ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ಕುರಿತ ಸಿಬಲ್ ಹೇಳಿಕೆ: ಪ್ರತಿಪಕ್ಷ ನಾಯಕರ ವಿರುದ್ಧ ಕಿರಣ್ ರಿಜಿಜು ಕಿಡಿ

Last Updated 8 ಆಗಸ್ಟ್ 2022, 13:34 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್ ಕುರಿತು ರಾಜ್ಯಸಭಾ ಸದಸ್ಯ, ಹಿರಿಯ ವಕೀಲ ಕಪಿಲ್ ಸಿಬಲ್ ನೀಡಿರುವ ಹೇಳಿಕೆಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿಬಲ್ ಅವರ ಹೇಳಿಕೆಯಿಂದ ಇಡೀ ದೇಶಕ್ಕೇ ಖೇದವಾಗಿದೆ. ತೀರ್ಪುಗಳು ತಮ್ಮ ಪರ ಬಾರದಿದ್ದಾಗ ಪ್ರತಿಪಕ್ಷಗಳ ನಾಯಕರು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧವೇ ದಾಳಿ ಆರಂಭಿಸುತ್ತಾರೆ ಎಂದು ರಿಜಿಜು ಸೋಮವಾರ ಹೇಳಿದ್ದಾರೆ.

ನ್ಯಾಯಾಲಯಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳು ತಮ್ಮ ಅಥವಾ ತಮ್ಮ ಕೆಲಸದ ಪರವಾಗಿಯೇ ಇರಬೇಕು ಎಂಬ ರೀತಿಯ ಹೇಳಿಕೆಗಳನ್ನು ಸಿಬಲ್ ಮತ್ತು ಕೆಲವು ಕಾಂಗ್ರೆಸ್ ನಾಯಕರು ನೀಡಿದ್ದಾರೆ. ಇದು ಅವರ ದ್ರೋಹದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ರಿಜಿಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿವಿಧ ಸೆಕ್ಷನ್‌ಗಳ ಅಡಿ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ನೀಡಲಾಗಿರುವ ಅಧಿಕಾರಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 200ಕ್ಕೂ ಹೆಚ್ಚು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತಿರಸ್ಕರಿಸಿತ್ತು. ಇದು ಸೇರಿದಂತೆ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಕೆಲವು ತೀರ್ಪುಗಳ ಬಗ್ಗೆ ಉಲ್ಲೇಖಿಸಿ ಹೇಳಿಕೆ ನೀಡಿದ್ದ ಸಿಬಲ್, ಸುಪ್ರೀಂ ಕೋರ್ಟ್ ಮೇಲೆ ಯಾವುದೇ ಭರವಸೆ ಉಳಿದಿಲ್ಲ ಎಂದಿದ್ದರು. ಜತೆಗೆ, ಸೂಕ್ಷ್ಮ ಪ್ರಕರಣಗಳ ವಿಚಾರಣೆಯನ್ನು ಕೆಲವೇ ಜಡ್ಜ್‌ಗಳಿಗೆ ವಹಿಸಲಾಗುತ್ತಿದೆ ಎಂದೂ ದೂರಿದ್ದರು.

ಪಿಎಂಎಲ್‌ಎಗೆ ಸಂಬಂಧಿಸಿದ ತೀರ್ಪು ಉದಾಹರಿಸಿದ್ದ ಸಿಬಲ್, ಇಂಥ ಕಾನೂನುಗಳನ್ನು ಎತ್ತಿಹಿಡಿದಾಗ ಸುಪ್ರೀಂ ಕೋರ್ಟ್ ಮೇಲೆ ಹೇಗೆ ನಂಬಿಕೆ ಇರಿಸಲು ಸಾಧ್ಯ ಎಂದು ಪ್ರಶ್ನಿಸಿದ್ದರು.

ಸಿಬಲ್ ನೀಡಿರುವ ಹೇಳಿಕೆಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಆಲ್ ಇಂಡಿಯ ಬಾರ್‌ ಅಸೋಸಿಯೇಷನ್ ಸಹ ಖಂಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT