ಮಂಗಳವಾರ, ಜನವರಿ 18, 2022
24 °C

ತೆಲಂಗಾಣದಲ್ಲಿ ಮುಸ್ಲಿಮರ ಮದುವೆ ಭಾರೀ ಸಂಖ್ಯೆಯಲ್ಲಿ ಹೆಚ್ಚಳ .. ಕಾರಣ ಇಲ್ಲಿದೆ.

ಐಎಎನ್ಎಸ್ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಏರಿಸುವ ಕೇಂದ್ರ ಸರ್ಕಾರದ ನಿರ್ಧಾರವು ಹೈದರಾಬಾದ್ ಮತ್ತು ತೆಲಂಗಾಣದ ಇತರ ನಗರಗಳಲ್ಲಿ ಮುಸ್ಲಿಂ ಸಮುದಾಯದಲ್ಲಿ ವಿವಾಹಗಳ ಹೆಚ್ಚಳಕ್ಕೆ ಕಾರಣವಾಗಿದೆ.

ಕಳೆದ ತಿಂಗಳು ಸಂಸತ್ತಿನಲ್ಲಿ ಬಾಲ್ಯವಿವಾಹ ತಿದ್ದುಪಡಿ ವಿಧೇಯಕ 2021 ಅನ್ನು ಮಂಡಿಸಿದಾಗಿನಿಂದ ಉಂಟಾಗಿರುವ ತಲ್ಲಣದಿಂದಾಗಿ ರಾಜ್ಯದಲ್ಲಿ ಪ್ರತಿದಿನ ನೂರಾರು ವಿವಾಹಗಳು ನಡೆಯುತ್ತಿವೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ತಿಳಿಸಿದೆ.

ವಿರೋಧ ಪಕ್ಷಗಳ ಆಕ್ಷೇಪಣೆಗಳ ನಂತರ ಮಸೂದೆಯನ್ನು ಆಯ್ಕೆ ಸಮಿತಿಗೆ ಶಿಫಾರಸು ಮಾಡಲಾಗಿದೆ. ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಸೂದೆಗೆ ಸಂಸತ್ತಿನ ಅನುಮೋದನೆ ಸಿಗುತ್ತದೆ ಎಂಬ ಆತಂಕವು ಈ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷನಿಗದಿಯಾಗಿರುವ ಮದುವೆಗಳನ್ನು ಬೇಗ ನಡೆಸಲು ಪ್ರೇರೇಪಿಸುತ್ತಿದೆ.

ಈ  ಕಾನೂನು ಜಾರಿಯಾದರೆ ಮೂರು ವರ್ಷಗಳ ಕಾಲ ತಮ್ಮ ಹೆಣ್ಣು ಮಕ್ಕಳ ವಿವಾಹ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಪೋಷಕರು ತಕ್ಷಣ ಮದುವೆಗೆ ಮುಂದಾಗುವಂತೆ ವರನ ಪೋಷಕರಿಗೆ ಮನವರಿಕೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಾನೂನಿನ ಪ್ರಕಾರ ಮದುವೆಯ ವಿಧಿ ವಿಧಾನಗಳನ್ನು ಪೂರ್ಣಗೊಳಿಸುತ್ತಿದ್ದಾರೆ.

ಹಲವು ಖಾಜಿಗಳು ಪ್ರತಿದಿನ 10-20 ಮದುವೆ ನಡೆಸುತ್ತಿದ್ದಾರೆ. ಮಸೀದಿಗಳು ಮತ್ತು ಫಂಕ್ಷನ್ ಹಾಲ್‌ಗಳಲ್ಲಿ ಮಾತ್ರವಲ್ಲದೆ ಮನೆಗಳಲ್ಲಿಯೂ ನಿಕಾಹ್ ಏರ್ಪಡಿಸಲಾಗುತ್ತಿದೆ. ರಾಜ್ಯ ವಕ್ಫ್ ಮಂಡಳಿಯಿಂದ ನೇಮಕಗೊಂಡ ಖಾಜಿಗಳು ಕಾನೂನು ವಿಧಿ ವಿಧಾನಗಳನ್ನು ಪೂರ್ಣಗೊಳಿಸಲು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಧಾವಿಸುತ್ತಿರುವುದು ಕಂಡುಬರುತ್ತಿದೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ. .

ನಿಕಾಹ್‌ಗಳನ್ನು ಸಾಮಾನ್ಯವಾಗಿ ಮಸೀದಿಗಳಲ್ಲಿ ಸಂಜೆ ನಡೆಸಲಾಗುತ್ತದೆ. ಆದರೆ, ಭಾರಿ ಬೇಡಿಕೆಯ ಕಾರಣ ಮಧ್ಯಾಹ್ನವೂ ಮಾಡಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ, ಮಸೀದಿಗಳಲ್ಲಿ ಪ್ರತಿದಿನ ಒಂದರಿಂದ ಎರಡು ನಿಕಾಹ್‌ಗಳು ನಡೆಯುತ್ತಿದ್ದವು. ಆದರೆ, ಈಗ ಈ ಸಂಖ್ಯೆ ಎಂಟು-ಹತ್ತಕ್ಕೆ ಏರಿದೆ.

ಈ ಹಿಂದೆ ಇಂತಹ ಪರಿಸ್ಥಿತಿಯನ್ನು ಎಂದೂ ನೋಡಿರಲಿಲ್ಲ ಎನ್ನುತ್ತಾರೆ ಖಾಜಿಗಳು. ಮದುವೆಯ ಋತುವಿನ ಉತ್ತುಂಗದಲ್ಲಿಯೂ ಅವರು 3-4 ನಿಕಾಹ್‌ಗಳನ್ನು ಮಾಡುತ್ತಿದ್ದೆವು ಎಂದು ಹೇಳುತ್ತಾರೆ.

‘ಇದು ಅಭೂತಪೂರ್ವ ಬೆಳವಣಿಗೆಯಾಗಿದೆ. ಪೋಷಕರು ತುಂಬಾ ಚಿಂತಿತರಾಗಿದ್ದಾರೆ ಮತ್ತು ಅವರು ನಿಕಾಹ್ ಅನ್ನು ಸಾಧ್ಯವಾದಷ್ಟು ಬೇಗ ನಡೆಸಬೇಕೆಂದು ಬಯಸುತ್ತಿದ್ದಾರೆ’ಎಂದು ಖಾಜಿಯೊಬ್ಬರು  ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ವಕ್ಫ್ ಬೋರ್ಡ್‌ನಿಂದ ಮದುವೆ ಪ್ರಮಾಣಪತ್ರಗಳನ್ನು ಪಡೆದು ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಆತುರದಲ್ಲಿ ಪಾಲಕರು ಇದ್ದಾರೆ.

ಗಾಬರಿಯಾಗಬೇಡಿ ಎಂದು ಮುಸ್ಲಿಂ ಮುಖಂಡರು ಮತ್ತು ಸಂಘಟನೆಗಳು ಪೋಷಕರಿಗೆ ಮನವಿ ಮಾಡಿರುವುದು ಮೇಲ್ನೋಟಕ್ಕೆ ಹೆಚ್ಚಿನ ಪರಿಣಾಮ ಬೀರುತ್ತಿಲ್ಲ. ಒಂದು ವೇಳೆ ಮಸೂದೆ ಅಂಗೀಕಾರವಾದರೆ ಇನ್ನೂ ಒಂದೆರಡು ವರ್ಷ ಕಾಯಬೇಕಾಗುವುದಲ್ಲದೆ ಕೆಲ ಮದುವೆಗಳ ರದ್ದತಿಗೂ ಕಾರಣವಾಗಬಹುದು ಎಂಬ ಭಯ ಪಾಲಕರದ್ದು.

ಈ ಪರಿಸ್ಥಿತಿಯು ತೆಲಂಗಾಣ ರಾಜ್ಯ ವಕ್ಫ್ ಬೋರ್ಡ್‌ನ ಮಧ್ಯ ಪ್ರವೇಶಕ್ಕೆ ದಾರಿಮಾಡಿಕೊಟ್ಟಿದೆ. ಅಧ್ಯಕ್ಷ ಮೊಹಮ್ಮದ್ ಸಲೀಂ ಖಾಜಿಗಳೊಂದಿಗೆ ಸಭೆ ನಡೆಸಿ, ಪೋಷಕರಲ್ಲಿನ ಆತಂಕವನ್ನು ನಿವಾರಿಸಲು ಸಹಾಯ ಮಾಡಲು ಅವರಿಗೆ ಸಲಹೆ ನೀಡಿದ್ದಾರೆ.
 
‘ಮಸೂದೆ ಇನ್ನೂ ಅಂಗೀಕಾರವಾಗಿಲ್ಲ ಮತ್ತು ಮಹಿಳೆಯರಿಗೆ ವಿವಾಹದ ಕಾನೂನುಬದ್ಧ ವಯಸ್ಸು 18 ಆಗಿರುವುದರಿಂದ ಗಾಬರಿಯಾಗದಂತೆ ಎರಡೂ ಕಡೆಯವರಿಗೆ ಸಲಹೆ ನೀಡುವಂತೆ ನಾನು ಖಾಜಿಗಳಿಗೆ ಸಲಹೆ ನೀಡಿದ್ದೇನೆ. ಆತುರದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ನಾವು ಪೋಷಕರಿಗೆ ಮನವಿ ಮಾಡುತ್ತಿದ್ದೇವೆ’ಎಂದು ಸಲೀಂ ಹೇಳಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು