ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನಕ್ಕೆ ರಕ್ಷಣೆ ನೀಡಿದ್ದ ಕೇಶವಾನಂದ ಭಾರತಿ ಪ್ರಕರಣ

Last Updated 6 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಕೇರಳದ ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ ನಿಧನರಾಗಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಅವರು ಹೂಡಿದ್ದ ದಾವೆಯು ‘ಕೇಶವಾನಂದ ಭಾರತಿ ವರ್ಸಸ್ ಕೇರಳ ಸರ್ಕಾರ’ ಪ್ರಕರಣ ಎಂದೇ ಖ್ಯಾತವಾಗಿದೆ. ಪ್ರಜಾಸತ್ತಾತ್ಮಕ ದೇಶವೊಂದರ ಭವಿಷ್ಯಕ್ಕೆ ಈ ಪ್ರಕರಣ ಒಂದು ಸ್ಪಷ್ಟ ಚೌಕಟ್ಟನ್ನು ಒದಗಿಸಿತು.

‘ಸಂವಿಧಾನದ ಮೂಲ ರಚನೆಯನ್ನು ಸಂಸತ್ತು ಬದಲಾಯಿಸಲು ಸಾಧ್ಯವಿಲ್ಲ’ ಎಂಬ ಐತಿಹಾಸಿಕ ತೀರ್ಪನ್ನು ಕೇಶವಾನಂದ ಭಾರತಿ ಪ್ರಕರಣದಲ್ಲಿ (1973) ಸುಪ್ರೀಂ ಕೋರ್ಟ್ ನೀಡಿತು. 13 ನ್ಯಾಯಮೂರ್ತಿಗಳಿದ್ದ ಗರಿಷ್ಠ ಸಾಮರ್ಥ್ಯ ಪೀಠವು 7:6ರ ಅನುಪಾತದಲ್ಲಿ ತೀರ್ಪು ಪ್ರಕಟಿಸಿತು.ಸಂವಿಧಾನದ 368ನೇ ವಿಧಿ ಅನ್ವಯ ಭಾಗ 3ರಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳನ್ನು ಒಳಗೊಂಡಂತೆ ಸಂವಿಧಾನದ ಯಾವುದೇ ಭಾಗವನ್ನು ಅಗತ್ಯಕ್ಕೆ ಅನುಗುಣವಾಗಿ ಸಂಸತ್ತು ತಿದ್ದುಪಡಿ ಮಾಡಬಹುದು ಎಂಬ ಹಿಂದಿನ ಆದೇಶವನ್ನು ಈ ತೀರ್ಪು ಕಿತ್ತುಹಾಕಿತು.

ಮೈಲಿಗಲ್ಲು ಎಂದು ಗುರುತಿಸಲಾಗಿರುವ ಈ ತೀರ್ಪು, ಸಂವಿಧಾನದ ಮೂಲಭೂತ ರಚನೆಗೆ ಅಡ್ಡಿಯಾಗಬಲ್ಲ ಯಾವುದೇ ಸಾಂವಿಧಾನಿಕ ತಿದ್ದುಪಡಿಯನ್ನು ಪರಿಶೀಲಿಸುವ ಅಧಿಕಾರವನ್ನು ಸುಪ್ರೀಂ ಕೋರ್ಟ್‌ಗೆ ನೀಡಿತು. ಹೀಗಾಗಿ ಸಂಸತ್ತು ಅನುಮೋದಿಸುವ ಯಾವುದೇ ಕಾನೂನು ಇದನ್ನು ದಾಟಿಕೊಂಡೇ ಮುಂದೆ ಹೋಗಬೇಕಿದೆ.ಚುನಾಯಿತ ಪ್ರತಿನಿಧಿಗಳ ದಬ್ಬಾಳಿಕೆಯಿಂದ ದೇಶವನ್ನು ರಕ್ಷಿಸಲು ಮತ್ತು ಆ ಮೂಲಕ ಸಂವಿಧಾನದ ಸಾರ್ವಭೌಮತೆಯನ್ನು ಎತ್ತಿಹಿಡಿಯಲು ಸಂಸತ್ತಿಗೆ ಎಳೆದ ‘ಲಕ್ಷ್ಮಣ ರೇಖೆ’ ಎಂದೇ ಪ್ರಕರಣವನ್ನು ಗುರುತಿಸಲಾಗುತ್ತದೆ. ಪರಿಣಾಮವಾಗಿ, ಸಂಸತ್ ಪ್ರತಿನಿಧಿಗಳಿಗೆ ಸಂವಿಧಾನವನ್ನು ಪುನರ್ ‌ರಚಿಸುವ ಅಧಿಕಾರ ದೊರೆಯದಾಯಿತು.

ಸಾಂವಿಧಾನಿಕತೆ ಹಾಗೂ ಪ್ರಜಾಸತ್ತಾತ್ಮಕ ಅಧಿಕಾರ ಕುರಿತ ಸ್ಪಷ್ಟ ವ್ಯಾಖ್ಯಾನ ಮಾಡಲು ಸುದೀರ್ಘ ಸಮಯ ಹಿಡಿಯಿತು.ಪೀಠದಲ್ಲಿದ್ದ 13 ನ್ಯಾಯಮೂರ್ತಿಗಳು 68 ದಿನ ಕಲಾಪ ನಡೆಸಿದರು. ಈ ವೇಳೆ 11 ಮಂದಿ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಆದರೆ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯಾಗಬಾರದು ಎಂಬುದು ಬಹುತೇಕ ನ್ಯಾಯಮೂರ್ತಿಗಳ ಒತ್ತಾಸೆಯಾಗಿತ್ತು.

ಅಂದಿನ ಮುಖ್ಯ ನ್ಯಾಯಮೂರ್ತಿ ಎಸ್.ಎಂ. ಸಿಕ್ರಿ, ನ್ಯಾಯಮೂರ್ತಿಗಳಾದ ಕೆ.ಎಸ್. ಹೆಗ್ಡೆ, ಎ.ಕೆ. ಮುಖರ್ಜಿ, ಜೆ.ಎಂ. ಶೇಲಾಟ್, ಎ.ಎನ್. ಗ್ರೋವರ್, ಪಿ. ಜಗನ್‌ಮೋಹನ್ ರೆಡ್ಡಿ ಮತ್ತು ಎಚ್.ಆರ್. ಖನ್ನಾ ಅವರ ನಿಲುವು ಒಂದೇ ಆಗಿತ್ತು. ಆದರೆ ನ್ಯಾಯಮೂರ್ತಿಗಳಾದ ಕೆ.ಕೆ. ಮ್ಯಾಥ್ಯೂಸ್, ಎಂ.ಬಿ. ಬೇಗ್, ಎಸ್.ಎನ್. ದ್ವಿವೇದಿ, ವೈ.ವಿ. ಚಂದ್ರಚೂಡ್ ಅವರು ಭಿನ್ನ ನಿಲುವು ತಳೆದಿದ್ದರು.

ಮೂಲ ರಚನೆಯನ್ನು ಯಾರೂ ಮುಟ್ಟುವಂತಿಲ್ಲ. ಅದಕ್ಕೆ ತಿದ್ದುಪಡಿಗಳಿಂದ ರಕ್ಷಣೆಯಿದೆ. ಈ ಪ್ರಕರಣ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರನ್ನು ಎಷ್ಟರ ಮಟ್ಟಿಗೆ ಕೆರಳಿಸಿತು ಎಂದರೆ, ನ್ಯಾಯಮೂರ್ತಿ ಸಿಕ್ರಿ ಅವರ ಉತ್ತರಾಧಿಕಾರಿಯನ್ನು ತಕ್ಷಣಕ್ಕೆ ಹೆಸರಿಸದೇ ವಿಳಂಬ ಧೋರಣೆ ಅನುಸರಿಸಲಾಯಿತು. ಹಿರಿಯ ನ್ಯಾಯಮೂರ್ತಿಗಳನ್ನು ಈ ಹುದ್ದೆಗೆ ಪರಿಗಣಿಸುವ ಪರಿಪಾಟವನ್ನು ಬದಿಗೆ ಸರಿಸಿ, ನ್ಯಾಯಮೂರ್ತಿ ಎ.ಎನ್. ರಾಯ್ ಅವರನ್ನು ಹೆಸರಿಸಲಾಯಿತು. ಪ್ರತಿಭಟನಾರ್ಥವಾಗಿ ಮೂವರು ಹಿರಿಯ ನ್ಯಾಯಮೂರ್ತಿಗಳ ರಾಜೀನಾಮೆಗೂ ಇದು ಕಾರಣವಾಯಿತು.

ಈ ಪ್ರಕರಣದಿಂದ ಪ್ರಾರಂಭವಾದ ನ್ಯಾಯಾಂಗದ ಜತೆಗಿನ ಸರ್ಕಾರದ ಸಂಘರ್ಷ, ಅಂತಿಮವಾಗಿ ಜೂನ್ 25, 1975ರಂದು ರಾಷ್ಟ್ರೀಯ ತುರ್ತುಸ್ಥಿತಿ ಹೇರಲು ಕಾರಣವಾಯಿತು. ಇದು ನಮ್ಮ ಪ್ರಜಾಪ್ರಭುತ್ವದಲ್ಲಿ ಕಪ್ಪುಚುಕ್ಕೆಯಾಗಿ 21 ತಿಂಗಳು ಮುಂದುವರಿಯಿತು.

ತುರ್ತು ಪರಿಸ್ಥಿತಿಯ ಸಮಯದಲ್ಲಿ ತೀರ್ಪು ಪರಿಶೀಲಿಸುವ ಯತ್ನ ನಡೆಯಿತು. ಅಂದಿನ ಮುಖ್ಯ ನ್ಯಾಯಮೂರ್ತಿ ನೇತೃತ್ವದ 13 ನ್ಯಾಯಮೂರ್ತಿಗಳ ಪೀಠವು 2 ವರ್ಷ ವಿಚಾರಣೆ ನಡೆಸಿ, ಕೊನೆಗೆ ಪ್ರಕರಣವನ್ನು ವಜಾಗೊಳಿಸಿತು.

ಸಂವಿಧಾನ ಕಾಯ್ದೆ 1976ರ ಮೂಲಕ (42ನೇ ತಿದ್ದುಪಡಿ)ಸಂವಿಧಾನ ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರ ಸೇರಿದಂತೆ ದೊಡ್ಡ ಬದಲಾವಣೆಗಳನ್ನು ತರಲಾಯಿತು. ಆದರೆ, ‘ಮಿನರ್ವ ಮಿಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ಸಂವಿಧಾನದ ಮೇಲೆ ಸಂಸತ್ತಿನ ಪ್ರಾಬಲ್ಯವನ್ನು ಸ್ಥಾಪಿಸುವ ಪ್ರಯತ್ನಗಳನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತು.

ಅಂದಿನಿಂದ ಇಂದಿನವರೆಗೂ ಹಲವಾರು ತೀರ್ಪುಗಳಲ್ಲಿ ಕೇಶವಾನಂದ ಪ್ರಕರಣದ ಉಲ್ಲೇಖ ಆಗುತ್ತಿರುವುದನ್ನು ಕಾಣಬಹುದು. ಗಮನಿಸಬೇಕಾದ ಪ್ರಕರಣವೆಂದರೆ, 1992ರಲ್ಲಿ ಬಾಬರಿ ಮಸೀದಿ ಧ್ವಂಸ ಘಟನೆ ಬಳಿಕ ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿದ್ದ ಬಿಜೆಪಿ ಸರ್ಕಾರಗಳನ್ನು ವಜಾಗೊಳಿಸಲಾಯಿತು. ಸಂವಿಧಾನದ ಮೂಲ ಆಶಯಗಳಾದ ಜಾತ್ಯತೀತತೆ ತತ್ವಗಳನ್ನು ಪಾಲಿಸುವ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ತೀರ್ಮಾನವನ್ನು ಕೋರ್ಟ್ ಎತ್ತಿಹಿಡಿಯಿತು.

ಏನಿದು ಪ್ರಕರಣ?
1970ರಲ್ಲಿ ಕೇರಳ ಸರ್ಕಾರವು ಭೂಸುಧಾರಣೆ ಕಾಯ್ದೆಯ ಹೆಸರಲ್ಲಿ ಎಡನೀರು ಮಠಕ್ಕೆ ಸೇರಿದ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಿ, ನೋಟಿಸ್‌ ಜಾರಿ ಮಾಡಿತ್ತು. ಎಡನೀರು ಶ್ರೀಗಳು ಸುಪ್ರೀಂ ಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿದ್ದರು.

ಆಸ್ತಿ ವ್ಯಾಜ್ಯ ವಿಚಾರವಾಗಿ ಶುರುವಾದ ಈ ಪ್ರಕರಣ, ವಿವಿಧ ತಿರುವುಗಳನ್ನು ಪಡೆದು ಕೊನೆಗೆ ಸಂವಿಧಾನದ ಮೂಲ ಆಶಯಗಳನ್ನು ರಕ್ಷಿಸುವ ತೀರ್ಪು ಎಂದು ಪರಿಗಣಿತವಾಯಿತು. ಇದು ಈಗಲೂ ಕಾನೂನು ವಿದ್ಯಾರ್ಥಿಗಳ ಅಧ್ಯಯನ ವಸ್ತುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT