾ‌ಗಿ‌ ಬಡ ಮತ್ತು ಮಧ್ಯಮವರ್ಗದ ಜನರ ಕೈಗೆ ಹಣ ನೀಡಿ, ವಹಿವಾಟು ನಡೆಯುವಂತಾಗಬೇಕು‘ ಎಂದು ಹೇಳಿದರು.

‘ಕೆಲವು ಪ್ರಾಥಮಿಕ ಸತ್ಯಗಳೇನೆಂದರೆ, ‘ಸಾಲ ಎನ್ನುವುದೇ ಅಧಿಕ ಖರ್ಚು ಎಂದರ್ಥ. ಯಾವುದೇ ಬ್ಯಾಂಕಿನವರು ಸಾಲ ಆಧಾರಿತ ವ್ಯವಹಾರ ನಡೆಸುವವರಿಗೆ ಸಾಲ ನೀಡುವುದಿಲ್ಲ‘ ಎಂದು ಚಿದಂಬರಂ ಟ್ವೀಟ್‌ ಮಾಡಿದ್ದಾರೆ.

ಸಾಲದ ಹೊರೆ ಅಥವಾ ನಗದು ಕೊರತೆಯಿಂದ ಬಳಲುತ್ತಿರುವ ವ್ಯವಹಾರಗಳಿಗೆ ಹೆಚ್ಚಿನ ಸಾಲ ಬೇಡ. ಅವರಿಗೆ ಸಾಲವಲ್ಲದ ಬಂಡವಾಳ ಬೇಕು‘ ಎಂದು ಚಿದಂಬರಂ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

‘ಹೆಚ್ಚು ಪೂರೈಕೆ ಅಂದರೆ ಹೆಚ್ಚು ಬೇಡಿಕೆ (ಬಳಕೆ) ಅಂತ ಅಲ್ಲ. ಬದಲಿಗೆ, ಹೆಚ್ಚು ಬೇಡಿಕೆ(ಬಳಕೆ) ಪೂರೈಕೆಯನ್ನು ಹೆಚ್ಚಿಸುತ್ತದೆ‘ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT