ಗುರುವಾರ , ಆಗಸ್ಟ್ 18, 2022
22 °C
ಕೇರಳ ಹೈಕೋರ್ಟ್‌ ವ್ಯಾಪ್ತಿಯಲ್ಲಿರುವ ಕೇಂದ್ರಾಡಳಿತ ಪ್ರದೇಶ

ಕರ್ನಾಟಕ ಹೈಕೋರ್ಟ್‌ ವ್ಯಾಪ್ತಿಗೆ ಲಕ್ಷದ್ವೀಪ ವರ್ಗಾವಣೆ ಪ್ರಸ್ತಾವ

ಪಿಟಿಐ Updated:

ಅಕ್ಷರ ಗಾತ್ರ : | |

ಕೊಚ್ಚಿ/ನವದೆಹಲಿ: ಲಕ್ಷದ್ವೀಪವನ್ನು ಕೇರಳ ಹೈಕೋರ್ಟ್‌ ವ್ಯಾಪ್ತಿಯಿಂದ ಕರ್ನಾಟಕ ಹೈಕೋರ್ಟ್‌ ವ್ಯಾಪ್ತಿಗೆ ವರ್ಗಾಯಿಸಲು ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಕೆ. ಪಟೇಲ್ ಅವರು ಪ್ರಸ್ತಾವ ಇರಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

ಆಡಳಿತಾಧಿಕಾರಿಯ ವಿವಿಧ ನಿರ್ಣಯಗಳ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ 23 ಅರ್ಜಿಗಳು ಸಲ್ಲಿಕೆಯಾಗಿವೆ. ಕೋವಿಡ್‌ ಮಾರ್ಗಸೂಚಿಯ ಬದಲಾವಣೆ, ಮೀನುಗಾರರ ಗುಡಿಸಲು ತೆರವು, ಗೂಂಡಾ ಕಾಯ್ದೆ ಜಾರಿ ಮತ್ತಿತರ ನಿರ್ಣಯಗಳ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳ ವಿಚಾರಣೆ ಪ್ರಗತಿಯಲ್ಲಿ ಇದೆ. ಇಂತಹ ಸಂದರ್ಭದಲ್ಲೇ ಲಕ್ಷದ್ವೀಪವನ್ನು ಕೇರಳ ಹೈಕೋರ್ಟ್‌ ವ್ಯಾಪ್ತಿಯಿಂದ, ಕರ್ನಾಟಕ ಹೈಕೋರ್ಟ್‌ ವ್ಯಾಪ್ತಿಗೆ ಬದಲಾಯಿಸುವ ಪ್ರಸ್ತಾವವನ್ನು ಆಡಳಿತಾಧಿಕಾರಿ ಇರಿಸಿದ್ದಾರೆ.

ಈ ಪ್ರಸ್ತಾವದ ಬಗ್ಗೆ ಮಾಹಿತಿ ಪಡೆಯಲು ಮಾಡಿದ ಕರೆಯನ್ನು ಲಕ್ಷದ್ವೀಪದ ಕಲೆಕ್ಟರ್‌ ಎಸ್‌.ಅಸ್ಕರ್ ಅಲಿ ಸ್ವೀಕರಿಸಿಲ್ಲ. ಇ-ಮೇಲ್‌ಗೂ ಪ್ರತಿಕ್ರಿಯೆ ನೀಡಿಲ್ಲ.

ಕೇಂದ್ರಾಡಳಿತ ಪ್ರದೇಶವನ್ನು ಒಂದು ಹೈಕೋರ್ಟ್‌ನ ವ್ಯಾಪ್ತಿಯಿಂದ ಬೇರೊಂದು ಹೈಕೋರ್ಟ್‌ನ ವ್ಯಾಪ್ತಿಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಸಂವಿಧಾನದ 241ನೇ ವಿಧಿಯಲ್ಲಿ ಸ್ಪಷ್ಟಪಡಿಸಲಾಗಿದೆ. ‘ಸಂಸತ್ತು, ಕೇಂದ್ರಾಡಳಿತ ಪ್ರದೇಶಕ್ಕೇ ಪ್ರತ್ಯೇಕ ಹೈಕೋರ್ಟ್‌ ಅನ್ನು ಘೋಷಿಸಬಹುದು ಅಥವಾ ಬೇರೆ ರಾಜ್ಯದ ಹೈಕೋರ್ಟ್‌ನ ವ್ಯಾಪ್ತಿಗೆ ಒಳಪಡಿಸಬಹುದು’ ಎಂದು ಈ ವಿಧಿ ಹೇಳುತ್ತದೆ. ‘ಯಾವುದೇ ಕೇಂದ್ರಾಡಳಿತ ಪ್ರದೇಶವನ್ನು ಒಂದು ರಾಜ್ಯದಿಂದ ಬೇರೊಂದು ರಾಜ್ಯದ ಹೈಕೋರ್ಟ್‌ನ ವ್ಯಾಪ್ತಿಗೆ ವರ್ಗಾಯಿಸುವ ಅಧಿಕಾರ ಸಂಸತ್ತಿಗೆ ಇದೆ’ ಎಂದು ಸಂವಿಧಾನದ 241ನೇ ವಿಧಿಯ 4ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ.

ಈ ಪ್ರಸ್ತಾವಕ್ಕೆ ಲಕ್ಷದ್ವೀಪದ ನಾಯಕರು ಮತ್ತು ಕಾನೂನು ತಜ್ಞರಿಂದ ಆಕ್ಷೇಪ ವ್ಯಕ್ತವಾಗಿದೆ.

‘ಕೇರಳ ಹೈಕೋರ್ಟ್‌ನ ಪೂರ್ಣ ಹೆಸರು ‘ಕೇರಳ ಮತ್ತು ಲಕ್ಷದ್ವೀಪ ಹೈಕೋರ್ಟ್‌’. ನಮ್ಮದು ಮಲಯಾಳ ಭಾಷೆ. ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದರೆ ಭಾಷೆಯ ಸಮಸ್ಯೆ ಎದುರಾಗುತ್ತದೆ’ ಎಂದು ಇಲ್ಲಿನ ಲಕ್ಷದ್ವೀಪದ ಲೋಕಸಭಾ ಸದಸ್ಯ ಮೊಹಮ್ಮದ್ ಫೈಜಲ್ ಕೆ.ಕೆ. ಅವರು ಹೇಳಿದ್ದಾರೆ.

‘ಕೇರಳ ಹೈಕೋರ್ಟ್‌ ಲಕ್ಷದ್ವೀಪದಿಂದ ಕೇವಲ 400 ಕಿ.ಮೀ.ದೂರದಲ್ಲಿದೆ. 1,000 ಕಿ.ಮೀ. ದೂರದಲ್ಲಿರುವ ಕರ್ನಾಟಕ ಹೈಕೋರ್ಟ್‌ಗೆ ಲಕ್ಷದ್ವೀಪದಿಂದ ನೇರ ಸಂಪರ್ಕವೂ ಇಲ್ಲ. ಅಂತರ ಮತ್ತು ಭಾಷೆಯ ಕಾರಣದಿಂದ ಲಕ್ಷದ್ವೀಪದ ಜನರಿಗೆ ನ್ಯಾಯವನ್ನು ನಿರಾಕರಿಸಿದಂತಾಗುತ್ತದೆ’ ಎಂದು ಲಕ್ಷದ್ವೀಪದ ಹೆಸರಾಂತ ವಕೀಲೆ ಸಿ.ಎನ್.ನೂರುಲ್ ಹಿದ್ಯಾ ಕಳವಳ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು