ಸೋಮವಾರ, ಮೇ 16, 2022
25 °C

ಆರೋಗ್ಯ ಏರುಪೇರು: ರಾಂಚಿಯಿಂದ ದೆಹಲಿಯ ಏಮ್ಸ್‌ಗೆ ಸ್ಥಳಾಂತರವಾಗಲಿದ್ದಾರೆ ಲಾಲು

ಪಿಟಿಐ Updated:

ಅಕ್ಷರ ಗಾತ್ರ : | |

Lalu Prasad Yadav

ರಾಂಚಿ: ಮೇವು ಹಗರಣದಲ್ಲಿ ಜೈಲುಪಾಲಾಗಿ ಸದ್ಯ ರಾಂಚಿಯ ಆರ್‌ಐಎಂಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಅವರನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘72 ವರ್ಷ ವಯಸ್ಸಿನ ಲಾಲು ಅವರು ಕಳೆದ ಎರಡು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶುಕ್ರವಾರ ಅವರಲ್ಲಿ ನ್ಯುಮೋನಿಯಾ ಕಾಣಿಸಿಕೊಂಡಿದೆ. ಅವರ ವಯಸ್ಸನ್ನು ಪರಿಗಣಿಸಿ, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ’ ಎಂದು ಆರ್‌ಐಎಂಸ್ ಆಸ್ಪತ್ರೆಯ ನಿರ್ದೇಶಕ ಡಾ. ಕಾಮೇಶ್ವರ್ ಪ್ರಸಾದ್ ತಿಳಿಸಿದ್ದಾರೆ.

‘ಲಾಲು ಅವರನ್ನು ಇಂದೇ (ಶನಿವಾರ) ಏಮ್ಸ್‌ಗೆ ಸ್ಥಳಾಂತರಿಸಲಾಗುವುದು. ಈ ಬಗ್ಗೆ ಈಗಾಗಲೇ ತಜ್ಞರ ಜತೆ ಮಾತುಕತೆ ನಡೆಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಅಧಿಕಾರಿಗಳು ಮತ್ತು ಲಾಲು ಕುಟುಂಬದವರು ಏರ್ ಆಂಬುಲೆನ್ಸ್‌ಗೆ ವ್ಯವಸ್ಥೆ ಮಾಡುತ್ತಿದ್ದಾರೆ. ಎಂಟು ಮಂದಿ ವೈದ್ಯರ ತಂಡವು ಲಾಲು ಅವರ ಆರೋಗ್ಯದ ತಪಾಸಣೆ ನಡೆಸುತ್ತಿದ್ದಾರೆ. ವೈದ್ಯರ ತಂಡದಿಂದ ವರದಿ ದೊರೆತ ಬೆನ್ನಲ್ಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಲಾಲು ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಬೇಕಿದ್ದರೆ ಜೈಲು ಅಧಿಕಾರಿಗಳು ಸಿಬಿಐ ಕೋರ್ಟ್‌ನಿಂದ ಅನುಮತಿ ಪಡೆಯಬೇಕಿದೆ ಎಂದೂ ಅವರು ತಿಳಿಸಿದ್ದಾರೆ.

ಲಾಲು ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಅವರ ಪತ್ನಿ ರಾಬ್ರಿ ದೇವಿ, ಮಗಳು ಮಿಸಾ ಭಾರ್ತಿ, ಪುತ್ರರಾದ ತೇಜ್ ಪ್ರತಾಪ್ ಹಾಗೂ ತೇಜಸ್ವಿ ಅವರು ಶುಕ್ರವಾರ ರಾತ್ರಿ ವಿಶೇಷ ವಿಮಾನದಲ್ಲಿ ರಾಂಚಿಗೆ ತೆರಳಿದ್ದರು. ಲಾಲು ಅವರನ್ನು ಭೇಟಿಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು