ಬುಧವಾರ, ಮಾರ್ಚ್ 22, 2023
26 °C

ಕಟ್ಟುನಿಟ್ಟಿನ ಮದ್ಯ ನೀತಿ ಜಾರಿಯಾದರೆ ಬಿಜೆಪಿಗೆ ಮತ್ತೆ ಅಧಿಕಾರ: ಉಮಾ ಭಾರತಿ

ಪಿಟಿಐ Updated:

ಅಕ್ಷರ ಗಾತ್ರ : | |

ಭೋಪಾಲ್: ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವು ಕಟ್ಟುನಿಟ್ಟಾದ ಮದ್ಯ ನೀತಿ ಜಾರಿಗೊಳಿಸಿದರೆ, ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ಪಕ್ಷದ ಹಿರಿಯ ನಾಯಕಿ ಉಮಾ ಭಾರತಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಸರ್ಕಾರವು ಹೊಸ ಮದ್ಯ ನೀತಿಯನ್ನು ಘೋಷಿಸಲು ಸಿದ್ಧತೆ ನಡೆಸಿದೆ. ಆದರೆ, ಯಾವಾಗ ಎಂದು ದಿನಾಂಕ ಪ್ರಕಟಿಸಿಲ್ಲ. ಸಾಮಾನ್ಯವಾಗಿ ಈ ನೀತಿಯು ಜನವರಿ ಅಂತ್ಯದಲ್ಲಿ ಘೋಷಣೆಯಾಗುತ್ತದೆ.

ಉಮಾ ಭಾರತಿ ಅವರು ಭೋಪಾಲ್‌ನ ಅಯೋಧ್ಯ ನಗರದಲ್ಲಿರುವ ದೇವಾಲಯವೊಂದಕ್ಕೆ ಶನಿವಾರ ಆಗಮಿಸಿದ್ದಾರೆ. ಜನವರಿ 31ರ ವರೆಗೂ ಇಲ್ಲೇ ಉಳಿದುಕೊಳ್ಳುವುದಾಗಿ ಹೇಳಿರುವ ಅವರು, ಮದ್ಯ ನೀತಿ ಘೋಷಣೆಗೆ ಕಾಯುತ್ತಿರುವುದಾಗಿಯೂ ತಿಳಿಸಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆಗೆ ಇದೇ ವರ್ಷ (2023ರ) ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ.

ಸರ್ಕಾರವು ಪ್ರತಿವರ್ಷ ಪ್ರಕಟಿಸುವ ಮದ್ಯ ನೀತಿಯಲ್ಲಿ ಸೂಕ್ತ ತಿದ್ದುಪಡಿಗಳನ್ನು ತರಬೇಕು. ಜನರನ್ನು ವ್ಯಸನಮುಕ್ತಗೊಳಿಸಲು ಉತ್ತೇಜಿಸುವ ನಿಯಂತ್ರಣಗಳನ್ನು ಅಳವಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಉಮಾ ಭಾರತಿ ಈ ಹಿಂದೆ ದೇವಾಲಯದ ಬಳಿ ಮದ್ಯದ ಅಂಗಡಿಗಳನ್ನು ತೆರೆಯುವುದನ್ನು ವಿರೋಧಿಸಿದ್ದರು.

'ನಾನು ಯಾವತ್ತೂ ಸಂಪೂರ್ಣ ಮದ್ಯ ನಿಷೇಧಕ್ಕೆ ಬೇಡಿಕೆ ಇಟ್ಟಿಲ್ಲ. ಅದು ನನ್ನ ಹಿಡಿತದಲ್ಲಿ ಇದ್ದಿದ್ದರೆ, ಸಂಪೂರ್ಣ ನಿಷೇಧ ಹೇರುತ್ತಿದ್ದೆ. ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಮೇಲೆ ಪೂರ್ಣ ವಿಶ್ವಾಸವಿದೆ. ಹೊಸ ಮದ್ಯ ನೀತಿ ಘೋಷಣೆಗಾಗಿ ಜನವರಿ 31ರ ವರೆಗೆ ಕಾಯುತ್ತೇನೆ' ಎಂದು ಉಮಾ ಭಾರತಿ ಹೇಳಿದ್ದಾರೆ.

ಮುಂದುವರಿದು, 'ಒಂದುವೇಳೆ ನಿಯಂತ್ರಿತ ಮದ್ಯ ನೀತಿ (ನಾನು ಸರ್ಕಾರಕ್ಕೆ ತಿಳಿಸಿರುವಂತೆ) ಜಾರಿಯಾದರೆ, ಬಿಜೆಪಿಯು 2003ರಲ್ಲಿ ಸಾಧಿಸಿದ ದಾಖಲೆಯ ಗೆಲುವನ್ನು ಪುನರಾವರ್ತಿಸಲಿದೆ' ಎಂದು ಭವಿಷ್ಯ ನುಡಿದಿದ್ದಾರೆ.

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ 2003ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ 165 ಸ್ಥಾನಗಳನ್ನು ಗೆದ್ದಿತ್ತು. ಆಗ ಅಧಿಕಾರದಲ್ಲಿ ಕಾಂಗ್ರೆಸ್‌ ಕೇವಲ 58 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಚುನಾವಣೆ ಬಳಿಕ ಉಮಾ ಭಾರತಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು