ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಗರ | ಮುಂದುವರೆದ ಹಿಮ; ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್‌

ಹೆದ್ದಾರಿಯಲ್ಲಿ ಸಿಲುಕಿದ್ದ 86 ಪ್ರಯಾಣಿಕರ ರಕ್ಷಣೆ
Last Updated 8 ಜನವರಿ 2022, 14:21 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಾದ್ಯಂತ ಶನಿವಾರ ಅತಿಯಾದ ಹಿಮ ಹಾಗೂ ಭಾರಿ ಮಳೆ ಆಗುತ್ತಿರುವ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕಾಶ್ಮೀರ ಕಣಿವೆಯು ದೇಶದ ಸಂಪರ್ಕವನ್ನು ಕಡಿದುಕೊಂಡಿದೆ.

ಹೆಚ್ಚಿನ ಪ್ರಮಾಣದ ಹಿಮ ಸುರಿಯುತ್ತಿರುವುದರಿಂದ ಹಾಗೂ ಹೆದ್ದಾರಿಯ ಅಲ್ಲಲ್ಲಿ ಭೂ ಕುಸಿತ ಉಂಟಾಗಿ ಕಣಿವೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ 264 ಕಿ.ಮೀ ಉದ್ದದ ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯ ಸಂಚಾರ ಬಂದ್‌ ಆಗಿದ್ದು, ವಾಯು ಸಂಚಾರವೂ ಸ್ಥಗಿತಗೊಂಡಿದೆ.

ಮುನ್ನಚ್ಚರಿಕೆ ಕ್ರಮವಾಗಿ ಕಾಶ್ಮೀರದ ಅನೇಕ ಭಾಗಗಳಲ್ಲಿ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಬನಿಯಾಲ್‌–ಬಾರಾಮುಲ್ಲ ವಿಭಾಗದಲ್ಲಿ 136 ಕಿ.ಮೀ ಉದ್ದದ ರೈಲು ಮಾರ್ಗವನ್ನು ಬಂದ್‌ ಮಾಡಲಾಗಿದೆ.

‘ಅತಿಯಾದ ಹಿಮ ಹಾಗೂ ದಟ್ಟ ಮಂಜು ಕವಿದಿದ್ದರಿಂದ ಶನಿವಾರ ಮಧ್ಯಾಹ್ನದವರೆಗೆ ಎಲ್ಲ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು’ ಎಂದು ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದರು.

ಜಮ್ಮು– ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸೀತಾ ರಾಮ್ ಪಾಸ್ಸಿ ಬಳಿ ಸಿಲುಕಿಕೊಂಡಿದ್ದ ಗುಜರಾತ್‌ 26 ಮಂದಿ ಸೇರಿ 86 ಪ್ರಯಾಣಿಕರನ್ನು ಶುಕ್ರವಾರ ಮಧ್ಯರಾತ್ರಿ ಪೊಲೀಸರು ರಕ್ಷಿಸಿದ್ದು, ರಾಂಬಾನ್‌ ಜಿಲ್ಲೆಯ ವಿವಿಧ ಸಮುದಾಯ ಕೇಂದ್ರಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ್ದಾರೆ.

’ಹೆದ್ದಾರಿ ಮುಚ್ಚಿರುವುದರಿಂದ ಸುಮಾರು 50 ಲಘು ಮೋಟಾರು ವಾಹನಗಳು (ಎಲ್‌ಎಂವಿ),ಹಲವು ಟ್ರಕ್‌ಗಳು ಸಿಲುಕಿಕೊಂಡಿವೆ. ಇಂಧನ ಮತ್ತು ತರಕಾರಿಗಳು ಸೇರಿದಂತೆ ಅಗತ್ಯ ವಸ್ತುಗಳ ಸಾಗಣೆಯ 300 ಟ್ರಕ್‌ಗಳಿಗೆ ಅವಕಾಶ ಕಲ್ಪಿಸಿ ಸಾಗಣೆಗೆ ಅನುಕೂಲ ಮಾಡಿಕೊಡಲಾಯಿತು’ ಎಂದು ರಾಂಬಾನ್‌ ಎಸ್‌ಎಸ್‌ಪಿ ಶಬಿರ್‌ ಅಹ್ಮದ್‌ ಮಲಿಕ್ ತಿಳಿಸಿದರು.

‘ಶನಿವಾರ ಮುಂಜಾನೆ ವೈಷ್ಣೋದೇವಿ ದೇಗುಲದಲ್ಲಿ ಸುಮಾರು ನಾಲ್ಕು ಇಂಚುಗಳಷ್ಟು ಹಿಮ ಬಿದ್ದಿದೆ. ಭೈರೋನ್ ಘಾಟಿ ಸೇರಿದಂತೆ ಎತ್ತರದ ಪ್ರದೇಶಗಳಲ್ಲಿ ಭಾರಿ ಹಿಮ ಬಿದ್ದಿದೆ’ ಎಂದು ಅವರು ಹೇಳಿದರು.

ಹವಾಮಾನ ಇಲಾಖೆಯು ‘ರೆಡ್‌ ಅಲರ್ಟ್‌’ ಘೋಷಿಸಿದೆ. ಜ.9ರ ನಂತರ ಹವಾಮಾನದಲ್ಲಿ ಸುಧಾರಣೆ ಕಾಣಬಹುದಾಗಿದ್ದು, ಭೂಕುಸಿತ ಹಾಗೂ ಹಿಮಕುಸಿತದ ಸಂಭವನೀಯ ಪ್ರದೇಶಗಳತ್ತ ಜನರು ಹೋಗಬಾರದು ಎಂದು ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT