ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಧು–ಚನ್ನಿ ಚರ್ಚೆ: ರಾಜಿ ಸೂತ್ರ ಸಿದ್ಧ

ಪಂಜಾಬ್‌ ಕಾಂಗ್ರೆಸ್‌ ಬಿಕ್ಕಟ್ಟು ಶಮನದ ಸುಳಿವು: ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಹಿಂಪಡೆಯಲು ಒಪ್ಪಿಗೆ
Last Updated 30 ಸೆಪ್ಟೆಂಬರ್ 2021, 17:28 IST
ಅಕ್ಷರ ಗಾತ್ರ

ನವದೆಹಲಿ: ಕೆಲವು ನೇಮಕಾತಿಗಳ ವಿಚಾರದಲ್ಲಿ ಕೆರಳಿ ಪಂಜಾಬ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನವಜೋತ್ ಸಿಂಗ್ ಸಿಧು ಅವರ ಸಿಟ್ಟು ಗುರುವಾರ ಶಮನವಾಗಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಸಿಧು ಭೇಟಿಯಾಗಿದ್ದಾರೆ. ಅವರ ಕೆಲವು ಬೇಡಿಕೆಗಳನ್ನು ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ ಸಂಪುಟಕ್ಕೆ ಕೆಲವರ ಸೇರ್ಪಡೆ, ಪೊಲೀಸ್‌ ಮಹಾನಿರ್ದೇಶಕರು ಮತ್ತು ಅಡ್ವೋಕೇಟ್‌ ಜನರಲ್‌ ನೇಮಕ ವಿಚಾರದಲ್ಲಿ ಸಿಟ್ಟು ಮಾಡಿಕೊಂಡಿದ್ದ ಸಿಧು ಅವರು ಮಂಗಳವಾರ ರಾಜೀನಾಮೆ ನೀಡಿದ್ದರು. ಅವರು ತಮ್ಮ ರಾಜೀನಾಮೆ ಹಿಂತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರು ಪಕ್ಷ ತೊರೆಯುವುದಾಗಿ ಪ್ರಕಟಿಸಿದ ದಿನವೇ ಚನ್ನಿ ಮತ್ತು ಸಿಧು ಅವರು ಭೇಟಿಯಾಗಿ ಸುಮಾರು ಎರಡು ತಾಸು ಚರ್ಚಿಸಿದರು. ಪಂಜಾಬ್‌ ಹೌಸ್‌ನಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸುವುದಕ್ಕಾಗಿ ಸಿಧು ಅವರು ಪಟಿಯಾಲದಿಂದ ಚಂಡೀಗಡಕ್ಕೆ ಬಂದರು.

ಸಿಧು ರಾಜೀನಾಮೆಯಿಂದ ಸೃಷ್ಟಿಯಾಗಿರುವ ಬಿಕ್ಕಟ್ಟು ‍ಪರಿಹರಿಸುವ ಹೊಣೆಯನ್ನು ಚನ್ನಿ ಅವರಿಗೆ ಪಕ್ಷದ ವರಿಷ್ಠರು ವಹಿಸಿದ್ದರು. ಅದರಂತೆ, ಸಿಧು ಅವರನ್ನು ಮಾತುಕತೆಗೆ ಚನ್ನಿ ಆಹ್ವಾನಿಸಿದ್ದರು. ಈ ಆಹ್ವಾನದ ಜತೆಗೆ ಪಕ್ಷವೇ ಸರ್ವೋಚ್ಚ ಎಂಬುದನ್ನು ಸಿಧು ಅವರಿಗೆ ನೆನಪಿಸಿದ್ದರು.

ಎ.ಪಿ.ಎಸ್. ಡಿಯೊಲ್‌ ಅವರನ್ನು ಅಡ್ವೊಕೇಟ್‌ ಜನರಲ್‌ ಆಗಿ ನೇಮಿಸಿದ್ದು ಮತ್ತು ಇಕ್ಬಾಲ್‌ ಪ್ರೀತ್‌ ಸಿಂಗ್‌ ಸಹೋಟ ಅವರಿಗೆ ಪೊಲೀಸ್‌ ಮಹಾ ನಿರ್ದೇಶಕರಾಗಿ ಹೆಚ್ಚುವರಿ ಹೊಣೆ ನೀಡಿದ್ದು ಸಿಧು ಅವರ ಸಿಟ್ಟಿಗೆ ಕಾರಣವಾಗಿತ್ತು. ಹಾಗಾಗಿಯೇ, ಸಭೆಗೆ ಕೆಲ ನಿಮಿಷ ಮೊದಲು ಸಿಧು ಹೀಗೆ ಟ್ವೀಟ್‌ ಮಾಡಿದ್ದರು: ‘ಬಾದಲ್‌ ಸರ್ಕಾರವಿದ್ದಾಗ ಬಿಯಾಬ್ದಿ ಪ್ರಕರಣದ ವಿಶೇಷ ತನಿಖಾ ತಂಡದ ತನಿಖಾಧಿಕಾರಿಯಾಗಿ ಸಹೋಟ ಅವರಿದ್ದರು. ಬಾದಲ್‌ಗಳನ್ನು (ಮುಖ್ಯಮಂತ್ರಿಯಾಗಿದ್ದ ಪ್ರಕಾಶ್‌ ಸಿಂಗ್‌ ಬಾದಲ್‌ ಕುಟುಂಬದವರು) ದೋಷಮುಕ್ತರನ್ನಾಗಿ ಮಾಡಿದ ಸಹೋಟ, ಇಬ್ಬರು ಸಿಖ್‌ ನಿರಪರಾಧಿ ಯುವಕರು ತಪ್ಪಿತಸ್ಥರು
ಎಂದಿದ್ದರು...’

ಕಾಂಗ್ರೆಸ್‌ ಮುಖಂಡ ಸುನಿಲ್‌ ಜಾಖಡ್‌ ಅವರನ್ನು ಈ ಟ್ವೀಟ್‌ ಕೆರಳಿಸಿದೆ. ಆಗಿದ್ದೇ ಸಾಕಾಗಿದೆ. ಮುಖ್ಯಮಂತ್ರಿಯ ಅಧಿಕಾರವನ್ನು ಪದೇ ಪದೇ ಅಲ್ಲಗಳೆಯುವ ಚಾಳಿಯನ್ನು ನಿಲ್ಲಿಸಿ ಎಂದು ಅವರು ಹೇಳಿದ್ದಾರೆ.

ಚನ್ನಿ ಅವರಿಗೆ ಪಕ್ಷದ ಹೈಕಮಾಂಡ್‌ ಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ. ಇದು ಸಿಧು ಅವರಿಗೆ ಇಷ್ಟ ಆಗಿಲ್ಲ. ಆದರೆ, ಸಿಧು ಅವರ ಆತುರದ ವರ್ತನೆಯನ್ನು ದೀರ್ಘ ಕಾಲ ಸಹಿಸುವುದಿಲ್ಲ ಎಂಬ ಸಂದೇಶವನ್ನೂ ಹೈಕಮಾಂಡ್‌ ರವಾನಿಸಿದೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಇತರ ಹೆಸರುಗಳು ಪರಿಶೀಲನೆಯೂ ಆರಂಭವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT