ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಗಡಿ, ಯೋಧರನ್ನು ಯಾರೂ ಲಘುವಾಗಿ ಪರಿಗಣಿಸಬಾರದು: ಅಮಿತ್ ಶಾ

Last Updated 5 ಡಿಸೆಂಬರ್ 2021, 11:12 IST
ಅಕ್ಷರ ಗಾತ್ರ

ಜೈಸಲ್ಮೇರ್: ಭಾರತದ ಗಡಿ ಹಾಗೂ ಯೋಧರನ್ನು ಯಾರೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ತೋರಿಸಿಕೊಟ್ಟಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.

ಪುಲ್ವಾಮಾ ಮತ್ತು ಉರಿ ದಾಳಿಯ ನಂತರ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿರುವ ನರೇಂದ್ರ ಮೋದಿ ಸರ್ಕಾರವು ಭಾರತದ ಗಡಿ ಮತ್ತು ಯೋಧರನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದನ್ನು ವಿಶ್ವಕ್ಕೆ ತೋರಿಸಿದೆ ಎಂದು ಹೇಳಿದ್ದಾರೆ.

ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) 57ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮಾತನಾಡಿದ ಅಮಿತ್ ಶಾ, 'ಗಡಿ ಭದ್ರತೆಯು ರಾಷ್ಟ್ರೀಯ ಭದ್ರತೆಗೆ ಸಮಾನ' ಎಂದು ಹೇಳಿದರು.

'ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು 2014ರಿಂದ ಗಡಿ ಭದ್ರತೆಗೆ ವಿಭಿನ್ನ ಪ್ರಾಮುಖ್ಯತೆಯನ್ನು ನೀಡಿದೆ. ನಮ್ಮ ಗಡಿಯೊಳಗೆ ನುಸುಳಿದರೆ ಅಥವಾ ಭದ್ರತಾ ಸಿಬ್ಬಂದಿಯ ಮೇಲೆ ಎಲ್ಲಿಯಾದರೂ ದಾಳಿ ನಡೆದರೆ ನಾವು ತಕ್ಷಣ ಪ್ರತಿಕ್ರಿಯಿಸುತ್ತೇವೆ. ನಮ್ಮ ಗಡಿ ಹಾಗೂ ಯೋಧರನ್ನು ಯಾರೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದೇವೆ' ಎಂದು ಹೇಳಿದರು.

'2016ರ ಉರಿ ಹಾಗೂ 2019ರ ಪುಲ್ವಾಮಾ ಉಗ್ರ ದಾಳಿಯ ಬಳಿಕ ವೈಮಾನಿಕ ಹಾಗೂ ಸರ್ಜಿಕಲ್ ಸ್ಟ್ರೈಕ್‌ ನಡೆಸಲು ಮೋದಿ ಸರ್ಕಾರವು ದೃಢ ನಿರ್ಧಾರವನ್ನು ಕೈಗೊಂಡಿತು. ಇಡೀ ವಿಶ್ವವೇ ಇದನ್ನು ಶ್ಲಾಘಿಸಿದೆ' ಎಂದು ಹೇಳಿದರು.

'ಗಡಿ ರಕ್ಷಣೆಯ ನಿಟ್ಟಿನಲ್ಲಿ ಭದ್ರತಾ ಪಡೆಗಳು ಅನುಕರಣೀಯ ಕೆಲಸ ಮಾಡಿದಾಗ ಯಾವುದೇ ರಾಷ್ಟ್ರವು ಪ್ರಗತಿ ಹಾಗೂ ಏಳಿಗೆ ಹೊಂದಲು ಸಾಧ್ಯ' ಎಂದು ಶಾ ಹೇಳಿದ್ದಾರೆ

ಗಡಿಯಲ್ಲಿ ಇತ್ತೀಚಿನ ಡ್ರೋನ್ ದಾಳಿಯ ಬೆದರಿಕೆ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವರು, ಯೋಧರ ರಕ್ಷಣೆ ಹಾಗೂ ಗಡಿ ಭದ್ರತೆಗಾಗಿ ಅತ್ಯುತ್ತಮ ಜಾಗತಿಕ ತಂತ್ರಜ್ಞಾನ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

'ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಬಿಎಸ್‌ಎಫ್, ಎನ್‌ಎಸ್‌ಜಿ ಹಾಗೂ ಡಿಆರ್‌ಡಿಒ ಜಂಟಿಯಾಗಿ ದೇಶೀಯ ಡ್ರೋನ್ ಪ್ರತಿರೋಧಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿವೆ ಮತ್ತು ಈ ತಂತ್ರಜ್ಞಾನವನ್ನು ಶೀಘ್ರದಲ್ಲೇ ಲಭ್ಯವಾಗುಂತೆ ಮಾಡಲಾಗುವುದು' ಎಂದು ಹೇಳಿದರು.

ಗಡಿ ಭದ್ರತೆಗಾಗಿ ಉತ್ತಮ ಗಡಿ ಮೂಲಸೌಕರ್ಯವನ್ನು ಅಭಿವೃದ್ದಿಪಡಿಸಲು ಸರ್ಕಾರ ಬದ್ಧವಾಗಿದೆ. 2008ರಿಂದ 2014ರ ವರೆಗೆ ಗಡಿಯಲ್ಲಿ ರಸ್ತೆ ನಿರ್ಮಾಣದ ಬಜೆಟ್ ಸುಮಾರು ₹23,700 ಕೋಟಿ ಆಗಿತ್ತು. 2014ರಿಂದ 2020ರ ಅವಧಿಯಲ್ಲಿ ₹44,600 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT