ಜೈಪುರ ಸಾಹಿತ್ಯೋತ್ಸವ: ಮುಖ್ಯ ನ್ಯಾಯಮೂರ್ತಿಗೇ ಭಯ ಇರುವ ದೇಶ –ರವೀಶ್‌ಕುಮಾರ್

ಜೈಪುರ: ‘ಈ ದೇಶದಲ್ಲಿ ಜಾಮೀನು ನೀಡಲು ನ್ಯಾಯಾಧೀಶರಿಗೆ ಭಯವಿದೆ ಎಂದು ಮುಖ್ಯ ನ್ಯಾಯಮೂರ್ತಿಯೇ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಭಯದ ಸ್ವರೂಪ ಇಲ್ಲಿ ಹೇಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ’ ಎಂದು ಪತ್ರಕರ್ತ ರವೀಶ್‌ಕುಮಾರ್ ವಿಷಾದ ಬೆರೆತ ದನಿಯಲ್ಲಿ ಹೇಳಿದರು. ಜೈಪುರ ಸಾಹಿತ್ಯೋತ್ಸವದಲ್ಲಿ ಶುಕ್ರವಾರ 'ಭಯದ ಸ್ವರೂಪ' ಎನ್ನುವ ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಭಾರತ ಕುಸ್ತಿ ಫೆಡರೇಷನ್‌ನ ಅಧ್ಯಕ್ಷರೂ ಆಗಿರುವ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳಾ ಕುಸ್ತಿಪಟುಗಳು ದೆಹಲಿಯಲ್ಲಿ ಪ್ರತಿಭಟನೆ ಕುಳಿತಿದ್ದಾರೆ. ಕನಿಷ್ಠ ಬಿಜೆಪಿಯ ಹೆಣ್ಣುಮಗಳೇ ಆದ ಸ್ಮೃತಿ ಇರಾನಿ ಅವರಾದರೂ ಅಲ್ಲಿಗೆ ಹೋಗಿ, ವಿಷಯ ಅವಲೋಕಿಸಬೇಕಲ್ಲ. ಘಟಾನುಘಟಿಗಳನ್ನೂ ಕೆಡವಿಹಾಕಬಲ್ಲ ಕುಸ್ತಿಪಟುಗಳಿಗೇ ಭಯ ಇರುವ ಈ ಪರಿಸ್ಥಿತಿಯನ್ನು ಏನನ್ನೋಣ’ ಎಂದು ಪ್ರಶ್ನಿಸಿದರು.
’ಸರ್ಕಾರವೇ ಇಲ್ಲಿ ಕೆಲವರು ತಪ್ಪು ಮಾಡಲಿ ಎಂದು ಹೊಂಚು ಹಾಕಿ ಕೂತಿದೆ. ಯಾವ ರೀತಿಯ ತಪ್ಪು ಮಾಡಬಹುದು ಎನ್ನುವ ಪರಿಸ್ಥಿತಿಯನ್ನು ಕೂಡ ಸೃಷ್ಟಿಸಿದೆ. ಸಿದ್ದಿಕ್ ಕಪ್ಪನ್, ಉಮರ್ ಖಾಲಿದ್ ಮೊದಲಾದವರು ಅದಕ್ಕೆ ಉದಾಹರಣೆ. ಬೆಂಗಳೂರಿನಲ್ಲಿ ಅಮೂಲ್ಯಾ ಎಂಬ ಹೆಣ್ಣುಮಗಳು ಎರಡು ದೇಶಗಳ ಪರವಾಗಿ ಘೋಷಣೆ ಕೂಗಿದ್ದೇ, ನೂರು ದಿನ ಅವಳನ್ನು ಜೈಲಿನಲ್ಲಿ ಇರಿಸಿದರು. ಆರೋಪಪಟ್ಟಿಯನ್ನೂ ದಾಖಲಿಸಲಿಲ್ಲ. ಆಮೇಲೆ ಸುಮ್ಮನೆ ಬಿಟ್ಟು ಕಳಿಸಿದರು. ತಮಗೂ ಅವಳ ವರ್ತನೆಗೂ ಸಂಬಂಧವಿಲ್ಲ ಎಂದು ಅವರ ತಂದೆಯೇ ಹೇಳಿದ ದೇಶವಿದು’ ಎಂದು ಅವರು ವ್ಯಂಗ್ಯವಾಡಿದರು.
’ಕರ್ನಾಟಕದಲ್ಲಿ ಬಿಜೆಪಿಯ ಇಂತಹ ರಾಜಕಾರಣಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹೆಸರು ತೆಗೆದುಕೊಂಡು ಆರೋಪಿಸಿದರೂ ಇ.ಡಿ ಅವರ ಮೇಲೆ ದಾಳಿ ಮಾಡಲಿಲ್ಲ. ಅದಕ್ಕೂ ಭಯವಿದೆ’ ಎಂದು ತರಾಟೆಗೆ ತೆಗೆದುಕೊಂಡರು.
‘ಸರ್ಕಾರ ಬದಲಾದ ಮಾತ್ರಕ್ಕೆ ಭಯ-ಆತಂಕ ನಿವಾರಣೆಯಾದೀತು ಎಂದರ್ಥವಲ್ಲ. ವಿರೋಧದ ದನಿ ಇರುವುದೇ ಜನರಲ್ಲಿ. ನಾಗರಿಕ ಪ್ರಜ್ಞೆಯು ಮತ್ತೆ ಒಳ್ಳೆಯ ಪ್ರಮಾಣದಲ್ಲಿ ಮೂಡಿದಾಗಲಷ್ಟೆ ನಿರ್ಭಿಡೆಯಿಂದ ಪ್ರಶ್ನಿಸುವುದು ಸಾಧ್ಯ’ ಎಂದರು.
‘ಸಣ್ಣಗಾಳಿಗೆ ಸಿಲುಕಿ ಉದುರುವ ತರಗೆಲೆಗಳಂತೆ ಆಗದೆ ಹಲ್ಲು ಬಿಗಿಹಿಡಿದು ಹೋರಾಡುವ ವ್ಯಕ್ತಿಯಾಗಿಯೇ ಉಳಿಯುವಂತೆ ಹೊಸ ವರ್ಷಕ್ಕೆ ನನ್ನ ಮಾವ ಹಾರೈಕೆಯ ಸಂದೇಶ ಕಳುಹಿಸಿದ್ದರು. ನನಗೂ ಎಲ್ಲರಂತೆ ಭಯವಿದೆ. ಆದರೆ, ನೇರವಾದ ಪೆನ್ನು, ಸ್ವಚ್ಛ ನಾಲಗೆ ಇದ್ದರೆ ಸಾಕು ಎಂದು ಭಾವಿಸಿರುವೆ’ ಎಂದು ಭಾವುಕರಾದರು.
ಪ್ರಕಾಶಕ ರವಿ ಸಿಂಗ್ ಹಾಗೂ ಪತ್ರಕರ್ತ ಸತ್ಯಾನಂದ ನಿರೂಪಮ್ ಗೋಷ್ಠಿ ನಿರ್ವಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.