ಭಾನುವಾರ, ಮಾರ್ಚ್ 26, 2023
23 °C

ಗೋವಾ ವಿಧಾನಸಭೆಯಲ್ಲಿ ‘ಮಹದಾಯಿ’ ಕೋಲಾಹಲ: ಸದಸ್ಯರನ್ನು ಹೊರ ಹಾಕಿದ ಮಾರ್ಷಲ್‌ಗಳು

ಪಿಟಿಐ Updated:

ಅಕ್ಷರ ಗಾತ್ರ : | |

ಪಣಜಿ: ಚಳಿಗಾಲದ ಅಧಿವೇಶನದ ಮೊದಲ ದಿನ ಗೋವಾ ವಿಧಾನಸಭೆಯಲ್ಲಿ ಮಹದಾಯಿ ನದಿ ತಿರುವು ಯೋಜನೆ ಕುರಿತಾಗಿ ವಿರೋಧ ಪಕ್ಷಗಳು ಕೋಲಾಹಲ ಸೃಷ್ಟಿ ಮಾಡಿದವು. ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದ ರಾಜ್ಯಪಾಲ ಪಿ. ಎಸ್. ಶ್ರೀಧರನ್ ಪಿಳ್ಳೈ ಅವರ ಭಾಷಣಕ್ಕೆ ಅಡ್ಡಿಪಡಿಸಿದ ವಿಪಕ್ಷಗಳು ಯೋಜನೆ ವಿಚಾರವಾಗಿ ಮಾತನಾಡುವಂತೆ ಅವರನ್ನು ಆಗ್ರಹಿಸಿದವು.

ಮಹದಾಯಿಯ ಉಪನದಿಗಳಾದ ಕಳಸಾ–ಬಂಡೂರಿಗೆ ಅಣೆಕಟ್ಟುಗಳನ್ನು ನಿರ್ಮಿಸಿ, ನೀರನ್ನು ತಿರುಗಿಸಿ, ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳುವ ಯೋಜನೆ ವಿಚಾರವಾಗಿ ಕರ್ನಾಟಕ ಮತ್ತು ಗೋವಾ ನಡುವೆ ದೀರ್ಘ ಕಾಲದ ವಿವಾದ ಮನೆ ಮಾಡಿದೆ.

ಎರಡು ಅಣೆಕಟ್ಟುಗಳ ನಿರ್ಮಾಣಕ್ಕೆ ಕರ್ನಾಟಕ ಸಲ್ಲಿಸಿದ್ದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ಇತ್ತೀಚೆಗೆ ಅನುಮೋದನೆ ನೀಡಿದ್ದು, ಇದಕ್ಕೆ ಗೋವಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಉತ್ತರ ಗೋವಾದ ಕೆಳಭಾಗದಲ್ಲಿರುವ ಮಹದಾಯಿ ವನ್ಯಜೀವಿಧಾಮದ ಮೂಲಕ ನೀರನ್ನು ತೆಗೆದುಕೊಂಡು ಹೋಗಲು ಕರ್ನಾಟಕ ಸರ್ಕಾರಕ್ಕೆ ಅಧಿಕಾರ ಇಲ್ಲ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಕರ್ನಾಟಕವು ನೀರನ್ನು ತಿರುಗಿಸಲು ಸಾಧ್ಯವಿಲ್ಲ ಎಂದು ಗೋವಾ ಸರ್ಕಾರ ವಾದಿಸಿದೆ.

ಸೋಮವಾರ ಗೋವಾ ವಿಧಾನಸಭೆಯಲ್ಲಿ ರಾಜ್ಯಪಾಲರು ಭಾಷಣ ಆರಂಭಿಸುತ್ತಿದ್ದಂತೆ ಕಾಂಗ್ರೆಸ್, ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಮತ್ತು ಆಮ್ ಆದ್ಮಿ ಪಕ್ಷದ ಸದಸ್ಯರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಗೆ ನಿಂತರು.

ಮಹದಾಯಿ ನೀರಿನ ವಿಚಾರದಲ್ಲಿ ರಾಜ್ಯಪಾಲರು ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷದ (ಕಾಂಗ್ರೆಸ್) ನಾಯಕ ಯೂರಿ ಅಲೆಮಾವೊ ಆಗ್ರಹಿಸಿದರು. ನದಿ ಸಂರಕ್ಷಣೆಯಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯಪಾಲರ ಭಾಷಣಕ್ಕೆ ಅವಕಾಶ ನೀಡುವಂತೆ ಸ್ಪೀಕರ್ ರಮೇಶ್ ತಾವಡ್ಕರ್ ಅವರು ಸದಸ್ಯರ ಮನವೊಲಿಸಲು ಪ್ರಯತ್ನಿಸಿದರು. ಆದರೆ ವಿರೋಧ ಪಕ್ಷದ ಸದಸ್ಯರು ತಮ್ಮ ಬೇಡಿಕೆಗೆ ಅಂಟಿಕೊಂಡು, ಸದನದ ಬಾವಿಗೆ ಧಾವಿಸಿದರು. ಇದು ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.

ನಂತರ, ಮಾರ್ಷಲ್‌ಗಳು ‘ರೆವಲ್ಯೂಷನರಿ ಗೋವನ್ಸ್‌ ಪಕ್ಷ’ದ ಶಾಸಕ ವಿರೇಶ್ ಬೋರ್ಕರ್ ಅವರನ್ನು ಹೊರತುಪಡಿಸಿ ಎಲ್ಲಾ ಸದಸ್ಯರನ್ನು ಸದನದಿಂದ ಹೊರ ಹಾಕಿದರು. ವಿರೋಧ ಪಕ್ಷದ ಸದಸ್ಯರ ಅನುಪಸ್ಥಿತಿಯಲ್ಲಿ ರಾಜ್ಯಪಾಲರು ಭಾಷಣ ಮುಂದುವರಿಸಿದರು.

ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಎಫ್‌ಪಿ ಮುಖ್ಯಸ್ಥ ವಿಜಯ್ ಸರ್ದೇಸಾಯಿ, ಮಹದಾಯಿ ನೀರಿನ ವಿಚಾರದಲ್ಲಿ ರಾಜ್ಯಪಾಲರು ಹೇಳಿಕೆ ನೀಡಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದರು.

‘ಇದು ಗೋವಾದವರ ಸಾವು ಬದುಕಿನ ವಿಷಯವಾಗಿದೆ. ರಾಜ್ಯಪಾಲರು ಹೇಳಿಕೆ ನೀಡಬೇಕೆಂದು ನಾವು ಬಯಸಿದ್ದೇವೆ’ ಎಂದು ಅವರು ಹೇಳಿದರು.

‌ಹುಬ್ಬಳ್ಳಿ–ಧಾರವಾಡ, ಗದಗ, ನರಗುಂದ, ನವಲಗುಂದ ಸೇರಿದಂತೆ ಕಿತ್ತೂರು ಕರ್ನಾಟಕದ ಹದಿಮೂರು ಪಟ್ಟಣ ಪ್ರದೇಶಗಳು ಹಾಗೂ ನೂರಕ್ಕೂ ಅಧಿಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದ ಮಹದಾಯಿ (ಕಳಸಾ–ಬಂಡೂರಿ ನಾಲಾ) ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರ ಜಲ ಆಯೋಗವು ಅನುಮೋದನೆಯನ್ನು ನೀಡಿದೆ.

ಇವುಗಳನ್ನೂ ಓದಿ 

ಮಹದಾಯಿ: ಗೋವಾ ಸರ್ಕಾರದ ದ್ವಂದ್ವ

ಮಹದಾಯಿ ಯೋಜನೆ ಡಿಪಿಆರ್‌ಗೆ ಹಸಿರು ನಿಶಾನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು