ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಸರ್ಕಾರದಿಂದ ₹130 ಕೋಟಿ ಬಾಕಿ: ಕೆಎಂಎಫ್‌ನಿಂದ ಹಾಲು ಪೂರೈಕೆ ಸ್ಥಗಿತ?

Last Updated 8 ನವೆಂಬರ್ 2021, 7:37 IST
ಅಕ್ಷರ ಗಾತ್ರ

ಅಮರಾವತಿ: ತ್ವರಿತಗತಿಯಲ್ಲಿ ಬಾಕಿ ಮೊತ್ತ ಪಾವತಿಸದಿದ್ದಲ್ಲಿ ಆಂಧ್ರಪ್ರದೇಶದ ಅಂಗನವಾಡಿಗಳಿಗೆ ನಿಗದಿಯಂತೆ ಹಾಲು ಪೂರೈಸಲಾಗದು ಎಂದು ಕರ್ನಾಟಕ ಹಾಲು ಒಕ್ಕೂಟವು (ಕೆಎಂಎಫ್‌) ತಿಳಿಸಿದೆ.

ಸದ್ಯ ಆಂಧ್ರ ಸರ್ಕಾರವು ₹ 130 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಹಾಲಿನ ದರವನ್ನು ಪರಿಷ್ಕರಿಸಿ ಲೀಟರಿಗೆ ₹ 5 ಏರಿದ್ದು, ಇದಕ್ಕೆ ಸಮ್ಮತಿ ನೀಡಬೇಕಾಗಿದೆ ಎಂದು ಒಕ್ಕೂಟ ತಿಳಿಸಿದೆ.

ಒಕ್ಕೂಟವು ಹಾಲು ಪೂರೈಕೆಯನ್ನು ಸ್ಥಗಿತಗೊಳಿಸಿದಲ್ಲಿ ಅಲ್ಲಿನ ಅಂಗನವಾಡಿಗಲ್ಲಿರುವ ಸುಮಾರು 20 ಲಕ್ಷ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ಆಂಧ್ರ ಸರ್ಕಾರದ ‘ಸಂಪೂರ್ಣ ಪೋಷಣಾ ಯೋಜನೆ’ಯಡಿ ಅಂಗನವಾಡಿಗಳ ಎಲ್ಲ ಮಕ್ಕಳಿಗೆ ಅಲ್ಲಿನ ಸರ್ಕಾರ ಹಾಲು ಪೂರೈಸಲು ಒತ್ತು ನೀಡಿದೆ.

ಆಧ್ರಪ್ರದೇಶ ಸರ್ಕಾರವು ಈ ಉದ್ದೇಶಕ್ಕಾಗಿ ಮಾಸಿಕ, ಒಕ್ಕೂಟದಿಂದ ‘ನಂದಿನಿ’ ಬ್ರಾಂಡ್‌ನ 110 ಲಕ್ಷ ಲೀಟರ್ ಹಾಲು ಖರೀದಿಸುತ್ತಿದೆ. ಆದರೆ, ನಾಲ್ಕು ತಿಂಗಳಿಂದ ಹಣ ಪಾವತಿಯಾಗಿಲ್ಲ. ಬಾಕಿ ₹ 130 ಕೋಟಿ ಆಗಿದೆ.

ಹಾಲು ಪೂರೈಕೆ ಸಂಬಂಧ ಒಕ್ಕೂಟ ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವೆ 2020ರ ಜೂನ್‌ ತಿಂಗಳಲ್ಲಿ ಒಪ್ಪಂದವಾಗಿತ್ತು. ಇದರ ಪ್ರಕಾರ, ವಾಸ್ತವ ದರಕ್ಕಿಂತ ಕಡಿಮೆ, ಅಂದರೆ ಲೀಟರ್‌ಗೆ ₹ 5ರಂತೆ ಪೂರೈಸುತ್ತಿತ್ತು. ಖರೀದಿ ದರ, ಇಂಧನ ದರ ಏರಿಕೆಯಿಂದಾಗಿ ಇದೇ ವರ್ಷದ ಫೆಬ್ರುವರಿಯಲ್ಲಿ ಲೀಟರ್‌ಗೆ ₹ 5 ಏರಿಸಲಾಗಿತ್ತು.

ದರ ಏರಿಕೆ ಕುರಿತು ಸಂಬಂಧಿತ ಅಧಿಕಾರಿಗಳು ಮೌಖಿಕ ಭರವಸೆ ನೀಡಿದ್ದರು. ಯೋಜನೆಯ ಉದ್ದೇಶದ ಕಾರಣಕ್ಕಾಗಿ ನಾವು ಹಾಲು ಪೂರೈಸುತ್ತಿದ್ದೆವು. ಬಾಕಿ ಪಾವತಿ ಕುರಿತು ಹಲವು ಬಾರಿ ಸಭೆ ನಡೆದಿದ್ದು, ಪತ್ರ ಬರೆದರೂ ಹಣ ನೀಡಿಲ್ಲ. ದರವನ್ನು ಲಿಖಿತವಾಗಿ ಪರಿಷ್ಕರಿಸಿಲ್ಲ ಎಂದಿರುವ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌, ಈ ಸಂಬಂಧ ಆಂಧ್ರದ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.

ಖರೀದಿ ದರ, ಸಂಸ್ಕರಣೆ ವೆಚ್ಚದ ಏರಿಕೆ, ಇಂಧನ ದರ ಏರಿಕೆಯ ಕಾರಣಗಳಿಂದಾಗಿ ಈಗ ಒಕ್ಕೂಟಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ. ಹೀಗಾಗಿ, ಹಾಲಿ ನಿಗದಿತ ದರದಲ್ಲಿ ಹಾಲು ಪೂರೈಸಲಾಗದು. ಆಂಧ್ರ ಸರ್ಕಾರದಿಂದ ಹಣ ಪಾವತಿ ನಿಯಮಿತವಾಗಿಲ್ಲ ಹಾಗೂ ವಿಳಂಬವಾಗುತ್ತಿದೆ ಎಂದೂ ಸತೀಶ್‌ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT