ಗುರುವಾರ , ಮೇ 6, 2021
23 °C

ಕೃಷಿ ಕ್ಷೇತ್ರಕ್ಕೆ ಆಧುನಿಕತೆಯ ಅಗತ್ಯವಿದೆ: ಪ್ರಧಾನಿ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೃಷಿ ಕ್ಷೇತ್ರಕ್ಕೆ ಆಧುನಿಕತೆಯ ಅಗತ್ಯವಿದೆ ಎಂದು ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಈಗಾಗಲೇ ಸಾಕಷ್ಟು ಸಮಯವೂ ಕಳೆದುಹೋಗಿದೆ ಎಂದಿದ್ದಾರೆ.

‘ಮನ್‌ ಕಿ ಬಾತ್‌’ ಕಾರ್ಯಕ್ರಮದ 75ನೇ ಸಂಚಿಕೆಯಲ್ಲಿ ಭಾನುವಾರ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಿದೆ. ಜೀವನದ ಹೊಸತನದ ಪ್ರತಿ ಹಂತದಲ್ಲೂ ಆಧುನೀಕರಣ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

‘ಕೃಷಿ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು, ರೈತರ ಆದಾಯವನ್ನು ವೃದ್ಧಿಸಲು, ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಜೊತೆಗೆ ಹೊಸ ಪರ್ಯಾಯಗಳು, ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದು ಅಷ್ಟೇ ಮುಖ್ಯ’ ಎಂದು ಹೇಳಿದರು.

ಶ್ವೇತ ಕ್ರಾಂತಿಯ ಸಂದರ್ಭದಲ್ಲಿ ದೇಶವು ಇದಕ್ಕೆ ಸಾಕ್ಷಿಯಾಗಿದೆ ಮತ್ತು ಜೇನು ಸಾಕಾಣಿಕೆ ಕೂಡ ಒಂದು ಪರ್ಯಾಯವಾಗಿದೆ ಎಂದರು.

ಕೋವಿಡ್‌–19ರ ಪ್ರಸರಣವನ್ನು ತಗ್ಗಿಸಲು ಕಳೆದ ವರ್ಷದ ಮಾರ್ಚ್‌ನಲ್ಲಿ ದೇಶದ ಜನರು ಜನತಾ ಕರ್ಫ್ಯೂ ಬಗ್ಗೆ ಕೇಳಿದ್ದನ್ನು ಪ್ರಧಾನಿ ಈ ವೇಳೆ ಸ್ಮರಿಸಿದರು. ಮೊದಲಿನಿಂದಲೂ, ಭಾರತದ ಜನರು ಕೋವಿಡ್‌–19ರ ವಿರುದ್ಧ ಉತ್ಸಾಹಭರಿತ ಹೋರಾಟವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು. ಪ್ರಧಾನಿ ಮನವಿಯ ಮೇರೆಗೆ ಕಳೆದ ವರ್ಷದ ಮಾರ್ಚ್ 22 ರಂದು ಜನತಾ ಕರ್ಫ್ಯೂ ವಿಧಿಸಲಾಗಿತ್ತು.

‘ಕಳೆದ ವರ್ಷ ನಮ್ಮ ಬಳಿ ಏನೂ ಇರಲಿಲ್ಲ, ಜಾಗತಿಕವಾಗಿ ಲಸಿಕೆ ಯಾವಾಗ ಬರುತ್ತದೆಯೊ ಎಂಬ ಪ್ರಶ್ನೆ ಕಾಡುತ್ತಿತ್ತು. ಆದರೆ ಈಗ ಭಾರತವೇ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ನಡೆಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.

ಭಾರತದ 'ನಾರಿ ಶಕ್ತಿ' ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಕ್ರಿಕೆಟ್‌ ಆಟಗಾರ್ತಿ ಮಿಥಾಲಿ ರಾಜ್ ಮತ್ತು ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಅವರ ಇತ್ತೀಚಿನ ಕ್ರೀಡಾ ಸಾಹಸಗಳನ್ನು ಶ್ಲಾಘಿಸಿದರು.

ಮನ್ ಕಿ ಬಾತ್ 75 ಸಂಚಿಕೆಯನ್ನು ಪೂರ್ಣಗೊಳಿಸುವಾಗ ಪ್ರಧಾನಿ ಅವರು, 2014ರಲ್ಲಿ ಆರಂಭವಾದ ಈ ಪ್ರಯಾಣ ನಿನ್ನೆಯಷ್ಟೇ ಆರಂಭವಾದಂತೆ ಭಾಸವಾಗುತ್ತಿದೆ. ಎಲ್ಲ ಕೇಳುಗರಿಗೆ ಧನ್ಯವಾದ ಎಂದು ಹೇಳಿದರು.

ಮನ್ ಕಿ ಬಾತ್ ಸಮಯದಲ್ಲಿ, ನಾವು ವ್ಯಾಪಕವಾದ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ವೈವಿಧ್ಯಮಯ ವಿಷಯಗಳನ್ನು ಒಳಗೊಂಡಂತೆ ತುಂಬಾ ಕಲಿತಿದ್ದೇವೆ ಎಂದರು.

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ಮನ್‌ ಕಿ ಬಾತ್‌ 75ರ ಸಂಚಿಕೆ ಮುಗಿದಿದೆ. ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವು ನಾಗರಿಕನಾಗಿ ನಮ್ಮ ಕರ್ತವ್ಯಗಳ ಬಗ್ಗೆ ಯೋಚಿಸಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು