ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾಲಿನ್‌ ಹಣಿಯಲು ಅಣ್ಣ ಅಳಗಿರಿಯಿಂದ ಹೊಸ ಪಕ್ಷ ಸಾಧ್ಯತೆ: ಶಾ ಸೂತ್ರಧಾರ?

Last Updated 17 ನವೆಂಬರ್ 2020, 4:34 IST
ಅಕ್ಷರ ಗಾತ್ರ

ಚೆನ್ನೈ: ಡಿಎಂಕೆ ಸಂಸ್ಥಾಪಕ ದಿವಂಗತ ಮುತ್ತುವೆಲ್ ಕರುಣಾನಿಧಿ ಅವರ ಪುತ್ರ ಎಂ. ಕೆ. ಅಳಗಿರಿ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮ್ಮದೇ ಪ್ರತ್ಯೇಕ ಪಕ್ಷ ಸ್ಥಾಪಿಸುವ ಇರಾದೆಯಲ್ಲಿದ್ದಾರೆ ಎಂದು ವರದಿಯಾಗಿದೆ.

ತಮಿಳುನಾಡಿನಲ್ಲಿ 2021ರ ಮೇ ಹೊತ್ತಿಗೆ ವಿಧಾನಸಭೆ ಚುನಾವಣೆಗಳು ನಡೆಯುವ ಸಾಧ್ಯತೆಗಳಿವೆ. ಈ ಚುನಾವಣೆಯಲ್ಲಿ ಕರುಣಾನಿಧಿ ಅವರ ಕಿರಿಯ ಪುತ್ರ, ಅಳಗಿರಿ ಅವರ ಸೋದರರ ಎಂ.ಕೆ ಸ್ಟಾಲಿನ್‌ ಅವರು ಡಿಎಂಕೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯೂ ಹೌದು.

'ನಾನು ನನ್ನ ಬೆಂಬಲಿಗರೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ಪತ್ಯೇಕ ಪಕ್ಷ ಸ್ಥಾಪಿಸಬೇಕೇ ಅಥವಾ ಬೇರೆ ಯಾವುದಾದರೂ ಪಕ್ಷವನ್ನು ಬೆಂಬಲಿಸಬೇಕೆ ಎಂಬುದರ ಕುರಿತು ಚರ್ಚೆ ಮಾಡುತ್ತಿದ್ದೇವೆ. ಬಿಜೆಪಿ ಬೆಂಬಲಿಸುತ್ತೇನೆ ಎಂಬುದು ಕಟ್ಟು ಕತೆಗಳು. ಬಿಜೆಪಿಯಿಂದ ಯಾರೂ ನನ್ನೊಂದಿಗೆ ಮಾತನಾಡಿಲ್ಲ. ಗೃಹ ಸಚಿವರು ನನ್ನನ್ನು ಏಕೆ ಭೇಟಿಯಾಗುತ್ತಾರೆ?' ಎಂದು ಅಳಗಿರಿ ಹೇಳಿರುವುದಾಗಿ ಸುದ್ದಿ ಮಾಧ್ಯಮ ಎನ್‌ಡಿಟಿವಿ ವರದಿ ಪ್ರಕಟಿಸಿದೆ.

ಅಮಿತ್ ಶಾ ನವೆಂಬರ್ 21 ರಂದು ಚೆನ್ನೈಗೆ ಭೇಟಿ ನೀಡುವ ಸಾಧ್ಯತೆಗಳಿದ್ದು, ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಕುರಿತು ರಾಜ್ಯ ಬಿಜೆಪಿಗೆ ಅವರು ಮಾರ್ಗದರ್ಶನ ನೀಡುವ ಸಾಧ್ಯತೆಗಳಿವೆ. ಇದೇ ವೇಳೆಯಲ್ಲೇ ಅಳಗಿರಿ ಮತ್ತು ಶಾ ಭೇಟಿಯೂ ನಡೆಯುವ ನಿರೀಕ್ಷೆ ಇದೆ.

ಕರುಣಾನಿಧಿ ಅವರ ಅಂತ್ಯಕ್ರಿಯೆಯ ವೇಳೆ ಒಟ್ಟಿಗೆ ಕಾಣಿಸಿಕೊಂಡಿದ್ದ ಎಂಕೆ ಸ್ಟಾಲಿನ್‌ ಮತ್ತು ಎಂಕೆ ಅಳಗಿರಿ

'ಅಮಿತ್‌ ಶಾ ಮತ್ತು ಅಳಗಿರಿ ಅವರ ಭೇಟಿಯ ಬಗ್ಗೆ ಪಕ್ಷ ಏನೂ ತಲೆಕೆಡಿಸಿಕೊಂಡಿಲ್ಲ,' ಎಂದು ಡಿಎಂಕೆ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

'ಬಿಜೆಪಿ ಮತ್ತು ಅಳಗಿರಿ ನಡುವೆ ಮಾತುಕತೆಗಳಾಗಿವೆ. ಬಹಳ ದಿನಗಳಿಂದ ಅದು ನಡೆಯುತ್ತಿದೆ. ಪಕ್ಷದಲ್ಲಿ ಹಿರಿಯ ಸೋದರನನ್ನೇ ಬದಿಗೊತ್ತಿದ ಸ್ಟಾಲಿನ್‌ಗೆ ಇದು ಸರಿಯಾದ ತಿರುಗೇಟಾಗಲಿದೆ. ಮತ್ತು ಅಳಗಿರಿ ಅವರಿಗೆ ಇದೊಂದು ಉತ್ತಮ ಅವಕಾಶ. ಇದೇ, ಕೊನೆಯ ಅವಕಾಶವೂ ಇರಬಹುದು. ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಏನಾದರೂ ಗೆದ್ದರೆ ಅಳಗಿರಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ' ಎಂದು ಮೂಲಗಳ ಮಾಹಿತಿ ಉಲ್ಲೇಖಿಸಿ 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ವರದಿಗಳ ಪ್ರಕಾರ ಅಳಗಿರಿ ಅವರ ಹೊಸ ಪಕ್ಷದ ಹೆಸರು 'ಕಲೈನರ್‌ ಡಿಎಂಕೆ' ಅಥವಾ 'ಕೆಡಿಎಂಕೆ' ಆಗಿರಲಿದೆ ಎಂದು ಹೇಳಲಾಗಿದೆ.

ಡಿಎಂಕೆ ಸಂಸ್ಥಾಪಕ ಕರುಣಾನಿಧಿ ಅವರನ್ನು ತಮಿಳುನಾಡಿನಲ್ಲಿ 'ಕಲೈನರ್‌' ಎಂದು ಕರೆಯಲಾಗುತ್ತಿತ್ತು. ಕಲೈನರ್‌ ಎಂದರೆ 'ಕಲಾವಿದ, ಕಲಾಕಾರ' ಎಂದು ಅರ್ಥ.

'ಶಾ ಚೆನ್ನೈ ಭೇಟಿಯಲ್ಲಿ ಯಾವುದೇ ಬದಲಾವಣೆಗಳಾಗದೇ ಹೋದರೆ, ಅಳಗಿರಿ ಅವರು ತಮ್ಮ 100-200 ಆಪ್ತರ ಸಮ್ಮುಖದಲ್ಲಿ ಮಧುರೈನಲ್ಲಿ ಹೊಸ ಪಕ್ಷವನ್ನು ಘೋಷಿಸುವ ಸಾಧ್ಯತೆಗಳಿವೆ. ಅಲ್ಲದೇ, ಮರುದಿನವೇ ಅಳಗಿರಿ ಅವರು ಶಾ ಅವರನ್ನು ಭೇಟಿಯಾಗಬಹುದು,' ಎಂದು ವರದಿಯಾಗಿದೆ.

ಡಿಎಂಕೆಯೊಳಗಿನ ಸೋದರರ ವೈರತ್ವ ಎರಡು ದಶಕಗಳಿಗೂ ಹಳೆಯದ್ದು. ಕರುಣಾನಿಧಿ ಅವರು ಸ್ಟಾಲಿನ್‌ ಅವರನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಪಕ್ಷದಲ್ಲಿ ಅವರಿಗೆ ಪ್ರಾಮುಖ್ಯತೆ ಕಲ್ಪಿಸಿದ್ದು, ಉಪ ಮುಖ್ಯಮಂತ್ರಿ ಸ್ಥಾನ ನೀಡಲು ನಿರ್ಧರಿಸಿದ್ದು ಈ ವೈರತ್ವಕ್ಕೆ ಮುನ್ನಡಿ ಬರೆದಿತ್ತು.

ಸ್ಟಾಲಿನ್‌, ಡಿಎಂಕೆಯ ಯುವ ಘಟಕವನ್ನು ಹಲವು ವರ್ಷಗಳ ಕಾಲ ಮುನ್ನಡೆಸಿದ್ದರು. ನಂತರ ಅವರನ್ನು ಪಕ್ಷದ ಖಜಾಂಚಿಯಾಗಿ ಆಯ್ಕೆ ಮಾಡಲಾಗಿತ್ತು. ಕರುಣಾನಿಧಿ ಅವರ ಆರೋಗ್ಯ ಹದಗೆಟ್ಟ ನಂತರ ಅವರಿಗೆ ಕಾರ್ಯಕಾರಿ ಅಧ್ಯಕ್ಷ ಹುದ್ದೆ ವಹಿಸಲಾಯಿತು. ಪಕ್ಷದ ವರಿಷ್ಠರಾಗಿದ್ದ ಕರುಣಾನಿಧಿ ಅವರ ನಿಧನಾ ನಂತರ ಸ್ಟಾಲಿನ್‌ ಪಕ್ಷದ ಅಧ್ಯಕ್ಷರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT