ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ರಾಜಭವನಕ್ಕೆ ಬಿಜೆಪಿ ನಾಯಕರ ನೇಮಕ ಪ್ರಶ್ನಿಸಿದ್ದ ಐಎಎಸ್ ಅಧಿಕಾರಿ ಎತ್ತಂಗಡಿ

Last Updated 18 ಫೆಬ್ರುವರಿ 2022, 15:44 IST
ಅಕ್ಷರ ಗಾತ್ರ

ತಿರುವನಂತಪುರಂ: ಕೇರಳದಲ್ಲಿ ಬಿಜೆಪಿ ಪದಾಧಿಕಾರಿಯೊಬ್ಬರನ್ನು ರಾಜ್ಯಪಾಲರ ಆಪ್ತ ಸಹಾಯಕರನ್ನಾಗಿ ನೇಮಕ ಮಾಡಿರುವುದನ್ನು ಆಕ್ಷೇಪಿಸಿ ಪತ್ರ ಬರೆದಿದ್ದ ಐಎಎಸ್‌ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಇದರ ಹಿಂದೆಯೇ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಬೇಕಿದ್ದ ಭಾಷಣಕ್ಕೆ ರಾಜ್ಯಪಾಲ ಆರೀಫ್‌ ಮೊಹಮ್ಮದ್‌ ಖಾನ್‌ ಅವರು ಅಂಕಿತ ಹಾಕಿದ್ದಾರೆ.

ಬಿಜೆಪಿ ನಾಯಕರ ನೇಮಕವನ್ನು ಆಕ್ಷೇಪಿಸಿ ಸಾಮಾನ್ಯ ಆಡಳಿತ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಜ್ಯೋತಿಲಾಲ್‌ ಅವರು ರಾಜಭವನಕ್ಕೆ ಪತ್ರ ಬರೆದಿದ್ದರು. ಈ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯಪಾಲರು ಪಟ್ಟುಹಿಡಿದಿದ್ದಾರೆ ಎಂಬ ವರದಿಗಳಿದ್ದವು.

ಈ ಬೆಳವಣಿಗೆ ಕುರಿತಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರೂ ರಾಜ್ಯಪಾಲರ ಜೊತೆಗೆ ಚರ್ಚಿಸಿದ್ದರು. ಇದರ ಬೆನ್ನಲ್ಲೇ ಜ್ಯೋತಿಲಾಲ್‌ ಅವರನ್ನು ಹುದ್ದೆಯಿಂದ ತೆರವುಗೊಳಿಸಲಾಗಿದೆ. ಇದಾದ ಬಳಿಕವೇ ಜಂಟಿ ಅಧಿವೇಶನ ಉದ್ದೇಶಿಸಿ ತಾವು ಮಾಡಬೇಕಿದ್ದ ಭಾಷಣಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಯಾಗಿದ್ದ ಹರಿ ಎಸ್.ಕರ್ತಾ ಅವರನ್ನು ರಾಜ್ಯಪಾಲರ ಆಪ್ತ ಸಹಾಯಕನಾಗಿ ನೇಮಿಸಲಾಗಿತ್ತು. ಇದಕ್ಕೆ ಆಕ್ಷೇಪಿಸಿ ಐಎಎಸ್‌ ಅಧಿಕಾರಿ ಪತ್ರ ಬರೆದಿದ್ದರು. ರಾಜಕೀಯ ಹಿನ್ನೆಲೆಯವರನ್ನು ರಾಜಭವನದಲ್ಲಿ ಸಿಬ್ಬಂದಿಯಾಗಿ ನೇಮಿಸಿರುವ ನಿದರ್ಶನ ಇಲ್ಲ ಎಂದಿದ್ದರು.

ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ್ದ ರಾಜ್ಯಪಾಲರು, ‘ಮಂತ್ರಿಗಳು ರಾಜಕೀಯ ಹಿನ್ನೆಲೆಯವರನ್ನೇ ಆಪ್ತ ಸಿಬ್ಬಂದಿಯಾಗಿ ನೇಮಕ ಮಾಡಿಕೊಳ್ಳಲಿದ್ದು, ಅವರಿಗೆ ಜೀವನಪೂರ್ತಿ ಪಿಂಚಣಿ ನೀಡುವುದಿಲ್ಲವೇ’ ಎಂದು ಪ್ರಶ್ನಿಸಿದ್ದರು.

ಈ ನಡುವೆ, ವಿರೋಧಪಕ್ಷದ ನಾಯಕ ವಿ.ಡಿ.ಸತೀಶನ್‌ ಅವರು, ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಇರುವ ಆತ್ಮೀಯ ಒಡನಾಟವನ್ನು ಮುಚ್ಚಿಡಲು ಇದೊಂದು ಗಿಮಿಕ್‌ ಅಷ್ಟೇ ಎಂದು ವ್ಯಂಗ್ಯವಾಡಿದ್ದರು. ವಿಶ್ವವಿದ್ಯಾಲಯಗಳಿಗೆ ನೇಮಕ ಕುರಿತಂತೆ ರಾಜ್ಯಪಾಲರು ಸರ್ಕಾರದ ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜಕೀಯ ಹಿನ್ನೆಲೆಯವರನ್ನು ರಾಜಭವನಕ್ಕೆ ನೇಮಿಸಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT