ನವದೆಹಲಿ: ಮಹದಾಯಿ ಯೋಜನೆಯ ಭಾಗವಾದ ಕಳಸಾ ನಾಲಾ ತಿರುವು ಯೋಜನೆಗೆ 26.92 ಹೆಕ್ಟೇರ್ ಮೀಸಲು ಅರಣ್ಯ ಬಳಕೆಗೆ ಪರಿಸರ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯದ ಪ್ರಾದೇಶಿಕ ಉನ್ನತಾಧಿಕಾರಿ ಸಮಿತಿಯ (ಆರ್‌ಇಸಿ) ಸಭೆ ಇದೇ 20ರಂದು ಮಧ್ಯಾಹ್ನ 2.30ಕ್ಕೆ ನಿಗದಿಯಾಗಿದೆ.
ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ 33.05 ಹೆಕ್ಟೇರ್ ಅರಣ್ಯ ಬಳಸಲು (ಜಾಕ್‌ವೆಲ್ ನಿರ್ಮಾಣ, ಪಂಪ್ ಹೌಸ್, ಎಲೆಕ್ಟ್ರಿಕಲ್ ಸಬ್ ಸ್ಟೇಷನ್, ಪೈಪ್‌ಲೈನ್‌ಗೆ) ಒಪ್ಪಿಗೆ ನೀಡುವಂತೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಸಚಿವಾಲಯಕ್ಕೆ 2022ರ ಡಿಸೆಂಬರ್ 30ರಂದು ಪ್ರಸ್ತಾವನೆ ಸಲ್ಲಿಸಿದ್ದರು. ಈ ವಿಷಯದ ಬಗ್ಗೆ ಇನ್ನಷ್ಟು ವಿವರಣೆ ನೀಡುವಂತೆ ಎಸಿಎಸ್ ಅವರಿಗೆ ಸಚಿವಾಲಯವು ಜನವರಿ 5ರಂದು ಸೂಚಿಸಿತ್ತು.
ಈ ಯೋಜನೆಗೆ ಅರಣ್ಯ ಪ್ರದೇಶದಲ್ಲಿ ಓವರ್‌ಹೆಡ್ ವಿದ್ಯುತ್ ಮಾರ್ಗಗಳನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಹೀಗಾಗಿ, ಕಡಿಮೆ ಅರಣ್ಯ ಭೂಮಿ ಬಳಕೆ ಹಾಗೂ ಮರ ಕಡಿಯುವುದನ್ನು ಕಡಿಮೆಗೊಳಿಸಲು ಭೂಗತ ವಿದ್ಯುತ್ ಮಾರ್ಗ ನಿರ್ಮಿಸುವ ಕುರಿತು ಯೋಜನಾ ಪ್ರಾಧಿಕಾರ ಪರಿಶೀಲನೆ ನಡೆಸಬೇಕು ಎಂದೂ ಹೇಳಿತ್ತು. ಬಳಿಕ ಸಚಿವಾಲಯದ ಉನ್ನತ ಅಧಿಕಾರಿಗಳ ತಂಡವು ಯೋಜನಾ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿತ್ತು.
ನಂತರ ಅರಣ್ಯ ಸಚಿವಾಲಯವು ಪರಿಷ್ಕೃತ ಪ್ರಸ್ತಾವವನ್ನು ಸಚಿವಾಲಯಕ್ಕೆ ಸಲ್ಲಿಸಿತ್ತು. ಅದರಲ್ಲಿ ಯೋಜನೆಗೆ ಅರಣ್ಯ ಬಳಕೆ ಪ್ರಮಾಣ 33 ಹೆಕ್ಟೇರ್‌ನಿಂದ 26.92 ಹೆಕ್ಟೇರ್‌ಗೆ ಇಳಿಸಲಾಗಿದೆ.
‘ಪರಿಸರ ಸಚಿವಾಲಯ ಕೇಳಿರುವ ಎಲ್ಲ ವಿವರಣೆಗಳಿಗೆ ಉತ್ತರ ನೀಡಲಾಗಿದೆ. ಇದೇ 20ರಂದು ನಡೆಯುವ ಸಭೆಯಲ್ಲಿ ಅರಣ್ಯ ಅನುಮೋದನೆ ಸಿಗುವ ವಿಶ್ವಾಸ ಇದೆ’ ಎಂದು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.
ಗೋವಾ: ಕಲಾಪಕ್ಕೆ ಪ್ರತಿಪಕ್ಷಗಳ ಅಡ್ಡಿ
ಪಣಜಿ: ಮಹದಾಯಿ ನದಿ ನೀರು ತಿರುವು ವಿವಾದ ಬಗ್ಗೆ ಸರ್ಕಾರದ ಹೇಳಿಕೆಗೆ ಪಟ್ಟುಹಿಡಿದ ಪ್ರತಿಪಕ್ಷಗಳು ಸೋಮವಾರ ಗೋವಾ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದವು.
ಅಡ್ಡಿಪಡಿಸಿದ ಸದಸ್ಯರನ್ನು ಸ್ಪೀಕರ್ ಸೂಚನೆಯಂತೆ ಮಾರ್ಷಲ್‌ಗಳು ಹೊರಗೆ ಕರೆದೊಯ್ದರು. ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ಯುರಿ ಅಲೆಮಾವೋ ಅವರು ಸರ್ಕಾರದ ಹೇಳಿಕೆಗೆ ಒತ್ತಾಯಿಸಿದರು.
ಅಧಿವೇಶನದ ಮೊದಲ ದಿನ ಕಲಾಪ ಆರಂಭವಾಗುತ್ತಿದ್ದಂತೆಯೇ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಭಾಷಣ ಮಾಡಲು ಆರಂಭಿಸಿದರು. ಕಪ್ಪುಪಟ್ಟಿ ಧರಿಸಿದ್ದ ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಪಕ್ಷಗಳ ಸದಸ್ಯರು ಎದ್ದುನಿಂತು ಭಾಷಣಕ್ಕೆ ಅಡ್ಡಿಪಡಿಸಿ ಘೋಷಣೆ ಕೂಗಿದರು.
ಮಹದಾಯಿ ವಿಷಯದಲ್ಲಿ ಗೋವಾದ ಹಿತಾಸಕ್ತಿ ರಕ್ಷಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಕಳಸಾ– ಬಂಡೂರಿಯಲ್ಲಿ ಜಲಾಶಯವನ್ನು ನಿರ್ಮಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಇದು ಉಭಯ ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.