ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಪುರ: ಇಂದಿನಿಂದ ‘ಸಾಹಿತ್ಯದ ಕುಂಭಮೇಳ’

ಬಿಲ್‌ಗೇಟ್ಸ್‌, ಮಲಾಲಾ ಸಮ್ಮೇಳನದ ಪ್ರಮುಖ ಆಕರ್ಷಣೆ
Last Updated 18 ಫೆಬ್ರುವರಿ 2021, 22:09 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಹಿತ್ಯದ ಕುಂಭಮೇಳ’ ಎಂದೇ ಕರೆಯಲಾಗುವ ಜೈಪುರ ಸಾಹಿತ್ಯ ಸಮ್ಮೇಳನ (ಜೆಎಲ್‌ಎಫ್‌) ಶುಕ್ರವಾರ ಆರಂಭವಾಗಲಿದ್ದು, ಈ ಸಲ ಹತ್ತು ದಿನಗಳವರೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ಈ ಸಮ್ಮೇಳನ ವರ್ಚ್ಯುವಲ್‌ ಆಗಿ ನಡೆಯುತ್ತಿದ್ದು, ಅಂದಾಜು ಒಂದು ಕೋಟಿ ಸಾಹಿತ್ಯಾಸಕ್ತರು ಪಾಲ್ಗೊಳ್ಳಬಹುದು ಎಂದು ಸಂಘಟಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಜೆಎಲ್‌ಎಫ್‌ನ ಕಾಯಂ ತಾಣವಾದ ರಾಜಸ್ಥಾನದ ಡಿಗ್ಗಿ ಪ್ಯಾಲೇಸ್‌ನಲ್ಲಿಯೇ ಚರ್ಚೆಗಳು ನಡೆಯುತ್ತಿರುವಂತೆ ಭಾಸವಾಗಲು ಡಿಗ್ಗಿ ಪ್ಯಾಲೇಸ್‌ನ ವರ್ಚ್ಯುವಲ್‌ ಪ್ಲಾಟ್‌ಫಾರ್ಮ್‌ಗಳನ್ನು ಸೃಷ್ಟಿ ಮಾಡಲಾಗಿದೆ. ಸಮ್ಮೇಳನದಲ್ಲಿ ಭಾರತದ 25 ಭಾಷೆಗಳ ಮಾತುಗಳಿಗೆ ‘ತಾವು’ ಸಿಕ್ಕಿದ್ದು, ಕನ್ನಡವೂ ಅದರಲ್ಲಿ ಸೇರಿದೆ.

ಭಾರತದಲ್ಲಿ ಸದ್ಯ ಬಹುವಾಗಿ ಚರ್ಚಿತವಾಗುತ್ತಿರುವ ರೈತ ಚಳವಳಿ, ಭಾರತ–ಚೀನಾ ಸಂಬಂಧ, ಹವಾಮಾನ ತುರ್ತು ಪರಿಸ್ಥಿತಿ ವಿಷಯಗಳು ಜೆಎಲ್‌ಎಫ್‌ನ ಚರ್ಚೆಗಳಿಗೂ ಕಾವು ತುಂಬಲಿವೆ. ಮೈಕ್ರೊಸಾಫ್ಟ್‌ ರೂವಾರಿ ಬಿಲ್‌ ಗೇಟ್ಸ್‌, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಪಾಕಿಸ್ತಾನದ ಚಳವಳಿಗಾರ್ತಿ ಮಲಾಲಾ, ಮ್ಯಾನ್‌ ಬೂಕರ್‌ ಪ್ರಶಸ್ತಿ ಪುರಸ್ಕೃತ ಡಗ್ಲಾಸ್‌ ಸ್ಟುವರ್ಟ್‌, ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಜೆಫ್ರಿ ಗೆಟಲ್‌ಮನ್‌ ಪ್ರಧಾನ ಆಕರ್ಷಣೆ ಎನಿಸಿದ್ದಾರೆ.

ಬೆಂಗಳೂರಿನ ರಾಮಚಂದ್ರ ಗುಹಾ, ಸುಧಾಮೂರ್ತಿ, ರಘು ಕಾರ್ನಾಡ ಅವರೂ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗಾಯಕ ಟಿ.ಎಂ. ಕೃಷ್ಣ ಅವರ ಗೋಷ್ಠಿಯೂ ಕುತೂಹಲ ಕೆರಳಿಸಿದೆ.

ಅಮೆರಿಕದ ಟಿವಿ ಚಾನೆಲ್‌ನಲ್ಲಿ ಪ್ರಧಾನ ಪಾತ್ರದಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಸಮ್ಮೇಳನದಲ್ಲಿ ತಮ್ಮ ಬಾಲ್ಯದ ಪುಟಗಳನ್ನು ತೆರೆದಿಡಲಿದ್ದಾರೆ. ಸಾಹಿತ್ಯ, ಸಂಗೀತ, ಕ್ರೀಡೆ, ರಾಜಕೀಯ, ಉದ್ಯಮ ಮತ್ತಿತರ ವಲಯಗಳ 300 ಜನ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

ಗಂಭೀರ ಸಮಾಲೋಚನೆಗಳ ನಡುವೆಯೇ ರಸವತ್ತಾದ ಕಥೆಗಳ ಹಾಯಿದೋಣಿಗಳು ತೇಲಿ ಬರಲಿವೆ ಎನ್ನುತ್ತಾರೆ ಮುಖ್ಯ ಸಂಘಟಕ ಸಂಜಯ್‌ ರಾಯ್‌. ಕಳೆದ ವರ್ಷಪೂರ್ತಿ ಕಾಡಿ, ಈ ಸಲ ‘ಲೈವ್‌’ ಸಾಹಿತ್ಯ ಸಮ್ಮೇಳನಕ್ಕೂ ಸಂಚಕಾರ ತಂದ ಕೊರೊನಾ ಸೋಂಕಿನ ಕುರಿತು ತಜ್ಞ ವೈದ್ಯರಿಂದಲೇ ವಿಶೇಷ ಚರ್ಚೆ ನಡೆಯಲಿದೆ. ಸಾಂಕ್ರಾಮಿಕದ ನಾನಾ ಮುಖಗಳ ಕುರಿತು ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ಹೇಳುತ್ತಾರೆ.

ಯೂರೋಪಿಯನ್‌ ಒಕ್ಕೂಟದತ್ತ ನಾವು ಇದುವರೆಗೆ ಹೆಚ್ಚು ಲಕ್ಷ್ಯ ವಹಿಸಿರಲಿಲ್ಲ. ಆದರೆ, ಈ ವರ್ಷ ಆ ಭಾಗದಿಂದ ದೊಡ್ಡ ಸಂಖ್ಯೆಯಲ್ಲಿ ಲೇಖಕರು ಭಾಗವಹಿಸುತ್ತಿದ್ದಾರೆ ಎನ್ನುತ್ತಾರೆ ಸಂಘಟಕರಲ್ಲಿ ಒಬ್ಬರಾದ ವಿಲಿಯಂ ಡೆಲ್ರಿಂಪಲ್‌.

ಹೆಚ್ಚಿನ ಸಮಯವನ್ನು ಸ್ಕ್ರೀನ್‌ಗಳಲ್ಲೇ (ಆನ್‌ಲೈನ್‌) ಕಳೆಯುವವರನ್ನು ಸಾಹಿತ್ಯದಂತಹ ‘ಲೈವ್‌’ ಕಾರ್ಯಕ್ರಮಗಳತ್ತ ಸೆಳೆದ ಶ್ರೇಯಸ್ಸು ಜೆಎಲ್‌ಎಫ್‌ನದ್ದು. ಆದರೆ, ಈ ಸಲ ಲೈವ್‌ ಕಾರ್ಯಕ್ರಮವನ್ನು ಸ್ಕ್ರೀನ್‌ನಲ್ಲೇ ನೋಡಿ ಎನ್ನುವ ಧ್ಯೇಯವಾಕ್ಯವನ್ನು ಅದು ಹೊತ್ತುಕೊಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT