ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖಿಂಪುರ ಖೇರಿ ಪ್ರಕರಣ: 6 ಮಂದಿ ಶಂಕಿತರ ಚಿತ್ರ ಬಿಡುಗಡೆ ಮಾಡಿದ ಎಸ್‌ಐಟಿ

Last Updated 20 ಅಕ್ಟೋಬರ್ 2021, 2:23 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಲಖಿಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಆರು ಮಂದಿ ಶಂಕಿತ ಆರೋಪಿಗಳ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್‌ 3ರಂದು ರೈತರ ಮೇಲೆ ಎಸ್‌ಯುವಿ ಹರಿದು ನಾಲ್ಕು ಮಂದಿ ಸಾವಿಗೀಡಾಗಿದ್ದರು. ಬೆಂಕಿ ಹೊತ್ತಿಸಲಾದಅದೇ ಎಸ್‌ಯುವಿಯ ಬಳಿ ನಿಂತಿರುವ ಆರು ಜನರ ಚಿತ್ರ ಈಗ ಬಹಿರಂಗವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವವರ ವಿವರ ಬಹಿರಂಗ ಪಡಿಸುವುದಿಲ್ಲ ಹಾಗೂ ಮಾಹಿತಿದಾರರಿಗೆ ಸೂಕ್ತ ಬಹುಮಾನ ನೀಡಲಾಗುತ್ತದೆ ಎಂದು ಎಸ್‌ಐಟಿ ಹೇಳಿದೆ.

ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವಿಗೆ ಕಾರಣವಾದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಸರ್ಕಾರವು ಎಸ್‌ಐಟಿ ರೂಪಿಸಿದೆ. ಬಿಜೆಪಿ ಕಾರ್ಯಕರ್ತರನ್ನು ಥಳಿಸಿರುವಘಟನೆಗೆ ಸಂಬಂಧಿಸಿದ ಹಲವು ಚಿತ್ರಗಳು ಹಾಗೂ ವಿಡಿಯೊಗಳನ್ನು ಎಸ್ಐಟಿಸಂಗ್ರಹಿಸಿದ್ದು, ಬಿಡುಗಡೆ ಮಾಡಿರುವ ಫೋಟೊದಲ್ಲಿ ಕಾಣುವ ಶಂಕಿತರನ್ನು ಗುರುತಿಸುವಂತೆ ಜನರಿಗೆ ಮನವಿ ಮಾಡಿದೆ.

ಬಿಜೆಪಿ ಕಾರ್ಯತರನ್ನು ಥಳಿಸಿದ ಘಟನೆಯ ಕುರಿತು ವಿಚಾರಣೆಗಾಗಿ ಎಸ್‌ಐಟಿ ಈಗಾಗಲೇ ಸುಮಾರು ಮೂವತ್ತಕ್ಕೂ ಹೆಚ್ಚು ರೈತರಿಗೆ ನೋಟಿಸ್‌ ನೀಡಿದೆ.

ಲಖಿಂಪುರ ಖೇರಿ ಪ್ರಕರಣವನ್ನು ಸುಪ್ರೀಂಕೋರ್ಟ್‌ ಇಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಈ ಘಟನೆಯಲ್ಲಿ ನಾಲ್ವರು ಕೃಷಿಕರು, ವಾಹನ ಚಾಲಕ ಮತ್ತು ಇಬ್ಬರು ಬಿಜೆಪಿ ಕಾರ್ಯಕರ್ತರು, ಸ್ಥಳೀಯ ಪತ್ರಕರ್ತ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು.

ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌, ಹಿಮಾ ಕೊಹ್ಲಿ ಅವರಿದ್ದ ಪೀಠವು, ಎಂಟು ಜನರ ‘ಕ್ರೂರ’ ಕೊಲೆ ಕೃತ್ಯದ ಕುರಿತಂತೆ ಉತ್ತರಪ್ರದೇಶ ಸರ್ಕಾರ ಯಾವುದೇ ಕ್ರಮಜರುಗಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿತ್ತು. ಇದರ ವಿಚಾರಣೆ ನಡೆಸುವುದಾಗಿ ಅ.8ರಂದು ಹೇಳಿತ್ತು.

ಹಿಂಸಾಚಾರ ಘಟನೆಗೆ ಸಂಬಂಧಿಸಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಸೇರಿದಂತೆ ಇದುವರೆಗೂ ಎಂಟು ಜನರನ್ನು ಬಂಧಿಸಲಾಗಿದೆ. ಘಟನೆ ಕುರಿತು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಇಬ್ಬರು ವಕೀಲರು ಪತ್ರ ಬರೆದಿದ್ದರು.

ಕೇಂದ್ರದ ನೂತನ ಕೃಷಿಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ವಿರುದ್ಧ ಪ್ರತಿಭಟಿಸುವಾಗ ಅ.3ರಂದು ಅವರ ಮೇಲೆ ವಾಹನವನ್ನು ಹರಿಸಲಾಗಿದ್ದು, ನಾಲ್ವರು ರೈತರು ಮೃತಪಟ್ಟಿದ್ದರು. ಬಳಿಕ ಕೋಪೋದ್ರಿಕ್ತ ಪ್ರತಿಭಟನಕಾರರು ಹಲ್ಲೆ ನಡೆಸಿದ್ದರಿಂದ ನಾಲ್ಕು ಮಂದಿ ಸಾವಿಗೀಡಾಗಿದ್ದರು.

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಸರ್ವೋಚ್ಛ ನ್ಯಾಯಾಲಯವು ಈ ಕಾಯ್ದೆಗಳನ್ನು ಜಾರಿಗೊಳಿಸದಂತೆ ಇದೇ ವರ್ಷದ ಜನವರಿಯಲ್ಲಿ ತಡೆಯಾಜ್ಞೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT