ಬುಧವಾರ, ಜೂನ್ 16, 2021
23 °C
ಸರ್ಕಾರ ರಚಿಸಿದ ಸಮಿತಿಯ ಅಧ್ಯಯನದಿಂದ ದೃಢ

ಕೋವಿಶೀಲ್ಡ್‌: 26 ಜನರಲ್ಲಿ ಅಡ್ಡ ಪರಿಣಾಮ, ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದಲ್ಲಿ ‘ಕೋವಿಶೀಲ್ಡ್‌’ ಲಸಿಕೆ ಪಡೆದವರಲ್ಲಿ 26 ಮಂದಿ ರಕ್ತಸ್ರಾವ ಹಾಗೂ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗೆ ಒಳಗಾಗಿರುವುದು ಕಂಡುಬಂದಿದೆ ಎಂದು ಲಸಿಕೆಯ ಪ್ರತಿಕೂಲ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಸರ್ಕಾರವು ರಚಿಸಿದ್ದ ಸಮಿತಿ (ಎಇಎಫ್‌ಐ) ತಿಳಿಸಿದೆ.

ದೇಶದಲ್ಲಿ ಲಸಿಕಾ ಅಭಿಯಾನ ಆರಂಭಿಸಿದ ನಂತರ ಈವರೆಗೆ 23,000 ಜನರಲ್ಲಿ ಪ್ರತಿಕೂಲ ಪರಿಣಾಮಗಳಾಗಿರುವುದು ಕಂಡುಬಂದಿದೆ. ಅದರಲ್ಲಿ 700 ಮಂದಿಯಲ್ಲಿ ಗಂಭೀರ ಸ್ವರೂಪದ ಸಮಸ್ಯೆಗಳು ಕಾಣಿಸಿವೆ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಅತಿ ಕಡಿಮೆ ಎನಿಸುವಷ್ಟು ಆದರೆ, ಅಪಾಯಕಾರಿಯಾದ ಥ್ರಂಬೊಎಂಬಾಲಿಕ್ ಪ್ರಕರಣಗಳು ವರದಿಯಾಗಿವೆ ಎಂದು ಎಇಎಫ್‌ಐ ದಾಖಲೆಗಳು ಹೇಳಿವೆ. ಬ್ರಿಟನ್‌ನಲ್ಲಿ ಇದರ ಪ್ರಮಾಣ ಭಾರತಕ್ಕಿಂತ ಹೆಚ್ಚಾಗಿದೆ. ಅಲ್ಲಿ 10 ಲಕ್ಷ ಡೋಸ್‌ಗಳಲ್ಲಿ ನಾಲ್ಕು ಜನರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಜರ್ಮನಿಯಲ್ಲಿ ಇದರ ಪ್ರಮಾಣ 10 ಲಕ್ಷದಲ್ಲಿ 10ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

‘ಗಂಭೀರ ಸ್ವರೂಪದ 498 ಪ್ರಕರಣಗಳ ವಿಸ್ತೃತ ಅಧ್ಯಯನವನ್ನು ಎಇಎಫ್‌ಐ ಪೂರ್ಣಗೊಳಿಸಿದೆ. ಅದರಲ್ಲಿ 26 ಪ್ರಕರಣಗಳು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದವುಗಳಾಗಿವೆ. ರಕ್ತನಾಳದಲ್ಲಿ ಹೆಪ್ಪುಗಟ್ಟಿದ ರಕ್ತವು ಆನಂತರ ಸಡಿಲಗೊಂಡು ರಕ್ತದ ಮೂಲಕ ಹರಿದುಹೋಗಿ ಇನ್ನೊಂದು ನಾಳವನ್ನು ಗಾಸಿಗೊಳಿಸುವ ಸಾಧ್ಯತೆ ಇರುವಂಥ (ಥ್ರಂಬೊಎಂಬಾಲಿಕ್) ಪ್ರಕರಣಗಳು ಇವು. ಇಂಥ ಪ್ರಕರಣಗಳ ಪ್ರಮಾಣವು ಭಾರತದಲ್ಲಿ 10 ಲಕ್ಷ ಡೋಸ್‌ಗಳಲ್ಲಿ 0.61ರಷ್ಟಿದೆ. ಕೋವ್ಯಾಕ್ಸಿನ್‌ ಲಸಿಕೆ ಪಡೆದವರಲ್ಲಿ ಇಂಥ ಪ್ರಕರಣ ಕಂಡುಬಂದಿಲ್ಲ’ ಎಂದು ಸಚಿವಾಲಯ ತಿಳಿಸಿದೆ.

ಕೆಲವು ದೇಶಗಳಲ್ಲಿ ಲಸಿಕೆ ನೀಡಿದ ಬಳಿಕ, ವಿಶೇಷವಾಗಿ ಕೋವಿಶೀಲ್ಡ್‌ ಲಸಿಕೆ ಪಡೆದ ಕೆಲವರಲ್ಲಿ ಸಮಸ್ಯೆಗಳು ಕಾಣಿಸಿಕೊಂಡ ಕಾರಣಕ್ಕೆ ಈ ವಿಚಾರವಾಗಿ ಸಮಗ್ರ ಅಧ್ಯಯನ ನಡೆಸಲು ಮಾರ್ಚ್‌ 11ರಂದು ಸರ್ಕಾರವು ತೀರ್ಮಾನಿಸಿತ್ತು.

ಏ.3ರವರೆಗಿನ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 7.54 ಕೋಟಿ ಜನರಿಗೆ ಲಸಿಕೆ ಹಾಕಲಾಗದೆ. ಅದರಲ್ಲಿ 6.86 ಕೋಟಿ ಜನರು ಕೋವಿಶೀಲ್ಡ್‌ ಲಸಿಕೆ ಪಡೆದಿದ್ದಾರೆ. ಇವರಲ್ಲಿ 684 ಜಿಲ್ಲೆಗಳ 23,000 ಮಂದಿಯ ಮೇಲೆ ವ್ಯತಿರಿಕ್ತ ಪರಿಣಾಮ ಆಗಿರುವುದು ಕೊ–ವಿನ್‌ ವೇದಿಕೆಯಲ್ಲೇ ದಾಖಲಾಗಿದೆ.

ಥ್ರಾಂಬೊಎಂಬಾಲಿಕ್ ಪ್ರಕರಣಗಳು ಸಾಮಾನ್ಯವಾಗಿ ವರದಿಯಾಗುತ್ತಲೇ ಇರುತ್ತವೆ. ಆದರೆ ಯುರೋಪ್‌ಗೆ ಹೋಲಿಸಿದರೆ ದಕ್ಷಿಣ ಹಾಗೂ ಅಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಇದರ ಪ್ರಮಾಣ ಶೇ 70ರಷ್ಟು ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಲಸಿಕೆ ಪಡೆದ 20 ದಿನದೊಳಗೆ ಥ್ರಂಬೊಎಂಬಾಲಿಕ್‌ನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಉಸಿರಾಟದ ಸಮಸ್ಯೆ, ಎದೆಯಲ್ಲಿ ನೋವು, ಕೈ–ಕಾಲುಗಳಲ್ಲಿ ನೋವು, ಅಲ್ಲಲ್ಲಿ ಕೆಂಪು ಕಲೆಗಳು ಕಾಣಿಸುವುದು, ಲಸಿಕೆ ನೀಡಿದ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿದಂತೆ ಕಾಣಿಸುವುದು, ನಿರಂತರ ಹೊಟ್ಟೆನೋವು ಇವೆಲ್ಲವೂ ಈ ಕಾಯಿಲೆಯ ಲಕ್ಷಣಗಳಾಗಿವೆ. ಈ ವಿಚಾರವಾಗಿ ಲಸಿಕೆ ಪಡೆಯುವವರಲ್ಲಿ ಜಾಗೃತಿ ಮೂಡಿಸುವಂತೆ ಆರೋಗ್ಯ ಕಾರ್ಯಕರ್ತರಿಗೆ ಪ್ರತ್ಯೇಕ ಸಲಹೆಗಳನ್ನು ಜಾರಿ ಮಾಡುವುದಾಗಿ ಆರೋಗ್ಯ ಸಚಿವಾಲಯ ಹೇಳಿದೆ.

ರಕ್ತ ಹೆಪ್ಪುಗಟ್ಟುವ ಪ್ರಕರಣ

– 10 ಲಕ್ಷ ಡೋಸ್‌ಗಳಲ್ಲಿ 0.16ಜನರಲ್ಲಿ ಮಾತ್ರ ಸಮಸ್ಯೆ

– ಕೋವ್ಯಾಕ್ಸಿನ್‌ ಪಡೆದವರಲ್ಲಿ ಸಮಸ್ಯೆ ಕಾಣಿಸಿಲ್ಲ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು