ಭಾನುವಾರ, ಮೇ 29, 2022
23 °C
9 ಮಸೂದೆಗಳಿಗೆ ಅಂಗೀಕಾರ | ವಿರೋಧ ಪಕ್ಷಗಳಿಂದ ಪದೇಪದೇ ಕಲಾಪಕ್ಕೆ ಅಡ್ಡಿ

ಸಂಸತ್‌ನ ಚಳಿಗಾಲದ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬೆಲೆ ಏರಿಕೆ, ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳಿಂದ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದ ಸಂಸತ್‌ನ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. 

ಕೃಷಿ ಕಾನೂನುಗಳ ವಾಪಸ್‌ ಪಡೆಯುವ ಮಸೂದೆ, ಚುನಾವಣಾ ಕಾಯ್ದೆಗಳ ತಿದ್ದುಪಡಿ ಮಸೂದೆ ಸೇರಿದಂತೆ 9 ಮಸೂದೆಗಳನ್ನು ಪ್ರಸಕ್ತ ಅಧಿವೇಶನದಲ್ಲಿಯೇ ಅಂಗೀಕರಿಸಲಾಯಿತು.

ನವೆಂಬರ್‌ 29ರಂದು ಆರಂಭವಾಗಿದ್ದ ಅಧಿವೇಶನ ನಿಗದಿಯಂತೆ ಗುರುವಾರ (ಡಿ.23) ಮುಕ್ತಾಯಗೊಳ್ಳಬೇಕಿತ್ತು. ಆದರೆ, ಒಂದು ದಿನ ಮುಂಚಿತವಾಗಿಯೇ ಅಂತ್ಯಗೊಂಡಿತು.

ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷಗಳಿಗೆ ನಿಗದಿ ಮಾಡುವ ಮಸೂದೆ, ಮಹಿಳೆಯ ಮದುವೆಯ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಳ ಮಾಡುವ ಮಸೂದೆ ಸೇರಿದಂತೆ ಒಟ್ಟು 12 ಮಸೂದೆಗಳನ್ನು ಸರ್ಕಾರ ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಿತ್ತು.

ಲೋಕಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ, ಸ್ಪೀಕರ್ ಓಂ ಬಿರ್ಲಾ ಅವರು ಸಮಾರೋಪ ಭಾಷಣ ಓದಿದರು.

‘ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆಗಳಿಂದಾಗಿ ಕಲಾಪಕ್ಕೆ ಪದೇಪದೇ ಅಡ್ಡಿಯುಂಟಾಯಿತು. ಇದರಿಂದಾಗಿ ಅಮೂಲ್ಯವಾದ 18 ಗಂಟೆ, 48 ನಿಮಿಷಗಳಷ್ಟು ಅವಧಿ ನಷ್ಟವಾಯಿತು. ಲೋಕಸಭೆಯ ಕಲಾಪ ಒಟ್ಟಾರೆ ಶೇ 82ರಷ್ಟು ಫಲದಾಯಕವಾಗಿದೆ’ ಎಂದು ಸ್ಪೀಕರ್‌ ಬಿರ್ಲಾ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹಾಗೂ ಇತರ ಸಂಸದರು ಅಧಿವೇಶನದ ಕೊನೆಯ ದಿನದ ಕಲಾಪದಲ್ಲಿ ಪಾಲ್ಗೊಂಡಿದ್ದರು.

ರಾಜ್ಯಸಭೆ: ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ರಾಜ್ಯಸಭೆಯನ್ನು ಸಹ ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಿದರು.

‘ಪದೇಪದೇ ಉಂಟಾದ ಅಡ್ಡಿಗಳಿಂದಾಗಿ ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ರಾಜ್ಯಸಭೆಯ ಕಲಾಪ ನಡೆಯಿತು’ ಎಂದು ಅವರು ವಿಷಾದಿಸಿದರು.

‘ಪ್ರಸಕ್ತ ಅಧಿವೇಶನ ನಡೆದ ರೀತಿಯ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ. ಆದರೆ, ಈ ಅಧಿವೇಶನ ಇನ್ನಷ್ಟೂ ಉತ್ತಮವಾಗಿ ಹಾಗೂ ಭಿನ್ನವಾಗಿ ನಡೆಯಲು ಸಾಧ್ಯವಿತ್ತು. ಈ ಬಗ್ಗೆ ಪ್ರತಿಯೊಬ್ಬ ಸದಸ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ’ ಎಂದರು.

ಜನರ ಧ್ವನಿಯಾಗುವಲ್ಲಿ ವಿಪಕ್ಷಗಳು ವಿಫಲ: ಬಿಜೆಪಿ
ನವದೆಹಲಿ
: ‘ವಿರೋಧ ಪಕ್ಷಗಳು ಸಂಸತ್‌ನ ಪ್ರಸಕ್ತ ಚಳಿಗಾಲದ ಅಧಿವೇಶನದ ಕಲಾಪಕ್ಕೆ ಪದೇಪದೇ ಅಡ್ಡಿಪಡಿಸಿದವು. ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸದೇ ಅವರು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾದವು’ ಎಂದು ಬಿಜೆಪಿ ಬುಧವಾರ ಟೀಕಿಸಿದೆ.

‘ಮುಂಬರುವ ಚುನಾವಣೆಗಳಲ್ಲಿ ಸೋಲಿನ ಭೀತಿ ವಿರೋಧ ಪಕ್ಷಗಳನ್ನು ಕಾಡುತ್ತಿತ್ತು. ಈ ಕಾರಣಕ್ಕೆ ಅವು ಜನರನ್ನು ಬಾಧಿಸುತ್ತಿರುವ ವಿಷಯಗಳತ್ತ ಗಮನ ಹರಿಸಲಿಲ್ಲ’ ಎಂದು ಬಿಜೆಪಿಯ ಮುಖ್ಯ ವಕ್ತಾರರೂ ಆಗಿರುವ ರಾಜ್ಯಸಭಾ ಸದಸ್ಯ ಅನಿಲ್‌ ಬಲೂನಿ ಟೀಕಿಸಿದರು.

ಅಯೋಧ್ಯೆ ಭೂಮಿ ಖರೀದಿ ವಿಷಯ ಪ್ರಸ್ತಾಪಕ್ಕೆ ಖರ್ಗೆ ಯತ್ನ
ನವದೆಹಲಿ:
ರಾಮಮಂದಿರ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಅಯೋಧ್ಯೆಯಲ್ಲಿ ಕೆಲವು ರಾಜಕಾರಣಿಗಳು, ಅಧಿಕಾರಿಗಳು ಭೂಮಿ ಖರೀದಿಸಿದ್ದಾರೆ ಎಂಬ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ಮುಂದಾದರು.

ಪತ್ರಿಕಾ ವರದಿಯನ್ನು ಉಲ್ಲೇಖಿಸಿದ ಅವರು, ‘ಶಾಸಕರು, ಮೇಯರ್, ಸ್ಥಳೀಯ ಸಂಸ್ಥೆಯ ಆಯುಕ್ತರು, ಅಧಿಕಾರಿಗಳು ಭೂಮಿ ಖರೀದಿಸಿದ್ದಾರೆ ಎಂಬುದನ್ನು ನೀವು ಗಮನಿಸಿರಬೇಕು’ ಎಂದು ಸಭಾಪತಿಯವರನ್ನು ಉದ್ದೇಶಿಸಿ ಹೇಳಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಎಂ.ವೆಂಕಯ್ಯನಾಯ್ಡು, ‘ವಿಷಯ ಪ್ರಸ್ತಾಪಕ್ಕೆ ಮೊದಲು ನೋಟಿಸ್ ನೀಡಬೇಕು. ಪತ್ರಿಕಾ ವರದಿಯನ್ನು ಕಲಾಪದಲ್ಲಿ ಓದಲು ಅವಕಾಶವಿಲ್ಲ’ ಎಂದರು.

ಈ ಹಂತದಲ್ಲಿ ಜೈರಾಂ ರಮೇಶ್‌, ಅಂಬಿಕಾ ಸೋನಿ, ಶಕ್ತಿಸಿನ್ಹಾ ಗೋಹಿ ಅವರು ಖರ್ಗೆ ಬೆಂಬಲಕ್ಕೆ ನಿಂತರು. ಆದರೆ, ವಿಷಯದ ಪ್ರಸ್ತಾಪಕ್ಕೆ ಸಭಾಪತಿಗಳು ಅನುಮತಿ ನೀಡಲಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು