ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನ ಗಣ ಮನ’ ಮತ್ತು ‘ವಂದೇ ಮಾತರಂ’ ಸಮಾನ... ಆದರೆ: ಕೇಂದ್ರ ಹೇಳಿರುವುದೇನು?

Last Updated 5 ನವೆಂಬರ್ 2022, 11:45 IST
ಅಕ್ಷರ ಗಾತ್ರ

ನವದೆಹಲಿ: 'ಜನ ಗಣ ಮನ' ಮತ್ತು 'ವಂದೇ ಮಾತರಂ'ಗೆ ಸಮಾನ ಸ್ಥಾನಮಾನ ನೀಡಬೇಕು ಎಂಬ ಮನವಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಎರಡೂ ಸಮಾನವಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯೂ ಎರಡೂ ಗೀತೆಗಳಿಗೆ ಸಮಾನ ಗೌರವ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

‘ಭಾರತದ ಜನರ ಭಾವನೆಗಳು ಮತ್ತು ಮನಸ್ಸಿನಲ್ಲಿ ರಾಷ್ಟ್ರಗೀತೆ ವಿಶಿಷ್ಟ ಮತ್ತು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ’ ಎಂದು ಗೃಹ ವ್ಯವಹಾರಗಳ ಸಚಿವಾಲಯ ತನ್ನ ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಿದೆ.

‘1950ರ ಜನವರಿ 24 ರಂದು ಭಾರತದ ಸಂವಿಧಾನ ಸಭೆಯ ಅಧ್ಯಕ್ಷರು 'ಜನ ಗಣ ಮನ' ಗೀತೆಯನ್ನು ಭಾರತದ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡರು’ ಎಂದು ಗೃಹ ಸಚಿವಾಲಯ ಕೋರ್ಟ್‌ಗೆ ಮನನ ಮಾಡಿಕೊಟ್ಟಿದೆ.

ರಾಷ್ಟ್ರಗೀತೆಯನ್ನು ನುಡಿಸುವ ಅಥವಾ ಹಾಡಬೇಕಾದ ವಿಧಾನ ಮತ್ತು ಸಂದರ್ಭಗಳಿಗೆ ಸಂಬಂಧಿಸಿದಂತೆ 'ಭಾರತದ ರಾಷ್ಟ್ರಗೀತೆಗೆ ಸಂಬಂಧಿಸಿದ ಆದೇಶಗಳನ್ನು' ಹೊರಡಿಸಲಾಗಿದೆ.

ರಾಷ್ಟ್ರಗೀತೆ ಹಾಡುವುದನ್ನು ತಡೆಯುವ ಅಥವಾ ಗಾಯನದಲ್ಲಿ ತೊಡಗಿರುವ ಯಾವುದೇ ಸಭೆಗೆ ಅಡ್ಡಿಪಡಿವುದನ್ನು ‘ರಾಷ್ಟ್ರೀಯ ಗೌರವ ಅಪಮಾನ ತಡೆ ಕಾಯಿದೆ–1971ರ’ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗಿದೆ.

ರಾಷ್ಟ್ರಗೀತೆ ‘ಜನ ಗಣ ಮನ’ ಮತ್ತು ‘ವಂದೇ ಮಾತರಂ’ಗೆ ಸಮಾನ ಸ್ಥಾನ ನೀಡಬೇಕು ಮತ್ತು ಇದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗೆ ಸಂಬಂಧಸಿದಂತೆ ಕೇಂದ್ರ ಸರ್ಕಾರ ಈ ಪ್ರತಿಕ್ರಿಯೆ ನೀಡಿದೆ.

ಆದರೆ, 'ವಂದೇ ಮಾತರಂ' ವಿಷಯದಲ್ಲಿ ಸರ್ಕಾರವು ದಂಡದ ನಿಬಂಧನೆಗಳನ್ನು ಮಾಡಿಲ್ಲ ಮತ್ತು ಅದನ್ನು ಯಾವ ಸಂದರ್ಭಗಳಲ್ಲಿ ಹಾಡಬಹುದು ಅಥವಾ ನುಡಿಸಬಹುದು ಎಂಬ ಬಗ್ಗೆ ಯಾವುದೇ ಸೂಚನೆಗಳನ್ನು ನೀಡಲಾಗಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಉಪಾಧ್ಯಾಯ ಅವರ ಹಿಂದಿನ ಅರ್ಜಿಯ ವೇಳೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಕೇಂದ್ರ ತನ್ನ ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಿದೆ.

ಭಾರತದ ಸಂವಿಧಾನದ 51 ಎ (ಎ) ವಿಧಿಯು ‘ವಂದೇ ಮಾತರಂ’ ಬಗ್ಗೆ ಉಲ್ಲೇಖಿಸಿಲ್ಲ. ಅದರಲ್ಲಿ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಮಾತ್ರ ಉಲ್ಲೇಖಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ 2017ರ ಜನವರಿ 17ರ ತನ್ನ ತೀರ್ಪಿನಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT