ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮುಖ ಹುದ್ದೆಗಳ ಸೇವಾ ನಿಯಮಗಳನ್ನು ಬದಲಿಸಿದ ಕೇಂದ್ರ ಸರ್ಕಾರ

ಮೂಲಭೂತ ನಿಯಮಗಳಿಗೆ ತಿದ್ದುಪಡಿ
Last Updated 15 ನವೆಂಬರ್ 2021, 21:56 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ‘ಮೂಲಭೂತ ನಿಯಮಗಳು–1922’ಕ್ಕೆ ತಿದ್ದುಪಡಿ ತಂದಿದ್ದು, ಈ ನಿಯಮಗಳ ವ್ಯಾಪ್ತಿಯಿಂದ ವಿದೇಶಾಂಗ ಕಾರ್ಯದರ್ಶಿಯ ಹುದ್ದೆಯನ್ನು ತೆಗೆದುಹಾಕಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ನಿರ್ದೇಶಕರ ಹುದ್ದೆಯ ಅಧಿಕಾರದ ಅವಧಿಯನ್ನು ಎರಡರಿಂದ ಐದು ವರ್ಷಗಳಿಗೆ ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸಿದ ಮರುದಿನವೇ, ಈ ತಿದ್ದುಪಡಿ ತಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಈ ಸಂಬಂಧ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ಸೋಮವಾರ ಅಧಿಸೂಚನೆ ಹೊರಡಿಸಿದೆ. ಆದರೆ, ಬದಲಾವಣೆ ತಂದಿರುವುದರ ಉದ್ದೇಶ ಏನು ಎಂಬುದನ್ನು ಅಧಿಸೂಚನೆಯಲ್ಲಿ ವಿವರಿಸಿಲ್ಲ.

‘ವಿದೇಶಾಂಗ ಕಾರ್ಯದರ್ಶಿಯ ಹುದ್ದೆಯು ಭಾರತೀಯ ವಿದೇಶಾಂಗ ಸೇವಾ ನಿಯಮಗಳ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಾಗಿ ಆ ಹುದ್ದೆಯನ್ನು ಮೂಲಭೂತ ನಿಯಮಗಳ ವ್ಯಾಪ್ತಿಯಿಂದ ತೆಗೆದುಹಾಕಲಾಗಿದೆ’ ಎಂದು ಸಚಿವಾಲಯದ ಮೂಲಗಳು ಹೇಳಿವೆ. ಆದರೆ ಇಂತಹುದೇ ಸೇವಾ ನಿಯಮಗಳ ವ್ಯಾಪ್ತಿಯಲ್ಲಿ ಬರುವ ಗೃಹ ಕಾರ್ಯದರ್ಶಿ ಮತ್ತು ರಕ್ಷಣಾ ಕಾರ್ಯದರ್ಶಿ ಹುದ್ದೆಗಳು, ಮೂಲಭೂತ ನಿಯಮಗಳ ವ್ಯಾಪ್ತಿಯಲ್ಲಿಯೂ ಬರುತ್ತವೆ. ಈ ಎರಡೂ ಹುದ್ದೆಗಳನ್ನು ಮೂಲಭೂತ ನಿಯಮಗಳ ವ್ಯಾಪ್ತಿಯಲ್ಲಿಯೇ ಉಳಿಸಿಕೊಳ್ಳಲಾಗಿದೆ.

ಅವಧಿ ವಿಸ್ತರಣೆ

ರಕ್ಷಣಾ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಗುಪ್ತಚರ ಇಲಾಖೆ ನಿರ್ದೇಶಕ, ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಕಾರ್ಯದರ್ಶಿ, ಸಿಬಿಐ ನಿರ್ದೇಶಕ ಮತ್ತು ಜಾರಿ ನಿರ್ದೇಶನಾಲಯದ ನಿರ್ದೇಶಕರ ಅಧಿಕಾರದ ಅವಧಿಯನ್ನು ವಿಸ್ತರಿಸಲು ಅವಕಾಶ ಮಾಡಿಕೊಡುವಂತೆ ಮೂಲಭೂತ ನಿಯಮಗಳು–1922ಕ್ಕೆ ಇದೇ ಅಧಿಸೂಚನೆಯಲ್ಲಿ ತಿದ್ದುಪಡಿ ತರಲಾಗಿದೆ.

‘ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ಹುದ್ದೆಗಳ ಅಧಿಕಾರದ ಅವಧಿಯನ್ನು ವಿಸ್ತರಿಸಬಹುದು’ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಅಧಿವೇಶನದಲ್ಲಿ ಪ್ರಸ್ತಾಪಕ್ಕೆ ಸಿದ್ಧತೆ

ಸಂಸತ್ತಿನ ಅಧಿವೇಶನ ಆರಂಭವಾಗಲು ಎರಡು ವಾರವಷ್ಟೇ ಇರುವಾಗ ಸುಗ್ರೀವಾಜ್ಞೆ ಮೂಲಕ ಸಿಬಿಐ ಮತ್ತು ಇ.ಡಿ. ನಿರ್ದೇಶಕರ ಅಧಿಕಾರದ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸಂಸತ್ತಿನಲ್ಲಿ ಪ್ರಶ್ನಿಸಲು ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ.

‘ಇನ್ನೆರಡು ವಾರಗಳಲ್ಲಿ ಸಂಸತ್ತಿನ ಅಧಿವೇಶನ ಆರಂಭವಾಗಲಿದೆ. ಭಾರತವು ಚುನಾಯಿತ ನಿರಂಕುಶ ಪ್ರಭುತ್ವವಾಗುವುದನ್ನು ತಡೆಯಲು ಏನು ಬೇಕೋ ಅವೆಲ್ಲವನ್ನೂ ವಿರೋಧ ಪಕ್ಷಗಳು ಮಾಡುತ್ತವೆ ಎಂಬ ಭರವಸೆ ನೀಡುತ್ತೇನೆ’ ಎಂದು ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ. ಈ ಸುಗ್ರೀವಾಜ್ಞೆಗಳ ವಿರುದ್ಧ ರಾಜ್ಯಸಭೆಯಲ್ಲಿ ನಿರ್ಣಯ ಮಂಡಿಸುವುದಾಗಿ ಟಿಎಂಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT