ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ಕೋಳಿ, ಆಡು ಸಾಕಾಣಿಕೆ ತರಬೇತಿಯತ್ತ ಪದವೀಧರರ ಚಿತ್ತ

ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಪೂರಕ ಕೆಲಸಗಳ ಕೋರ್ಸ್‌ಗಳಿಗೆ ಸೇರುತ್ತಿರುವ ಪದವೀಧರರು
Last Updated 21 ಜುಲೈ 2021, 6:05 IST
ಅಕ್ಷರ ಗಾತ್ರ

ಔರಂಗಬಾದ್‌: ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಉದ್ಯೋಗ ಕಳೆದುಕೊಂಡ ಮಹಾರಾಷ್ಟ್ರದ ಕೆಲವು ಎಂಜಿನಿಯರ್ ಮತ್ತು ಮ್ಯಾನೇಜ್‌ಮೆಂಟ್‌ ಪದವೀಧರರು, ಕೃಷಿ ಮತ್ತು ಪಶುಸಂಗೋಪನೆ ಕ್ಷೇತ್ರದ ಮೂಲಕ ‘ಬದುಕಿನ ದಾರಿ‘ ಕಂಡುಕೊಳ್ಳುವತ್ತ ಹೆಜ್ಜೆ ಹಾಕಿದ್ದಾರೆ.

ಉದ್ಯೋಗ ಕಳೆದುಕೊಂಡ 20 ಮಂದಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ ಪದವಿ ಪಡೆದಿರುವ ನಿರುದ್ಯೋಗಿ ಯುವಕರು ಔರಂಗಬಾದ್‌ ಜಿಲ್ಲೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೋಳಿ ಮತ್ತು ಆಡು ಸಾಕಾಣಿಕೆ ತರಬೇತಿಯ ಕೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ತರಬೇತಿಗೆ ಸೇರಿರುವ ಎಂಜಿನಿಯರ್‌ಗಳಿಗೆ ಈ ಮೊದಲೇ ‘ನಾವು ಪ್ರತಿ ತಿಂಗಳ ನಿಗದಿತ ಸಂಬಳಕ್ಕಾಗಿ ಹೆಚ್ಚು ಸಮಯ ಕೆಲಸ ಮಾಡುತ್ತಿದ್ದೇವೆ‘ ಎಂಬ ಭಾವನೆ ಇತ್ತು. ಅದೇ ಸಮಯಕ್ಕೆ ಕೋವಿಡ್‌ ಇವರ ಉದ್ಯೋಗಗಳನ್ನೂ ಕಿತ್ತುಕೊಂಡಿತು. ಈ ಸಮಯದಲ್ಲಿ ಕೆಲವರಿಗೆ ಕೆಲಸದ ಅಭದ್ರತೆ ಕಾಡಲು ಶುರುವಾಯಿತು. ಈಗ ಕೋಳಿ ಮತ್ತು ಆಡು ಸಾಕಾಣಿಕೆ ಮೂಲಕ ಕಡಿಮೆ ಸಮಯದಲ್ಲಿ, ಹೆಚ್ಚು ಲಾಭ ಪಡೆಯುವ ಉದ್ದೆಶದಿಂದ ಇವರೆಲ್ಲ ನಮ್ಮಲ್ಲಿ ತರಬೇತಿಗಾಗಿ ಅರ್ಜಿ ಸಲ್ಲಿಸಿದ್ದಾರೆ‘ ಎಂದು ಕೃಷಿ ವಿಜ್ಞಾನ ಕೇಂದ್ರದ ಪೌಲ್ಟ್ರಿ ಮತ್ತು ಆಡು ಸಾಕಾಣಿಕೆ ವಿಭಾಗದ ಪರಿಣತೆ ಡಾ. ಅನಿತಾ ಜಿಂಟುಕರ್‌ ಸುದ್ದಿ ಸಂಸ್ಥೆಗೆ ತಿಳಿಸಿದರು.

ಪರಭಾನಿಯ ವಸಂತರಾವ್‌ ನಾಯಕ್ ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆಯುತ್ತಿರುವ ಈ ಕೃಷಿ ವಿಜ್ಞಾನ ಕೇಂದ್ರ, ಕೃಷಿಗೆ ಪೂರಕವಾದ ಕೆಲಸಗಳಿಗೆ ಅಗತ್ಯವಾದ ಕೋರ್ಸ್‌ಗಳನ್ನು ನಡೆಸುತ್ತಿದೆ. ಸಾಮಾನ್ಯವಾಗಿ ಈ ಕೋರ್ಸ್‌ಗಳಿಗೆ ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಕೊಂಡವರು ಅರ್ಜಿ ಸಲ್ಲಿಸುತ್ತಾರೆ. ಆದರೆ, ಕೋವಿಡ್‌ ಲಾಕ್‌ಡೌನ್‌ ನಂತರ, ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಪದವೀಧರರು ಇಂಥ ಕೋರ್ಸ್‌ಗಳನ್ನು ಕಲಿಯಲು ಆಸಕ್ತಿ ತೋರಿದ್ದಾರೆ.

‘ಈ ಬಾರಿ ಕೋಳಿ ಮತ್ತು ಆಡು ಸಾಕಾಣಿಕೆ ಕೋರ್ಸ್‌ಗೆ 20 ಅರ್ಜಿಗಳು ಬಂದಿವೆ. ಈ ಅರ್ಜಿಗಳಲ್ಲಿ 15 ಮಂದಿ ಎಂಜಿನಿಯರ್‌ಗಳು, ಇಬ್ಬರು ಮ್ಯಾನೇಜ್‌ಮೆಂಟ್ ಪದವೀಧರರು ಮತ್ತು ಮೂವರು ಶಿಕ್ಷಣ ವಿಷಯದಲ್ಲಿ ಡಿಪ್ಲೊಮಾ ಪಡೆದವರು. ಶೀಘ್ರದಲ್ಲೇ ಇವರಿಗೆಲ್ಲ ಆನ್‌ಲೈನ್ ಮೂಲಕ ತರಬೇತಿ ಆರಂಭಿಸಲಾಗುವುದು‘ ಎಂದು ಡಾ. ಅನಿತಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT