ಸೋಮವಾರ, ಮಾರ್ಚ್ 8, 2021
22 °C

ಮಧ್ಯಪ್ರದೇಶ: ಪ್ರಸಕ್ತ ವರ್ಷ 26 ಹುಲಿ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್‌: ‘ಹುಲಿಗಳ ರಾಜ್ಯ’ ಎಂದೇ ಕರೆಯಲಾಗುವ ಮಧ್ಯಪ್ರದೇಶದಲ್ಲಿ ಕಳೆದ ಏಪ್ರಿಲ್‌ನಿಂದ ಈ ವರೆಗೆ 26 ಹುಲಿಗಳು ಸಾವನ್ನಪ್ಪಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹೇಳಿದೆ.

ಸಾವನ್ನಪ್ಪಿದ ವ್ಯಾಘ್ರಗಳ ಕುರಿತ ಮಾಹಿತಿಯನ್ನು ಪ್ರಾಧಿಕಾರದ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಇವುಗಳ ಪೈಕಿ, ವಿವಿಧ ಸಂರಕ್ಷಿತ ಅರಣ್ಯದಲ್ಲಿನ 21 ಹುಲಿಗಳು ಸಾವನ್ನಪ್ಪಿದ್ದರೆ, ಬಾಂಧವಗಡ ಹುಲಿ ಸಂರಕ್ಷಿತಾರಣ್ಯದಲ್ಲಿ ಗರಿಷ್ಠ 10 ಹುಲಿಗಳು ಮೃತಪಟ್ಟಿವೆ ಎಂದು ಪ್ರಾಧಿಕಾರ ಪ್ರಕಟಿಸಿದೆ.

2019ರಲ್ಲಿ 28 ಹುಲಿಗಳು ಮೃತಪಟ್ಟಿದ್ದವು. ಈ ಪೈಕಿ, ಮೂರು ಹುಲಿಗಳು ಬೇಟೆಗಾರರಿಗೆ ಬಲಿಯಾಗಿವೆ ಎಂದೂ ಮಾಹಿತಿ ನೀಡಲಾಗಿದೆ.

‘ಸದ್ಯ ರಾಜ್ಯದಲ್ಲಿ 124 ಹುಲಿ ಮರಿಗಳಿವೆ. 2018ರಲ್ಲಿ ನಡೆದ ಗಣತಿ ವೇಳೆ ಮರಿಗಳ ಸಂಖ್ಯೆ ಎಷ್ಟಿತ್ತು ಎಂಬುದನ್ನು ದಾಖಲಿಸಿಲ್ಲ. ಮುಂದಿನ ಗಣತಿ ವೇಳೆಗೆ ರಾಜ್ಯದಲ್ಲಿ ಹುಲಿಗಳ ಸಂಖ್ಯೆ 600ಕ್ಕೂ ಅಧಿಕ ಇರಲಿದೆ’ ಎಂದು ಮಧ್ಯಪ್ರದೇಶ ಅರಣ್ಯ ಸಚಿವ ವಿಜಯ್ ಶಾ ಹೇಳಿದರು.

‘ಕಳೆದ ಆರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಹುಲಿಗಳ ಮರಣ ಪ್ರಮಾಣ ಅವುಗಳ ಜನನ ಪ್ರಮಾಣಕ್ಕಿಂತ ಕಡಿಮೆ ಇತ್ತು’ ಎಂದೂ ಹೇಳಿದರು.

‘ರಾಜ್ಯದಲ್ಲಿ ಹುಲಿಗಳ ಸಂಖ್ಯೆಗೆ ಅನುಗುಣವಾಗಿ ಅವುಗಳ ಸಂರಕ್ಷಣೆಗಾಗಿ ಅರಣ್ಯ ಪ್ರದೇಶ ಇಲ್ಲ. ಉದಾಹರಣೆಗೆ, ಬಾಂಧವಗಡ ಹುಲಿ ಸಂರಕ್ಷಿತಾರಣ್ಯದಲ್ಲಿ ಸದ್ಯ 125 ಹುಲಿಗಳಿವೆ. ಆದರೆ, ಈ ಸಂರಕ್ಷಿತಾರಣ್ಯ 90 ವ್ಯಾಘ್ರಗಳ ವಾಸಕ್ಕೆ ಯೋಗ್ಯವಿದೆ’ ಎಂದೂ ವಿವರಿಸಿದರು.

‘ಹುಲಿಗಳ ಸಂರಕ್ಷಣೆಗಾಗಿ ಮಧ್ಯಪ್ರದೇಶದಲ್ಲಿ ವಿಶೇಷ ಕಾರ್ಯಪಡೆ ಇಲ್ಲ. ಕರ್ನಾಟಕದಲ್ಲಿ ಇಂಥ ಕಾರ್ಯಪಡೆ ಇರುವುದರಿಂದ ಅಲ್ಲಿ ಹುಲಿಗಳ ಸಂರಕ್ಷಣೆ ಪರಿಣಾಮಕಾರಿಯಾಗಿದೆ’ ಎಂದು ವನ್ಯಜೀವಿ ಸಂರಕ್ಷಣೆಗಾಗಿ ಹೋರಾಡುತ್ತಿರುವ ಅಜಯ್ ದುಬೆ ಹೇಳುತ್ತಾರೆ.

‘ರಾಜ್ಯದಲ್ಲಿಯೂ ವಿಶೇಷ ಕಾರ್ಯಪಡೆ ರಚಿಸಲು ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ’ ಎಂದೂ ದುಬೆ ಹೇಳಿದರು.

ಕರ್ನಾಟಕದಲ್ಲಿ 8 ಹುಲಿಗಳ ಸಾವು

ಹುಲಿಗಳ ಸಂಖ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರಸಕ್ತ ವರ್ಷ ರಾಜ್ಯದಲ್ಲಿ 8 ಹುಲಿಗಳು ಮೃತಪಟ್ಟಿವೆ. ಎರಡು ಹುಲಿಗಳು ಬೇಟೆಗಾರರ ದಾಳಿಗೆ ಬಲಿಯಾಗಿವೆ ಎಂದು ಮೂಲಗಳು ಹೇಳುತ್ತವೆ.

ಕಳೆದ ವರ್ಷ ರಾಜ್ಯದಲ್ಲಿ ಮೃತಪಟ್ಟ ಹುಲಿಗಳ ಸಂಖ್ಯೆ 12.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು