ಸೋಮವಾರ, ಏಪ್ರಿಲ್ 12, 2021
31 °C
ಅಹಮದಾಬಾದ್‌, ಸೂರತ್, ಮುಂಬೈ ತೊರೆಯುತ್ತಿರುವ ವಲಸೆ ಕಾರ್ಮಿಕರು

ಲಾಕ್‌ಡೌನ್ ಭೀತಿ: ಪ್ರಮುಖ ನಗರಗಳನ್ನು ತೊರೆಯುತ್ತಿರುವ ವಲಸೆ ಕಾರ್ಮಿಕರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್: ಗುಜರಾತ್‌ನಲ್ಲಿ ಮತ್ತೆ ಲಾಕ್‌ಡೌನ್ ಹೇರಬಹುದು ಎಂಬ ಭೀತಿಯಿಂದ ವಲಸೆ ಕಾರ್ಮಿಕರು ರಾಜ್ಯದಿಂದ ಹೊರನಡೆಯುತ್ತಿದ್ದಾರೆ. ಅಹಮದಾಬಾದ್ ಮತ್ತು ಸೂರತ್‌ನಲ್ಲಿ ನೆಲೆಸಿರುವ ಉತ್ತರ ಪ್ರದೇಶ ಮತ್ತು ಬಿಹಾರದ ವಲಸೆ ಕಾರ್ಮಿಕರು, ತಮ್ಮ ಊರುಗಳಿಗೆ ವಾಪಸಾಗುತ್ತಿದ್ದಾರೆ.

ಎರಡೂ ನಗರಗಳಲ್ಲಿ ಕೋವಿಡ್‌ನ ಹೊಸ ಪ್ರಕರಣಗಳ ಸಂಖ್ಯೆ ತೀವ್ರಮಟ್ಟದಲ್ಲಿ ಏರಿಕೆಯಾದ ಕಾರಣ, ಲಾಕ್‌ಡೌನ್ ಏಕೆ ಹೇರಬಾರದು ಎಂದು ಗುಜರಾತ್ ಹೈಕೋರ್ಟ್ ಈಚೆಗೆ ಸರ್ಕಾರವನ್ನು ಕೇಳಿತ್ತು. ಇದರ ಬೆನ್ನಲ್ಲೇ ಲಾಕ್‌ಡೌನ್ ಹೇರಿಕೆಯಾಗುವ ಭೀತಿ ಎದುರಾಗಿದೆ. ಒಮ್ಮೆ ಲಾಕ್‌ಡೌನ್ ಜಾರಿಯಾದರೆ, ಪ್ರಯಾಣವನ್ನು ನಿರ್ಬಂಧಿಸಲಾಗುತ್ತದೆ. ಉದ್ಯೋಗವೂ ಇಲ್ಲದಾಗುತ್ತದೆ. ಹೀಗಾಗಿ ಲಾಕ್‌ಡೌನ್ ಹೇರಿಕೆಯಾಗುವ ಮುನ್ನವೇ ತಮ್ಮ ಊರುಗಳನ್ನು ಸೇರಿಕೊಳ್ಳಲು ವಲಸೆ ಕಾರ್ಮಿಕರು ಮುಂದಾಗಿದ್ದಾರೆ.

‘ಕಾರ್ಮಿಕರ ಮರುವಲಸೆ ದೊಡ್ಡಮಟ್ಟದಲ್ಲಿ ನಡೆಯುತ್ತಿಲ್ಲ. ಕೆಲವು ಕಾರ್ಮಿಕರು ಊರು ಬಿಡುತ್ತಿದ್ದಾರೆ ಅಷ್ಟೆ. ಹೀಗಾಗಿ ಅಂತಹ ದೊಡ್ಡ ಸಮಸ್ಯೆ ಇಲ್ಲ. ಹೀಗೆ ಹೊರಟಿರುವ ಕಾರ್ಮಿಕರಿಗೆ ಎಲ್ಲಿಯೂ ತೊಂದರೆ ಆಗಬಾರದು ಎಂದು ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದೇವೆ. ರೈಲು ಮತ್ತು ಬಸ್‌ ಸೇವೆ ಜಾರಿಯಲ್ಲಿರುವ ಕಾರಣ ಪ್ರಯಾಣಕ್ಕೆ ತೊಂದರೆ ಆಗಲಾರದು’ ಎಂದು ಗುಜರಾತ್ ಕಾರ್ಮಿಕ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ವಿಪುಲ್ ಮಿತ್ರಾ ಮಾಹಿತಿ ನೀಡಿದ್ದಾರೆ.

ಅಹಮದಾಬಾದ್‌ನ ಕಾಲುಪುರ ರೈಲು ನಿಲ್ದಾಣದಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಖರೀದಿಸುತ್ತಿದ್ದಾರೆ ವಲಯ ರೈಲ್ವೆ ಬಳಕೆದಾರರ ಸಮಿತಿ ಹೇಳಿದೆ.

‘ಸೂರತ್‌ನಲ್ಲಿರುವ ವಲಸೆ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ನಗರವನ್ನು ತೊರೆಯುತ್ತಿದ್ದಾರೆ. ಬಹಳ ಮಂದಿ ಬಸ್‌ಗಳಲ್ಲಿ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ಗಳಿಗೆ ಟಿಕೆಟ್ ಖರೀದಿಸಿದ್ದಾರೆ. ಲಾಕ್‌ಡೌನ್ ಭೀತಿಯಿಂದ ಕಾರ್ಮಿಕರು ಸೂರತ್ ತೊರೆಯುತ್ತಿದ್ದಾರೆ’ ಎಂದು ಸೂರತ್ ಐಷಾರಾಮಿ ಬಸ್ ಆಪರೇಟರ್‌ಗಳ ಸಂಘಟನೆ ಅಧ್ಯಕ್ಷ ದಿನೇಶ್ ಅಂಧಾನ್ ಮಾಹಿತಿ ನೀಡಿದ್ದಾರೆ.

ಕರ್ಫ್ಯೂ, ನಿರ್ಬಂಧ ಸಡಿಲಿಸಲು ಮನವಿ
*ದೆಹಲಿ ಗಡಿಗೆ ಹೊಂದಿಕೊಂಡಿರುವ ಉತ್ತರ ಪ್ರದೇಶದ ನೋಯ್ಡಾ, ಗಾಜಿಯಾಬಾದ್‌ನಲ್ಲಿ ಗುರುವಾರ ರಾತ್ರಿಯಿಂದ ಅನ್ವಯವಾಗುವಂತೆ ಏಪ್ರಿಲ್ 17ರವರೆಗೆ ರಾತ್ರಿ ಕರ್ಫ್ಯೂ ಹೇರಲಾಗಿದೆ. ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದೆ

* ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಏರುತ್ತಲೇ ಇರುವ ಕಾರಣ ಲಖನೌನಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದೆ. ಏಪ್ರಿಲ್ 30ರವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದೆ

* ಅಸ್ಸಾಂನಲ್ಲಿ ಲಾಕ್‌ಡೌನ್ ಅಥವಾ ರಾತ್ರಿ ಕರ್ಫ್ಯೂ ವಿಧಿಸುವ ಯಾವುದೇ ಚಿಂತನೆ ಇಲ್ಲ ಎಂದು ಅಸ್ಸಾಂ ಸರ್ಕಾರ ಹೇಳಿದೆ

* ಮಹಾರಾಷ್ಟ್ರದಲ್ಲಿ ಮರಾಠಿಗರ ನೂತನ ವರ್ಷ ಗುಡಿ ಪಾಡ್ವಾ ಸಮೀಪಿಸುತ್ತಿದೆ. ಹಬ್ಬದ ಈ ಋತುವಿನಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಬೇಕು ಎಂದು ಮಹಾರಾಷ್ಟ್ರ ಆಭರಣ ವ್ಯಾಪಾರಿಗಳ ಸಂಘಟನೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

‘ಆರ್ಥಿಕತೆಗೆ ಮಾರಕ’
‘ದೇಶದಲ್ಲಿ ಕೋವಿಡ್‌ನ ಎರಡನೇ ಅಲೆ ತೀವ್ರವಾಗುತ್ತಿರುವ ಸಂದರ್ಭದಲ್ಲಿ ಎರಡನೇ ಲಾಕ್‌ಡೌನ್ ಹೇರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಎರಡನೇ ಲಾಕ್‌ಡೌನ್ ಹೇರಿದರೆ, ದೇಶದ ಉದ್ಯಮ ವಲಯ ಕುಸಿಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ದೇಶದ ಆರ್ಥಿಕತೆಗೆ ಮಾರಕವಾಗಲಿದೆ’ ಎಂದು ನಿಪ್ಪಾನ್ ಪೇಂಟ್ಸ್ ಇಂಡಿಯಾದ ಅಧ್ಯಕ್ಷ ಶರದ್ ಮಲ್ಹೋತ್ರಾ ಕಳವಳ ವ್ಯಕ್ತಪಡಿಸಿದ್ದಾರೆ.

‘ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸಾಗಲು ಬಹಳ ಕಷ್ಟಪಟ್ಟಿದ್ದರು. ಈಗ ಮತ್ತೆ ಲಾಕ್‌ಡೌನ್ ಭೀತಿ ಎದುರಾಗಿರುವ ಕಾರಣ, ವಲಸೆ ಕಾರ್ಮಿಕರು ಈಗಾಗಲೇ ತಮ್ಮ ಊರುಗಳಿಗೆ ವಾಪಸಾಗಲು ಆರಂಭಿಸಿದ್ದಾರೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘ಮೊದಲ ಲಾಕ್‌ಡೌನ್‌ನಿಂದ ನಿರ್ಮಾಣ ವಲಯದ ಉದ್ಯಮಗಳು ಇನ್ನೂ ಚೇತರಿಸಿಕೊಂಡಿಲ್ಲ. ಈ ತ್ರೈಮಾಸಿಕದ ವಹಿವಾಟು ಉತ್ತೇಜನಕಾರಿಯಾಗಿಲ್ಲ. ಈಗ ಮತ್ತೊಮ್ಮೆ ಲಾಕ್‌ಡೌನ್ ಹೇರಿದರೆ, ಇವೆಲ್ಲವುಗಳಿಂದ ಚೇತರಿಸಿಕೊಳ್ಳಲು ಇನ್ನೂ 6-9 ತಿಂಗಳು ಅಥವಾ ವರ್ಷವೇ ಬೇಕಾಗಬಹುದು’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು