ನವದೆಹಲಿ: ಶಾಲೆಗಳಲ್ಲಿ ಹಿಜಾಬ್ ಧರಿಸುವ ಮೂಲಕ ವಿದ್ಯಾರ್ಥಿನಿಯರು ಯಾವುದೇ ಅಪರಾಧ ಎಸಗಿಲ್ಲ. ಆದರೂ ಅವರ ಶಿಕ್ಷಣ ಸೇರಿದಂತೆ ಎಲ್ಲ ಹಕ್ಕುಗಳನ್ನು ಕಸಿಯಲಾಗಿದೆ ಎಂದು ವಿದ್ಯಾರ್ಥಿಗಳ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.
ಹಿಜಾಬ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠದ ಎದುರು ವಾದ ಮಂಡಿಸಿದ ಹಿರಿಯ ವಕೀಲ ಯೂಸುಫ್ ಮುಚ್ಚಾಲ, ‘ಈ ವಿದ್ಯಾರ್ಥಿಗಳು ಏನು ಅಪರಾಧ ಎಸಗುತ್ತಿದ್ದಾರೆ. ಕೇವಲ ತಲೆಯ ಮೇಲೆ ಒಂದು ತುಂಡು ಬಟ್ಟೆ ಹಾಕಿಕೊಳ್ಳಲು ಅನುಮತಿ ಕೇಳಿದ್ದಕ್ಕೆ ಅವರಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಹಿಜಾಬ್ ಧರಿಸಿದವರನ್ನು ವಿಚಿತ್ರ ಎಂಬಂತೆ ನೋಡುವ ಬದಲು ಗೌರವದಿಂದ ಕಾಣಬೇಕು’ ಎಂದರು.
‘ಇಲ್ಲಿಯವರೆಗೆ ಅನೇಕ ವಿದ್ಯಾರ್ಥಿನಿಯರು ಯಾವುದೇ ಅಡೆತಡೆ ಇಲ್ಲದೆ ಶಾಲೆಗಳಲ್ಲಿ ಹಿಜಾಬ್ ಧರಿಸುತ್ತಿದ್ದರು’ ಎಂದ ಅವರು, ‘ಹೈಕೋರ್ಟ್ ಕುರಾನ್ ಅನ್ನು ಪರಿಗಣನೆಗೆ ತೆಗೆದುಕೊಂಡು ಹಿಜಾಬ್ ಒಂದು ಅಗತ್ಯ ಧಾರ್ಮಿಕ ಪದ್ಧತಿ ಹೌದೇ ಅಲ್ಲವೇ ಎಂಬುದನ್ನು ವಿಚಾರಣೆ ನಡೆಸಬೇಕಿತ್ತು’ ಎಂದರು.
ಈ ವೇಳೆ ಪೀಠವು, ಅರ್ಜಿದಾರರು ಇದೊಂದು ಅಗತ್ಯ ಧಾರ್ಮಿಕ ಪದ್ಧತಿ ಎಂದು ಸ್ಪಷ್ಟಪಡಿಸಿದ್ದರಿಂದ ಹೈಕೋರ್ಟ್‌ಗೆ ಆಯ್ಕೆ ಇರಲಿಲ್ಲ ಎಂದಿತು.
ಕೆ.ಎಸ್.ಪುಟ್ಟಸ್ವಾಮಿ ಪ್ರಕರಣದಲ್ಲಿ ಖಾಸಗಿತನದ ಹಕ್ಕಿನ ಕುರಿತು ಉಲ್ಲೇಖಿಸಿದ ವಕೀಲರು, ವಿದ್ಯಾರ್ಥಿಗಳ ಪ್ರಜ್ಞೆ, ಖಾಸಗಿತನ, ಗೌರವ ಹಾಗೂ ಶಿಕ್ಷಣದ ಹಕ್ಕಿನ ಉಲ್ಲಂಘನೆ ಆಗಿದೆ. ಏಕೆಂದರೆ, ಉಡುಪಿನ ಆಯ್ಕೆ ಕೂಡಾ ಖಾಸಗಿತನದ ಹಕ್ಕಿನ ಭಾಗ ಎಂದರು.
‘ಈ ಪ್ರಕರಣವನ್ನು ಜನರ ಸಂವೇದನೆಯನ್ನು ಜಾಗೃತಗೊಳಿಸುವ ದೃಷ್ಟಿಯಿಂದ ನೋಡಬೇಕಿದೆ. ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಪ್ರೋತ್ಸಾಹಿಸಬೇಕಿದೆ. ಟರ್ಬನ್ (ಪಗಡಿ) ಧರಿಸುವುದನ್ನು ಒಪ್ಪುವುದಾದರೆ, ಹಿಜಾಬ್‌ಗೆ ವಿರೋಧ ಏಕೆ. ಇಂತಹ ತಾರತಮ್ಯ ಏಕೆ. ಹಿಜಾಬ್ ಧರಿಸುವುದರಿಂದ ಶಾಂತಿ ಕದಡುವುದಿಲ್ಲ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.