ಬುಧವಾರ, ಜೂನ್ 29, 2022
24 °C

ಮಹಾರಾಷ್ಟ್ರ ರಾಜಕೀಯ: ಶಿವಸೇನಾದ ಮತ್ತೆ ನಾಲ್ವರು ಶಾಸಕರು ಅಸ್ಸಾಂಗೆ ಶಿಫ್ಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಏಕನಾಥ ಶಿಂಧೆ ಅವರ ಬಣಕ್ಕೆ ಶಿವಸೇನಾದ ನಾಲ್ವರು ಶಾಸಕರು ಮತ್ತೆ ಸೇರ್ಪಡೆಗೊಂಡಿದ್ದಾರೆ. 

ಅಸ್ಸಾಂನ ಗುವಾಹಟಿಯಲ್ಲಿರುವ ‘ರಾಡಿಸನ್ ಬ್ಲೂ’ ಪಂಚತಾರಾ ಹೋಟೆಲ್‌ನಲ್ಲಿ ಏಕನಾಥ ಶಿಂಧೆ ಅವರು ಶಾಸಕರನ್ನು ಬರಮಾಡಿಕೊಳ್ಳುತ್ತಿರುವ ವಿಡಿಯೊವನ್ನು ಸುದ್ದಿಸಂಸ್ಥೆ ‘ಎಎನ್‌ಐ’ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. 

ಶಿವಸೇನಾದ ಮತ್ತಿಬ್ಬರು ಶಾಸಕರು ಬುಧವಾರ ತಡರಾತ್ರಿ ಗುಜರಾತಿನ ಸೂರತ್‌ಗೆ ತೆರಳಿದ್ದು, ಶಿಂಧೆ ಬಣಕ್ಕೆ ಸೇರಿಕೊಂಡಿರುವುದಾಗಿ ವರದಿಯಾಗಿದೆ. 

ಏಕನಾಥ್ ಶಿಂಧೆ ನೇತೃತ್ವದ ಶಾಸಕರ ಗುಂಪು ಬಂಡಾಯ ಸಾರಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರದ ಭವಿಷ್ಯ ಇನ್ನೂ ಅತಂತ್ರವಾಗಿಯೇ ಇದೆ. ಅಘಾಡಿ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಶಿಂಧೆ ಹೇಳಿಕೊಂಡಿದ್ದಾರೆ. 

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಪಕ್ಷದ ಶಾಸಕರು ಬಯಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಉದ್ಧವ್ ಠಾಕ್ರೆ ಅವರು ಬುಧವಾರ ಸಂಜೆ ಪ್ರತಿಕ್ರಿಯಿಸಿದ್ದಾರೆ. ಜತೆಗೆ, ‘ಶಿವಸೇನಾ ಶಾಸಕರೇ ಮುಖ್ಯಮಂತ್ರಿಯಾಗಬೇಕು’ ಎಂದು ಅವರು ಷರತ್ತು ಹಾಕಿದ್ದಾರೆ. 

ಆದರೆ, ಉದ್ಧವ್ ಅವರು ರಾಜೀನಾಮೆ ನೀಡದೆ ಇದ್ದರೂ ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು ತೊರೆದು ತಮ್ಮ ನಿವಾಸ ಮಾತೋಶ್ರೀಗೆ ಹೋಗಿದ್ದಾರೆ.

ಠಾಕ್ರೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಿಂಧೆ, ‘ಶಿವಸೇನಾ ಉಳಿಯ ಬೇಕು ಎಂದಿದ್ದರೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜತೆಗಿನ ಅಸಹಜ ಮೈತ್ರಿಯನ್ನು ತೊರೆಯಿರಿ’ ಎಂದು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇವನ್ನೂ ಓದಿ... 

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಶಿವಸೇನಾದ ಮತ್ತಿಬ್ಬರು ಶಾಸಕರು ಸೂರತ್‌ಗೆ ದೌಡು

ಮಹಾ ಬಂಡಾಯ| ‘ನಾಪತ್ತೆ’ಯಾಗಿದ್ದ ಇಬ್ಬರು ಶಾಸಕರು ವಾಪಸ್ 

‘ಒಬ್ಬ ದುಷ್ಟ ರಾಜ’: ಟ್ವೀಟ್ ಮೂಲಕ ಉದ್ಧವ್ ಠಾಕ್ರೆಯನ್ನು ಕೆಣಕಿದ ಅಮೃತಾ ಫಡಣವೀಸ್‌

ಮಹಾ ಸಂಕಷ್ಟ: 40 ಶಾಸಕರ ಬೆಂಬಲ ಇದೆ ಎಂದ ಏಕನಾಥ್ ಶಿಂಧೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು