ಮಂಗಳವಾರ, ಏಪ್ರಿಲ್ 20, 2021
27 °C

ಮಧ್ಯ ಪ್ರದೇಶ: ಗೋಡ್ಸೆ ಬೆಂಬಲಿಗನ ಕಾಂಗ್ರೆಸ್‌ ಸೇರ್ಪಡೆಗೆ ತೀವ್ರ ವಿರೋಧ

ಪಿಟಿಐ Updated:

ಅಕ್ಷರ ಗಾತ್ರ : | |

ಭೋಪಾಲ್‌/ ಗ್ವಾಲಿಯರ್: ಮಹಾತ್ಮಗಾಂಧಿಯ ಹಂತಕ ನಾಥೂರಾಮ್‌ ಗೋಡ್ಸೆಯ ಪ್ರತಿಮೆಯನ್ನು ಹಿಂದೂ ಮಹಸಭಾ ಕಚೇರಿಯಲ್ಲಿ ಸ್ಥಾಪಿಸಿ ಪೂಜೆ ಸಲ್ಲಿಸಿದ್ದ ಗ್ವಾಲಿಯರ್‌ ಮಹಾನಗರ ಪಾಲಿಕೆ ಸದಸ್ಯ ಬಾಬುಲಾಲ್‌ ಚೌರಾಸಿಯಾ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಇದಕ್ಕೆ ಈಗ ಪಕ್ಷದೊಳಗೆ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

‘ನಾನು ನನ್ನ ಮಾತೃ ಪಕ್ಷಕ್ಕೆ ಮರಳಿದ್ದೇನೆ. ಹಿಂದೂ ಮಹಸಾಭಾ ನಾಯಕರು ನನ್ನನ್ನು ದಾರಿತಪ್ಪಿಸಿದ್ದರು. ನನ್ನ ಕೈಯಿಂದ ಗೋಡ್ಸೆ ಪ್ರತಿಮೆಗೆ ಪೂಜೆ ಸಲ್ಲಿಸುವಂತೆ ಮಾಡಿದ್ದರು. ಅದು ನಾನು ಮಾಡಿದ ತಪ್ಪು. ನನಗೆ ಅದರ ಅರಿವಾಗಿದೆ. ಕಳೆದ ಎರಡೂವರೆ ವರ್ಷಗಳಿಂದ ನಾನು ಯಾವುದೇ ಬಲಪಂಥೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ’ ಎಂದು ಚೌರಾಸಿಯಾ ಪಕ್ಷ ಸೇರ್ಪಡೆಯ ನಂತರ ಹೇಳಿದ್ದಾರೆ.

ಚೌರಾಸಿಯಾ ಅವರ ಸೇರ್ಪಡೆ ವಿರೋಧಿಸಿರುವ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಅರುಣ್‌ ಯಾದವ್‌ ಅವರು ‘ಬಾಪು, ನಾವು ಮುಜುಗರಕ್ಕೀಡಾಗಿದ್ದೇವೆ’ ಎಂದು ಟ್ವೀಟ್‌ ಮಾಡಿದ್ದಾರೆ. ಗ್ವಾಲಿಯರ್‌ನಲ್ಲಿ ಗೋಡ್ಸೆ ದೇವಾಲಯ ನಿರ್ಮಿಸಿದ್ದಕ್ಕಾಗಿ ಚೌರಾಸಿಯಾ ಮತ್ತು ಅವರ ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅಂದಿನ ಮುಖ್ಯಮಂತ್ರಿಯಾಗಿದ್ದ ಕಮಲ್‌ನಾಥ್ ಆದೇಶಿಸಿದ್ದನ್ನು ಅವರು ನೆನಪಿಸಿದ್ದಾರೆ.

‘ಕಾಂಗ್ರೆಸ್ ಯಾವಾಗಲೂ ಗಾಂಧೀಜಿಯ ತತ್ವಸಿದ್ಧಾಂತಕ್ಕಾಗಿ ಹೋರಾಡುತ್ತಿತ್ತು. ಆ ಸಿದ್ಧಾಂತ ಕೊಂದು, ಗ್ವಾಲಿಯರ್ ನಗರದಲ್ಲಿ ನಾಥೂರಾಮ್ ಗೋಡ್ಸೆ ದೇವಾಲಯ ಕಟ್ಟಿದವರನ್ನು ಈಗ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಪಕ್ಷ ಎತ್ತ ಸಾಗುತ್ತಿದೆ? ಪಕ್ಷ ಬಲಪಡಿಸುವ ಹೆಸರಿನಲ್ಲಿ ಗೋಡ್ಸೆ ಅನುಯಾಯಿಯನ್ನು ಏಕೆ ಸೇರಿಸಿಕೊಳ್ಳಬೇಕು? ಈ ನಿರ್ಧಾರದಿಂದ ನಿಜಕ್ಕೂ ನಾವು ಮುಜುಗರಕ್ಕೊಳಗಾಗಿದ್ದೇವೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಚೌರಾಸಿಯಾ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಕಮಲ್‌ನಾಥ್‌ ಅವರ ನಿರ್ಧಾರವನ್ನು ಕಾಂಗ್ರೆಸ್‌ ವಕ್ತಾರ ನರೇಂದ್ರ ಸಲೂಜಾ ಸಮರ್ಥಿಸಿಕೊಂಡಿದ್ದಾರೆ. ‘ಚೌರಾಸಿಯಾ ಅವರು ಗೋಡ್ಸೆಯ ಹಿಂಸಾ ಸಿದ್ಧಾಂತದಿಂದ ದೂರವಾಗಿದ್ದಾರೆ. ಗಾಂಧೀಜಿಯ ಸತ್ಯ ಮತ್ತು ಅಹಿಂಸೆಯ ಪಥದಲ್ಲಿ ನಡೆಯಲು ನಿರ್ಧರಿಸಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು