ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಜಲ ವಿವಾದ | ಕೃಷ್ಣಾ ನೀರು ಕರ್ನಾಟಕ ಬಳಸುತ್ತಿಲ್ಲ: ತೆಲಂಗಾಣ

Last Updated 11 ಜನವರಿ 2023, 20:29 IST
ಅಕ್ಷರ ಗಾತ್ರ

ನವದೆಹಲಿ: 1976ರಲ್ಲಿ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ–1 ಹಂಚಿಕೆ ಮಾಡಿರುವ 173 ಟಿಎಂಸಿ ಅಡಿ ನೀರನ್ನು ಕರ್ನಾಟಕವು ಬಳಸಿಕೊಂಡಿಲ್ಲ. ಹೀಗಾಗಿ ನ್ಯಾಯಮಂಡಳಿ–2ಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಗೆಜೆಟ್‌ ಅಧಿಸೂಚನೆ ಹೊರಡಿಸುವ ಅಗತ್ಯ ಇಲ್ಲ ಎಂದು ಎಂದು ತೆಲಂಗಾಣವು ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.

ಕೃಷ್ಣಾ ಜಲವಿವಾದಕ್ಕೆ ಸಂಬಂಧಿಸಿದಂತೆ ಜಲಾನಯನ ಪ್ರದೇಶದ ರಾಜ್ಯಗಳಾದ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ವಿ ರಾಮಸುಬ್ರಮಣಿಯನ್ ಅವರ ಪೀಠವು ನಡೆಸಿತು. ನ್ಯಾಯಮಂಡಳಿಯ 2013ರ ಆದೇಶಕ್ಕೆ ಗೆಜೆಟ್‌ ಅಧಿಸೂಚನೆ ಹೊರಡಿಸಬೇಕು ಎಂಬುದು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ವಾದ. ಜಲಾನಯನ ಪ್ರದೇಶದ ಎಲ್ಲ ರಾಜ್ಯಗಳಿಗೆ ಹೊಸದಾಗಿ ನೀರಿನ ಹಂಚಿಕೆ ಮಾಡಬೇಕು ಎಂದು ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಅರ್ಜಿ ಸಲ್ಲಿಸಿವೆ.

ತೆಲಂಗಾಣ ರಾಜ್ಯದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಸ್‌.ವೈದ್ಯನಾಥನ್‌, ‘ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬರುವ ಮುನ್ನವೇ ನ್ಯಾಯಮಂಡಳಿ ಆದೇಶ ನೀಡಿತ್ತು. ಹೀಗಾಗಿ, ರಾಜ್ಯಕ್ಕೆ ನ್ಯಾಯಮಂಡಳಿ ಮುಂದೆ ಅಭಿಪ್ರಾಯ ಸಲ್ಲಿಸಲು ಆಗಿರಲಿಲ್ಲ. ನ್ಯಾಯಮಂಡಳಿ 2013ರಲ್ಲಿ ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು’ ಎಂದು ಮನವಿ ಮಾಡಿದರು. ಕೃಷ್ಣಾ ನದಿಯಲ್ಲಿನ 800 ಟಿಎಂಸಿ ಅಡಿ ನೀರಿನ ಪೈಕಿ ರಾಜ್ಯಕ್ಕೆ 90 ಟಿಎಂಸಿ ಅಡಿಯಷ್ಟೇ ನೀರು ಸಿಕ್ಕಿದೆ ಎಂದು ಗಮನ ಸೆಳೆದರು.

ಕೃಷ್ಣಾ ಜಲವಿವಾದ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಕರ್ನಾಟಕ ಸರ್ಕಾರವು ಮೂಲಸೌಕರ್ಯ ಕಲ್ಪಿಸಲು ₹13 ಸಾವಿರ ಕೋಟಿ ವೆಚ್ಚ ಮಾಡಿದೆ. ಕರ್ನಾಟಕವು ಅಕ್ಕಪಕ್ಕದ ರಾಜ್ಯಗಳ ಜತೆಗೆ ಹೆಚ್ಚು ವಿವಾದಗಳಲ್ಲಿ ಭಾಗಿಯಾಗಿದೆ. ಗಡಿ ವಿವಾದ, ಜಲ ವಿವಾದ ಹಾಗೂ ಎಲ್ಲ ಬಗೆಯ ವಿವಾದಗಳಿವೆ ಎಂದರು.

ಮಹಾರಾಷ್ಟ್ರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಶೇಖರ್‌ ನಫಾಡೆ, ‘ಕೇಂದ್ರ ಸರ್ಕಾರ ಶೀಘ್ರ ಗೆಜೆಟ್‌ ಅಧಿಸೂಚನೆ ಹೊರಡಿಸಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT