ಮುಸ್ಲಿಮರು ಕಾಂಡೋಮ್ ಹೆಚ್ಚು ಬಳಸುತ್ತಾರೆ: ಭಾಗವತ್‌ಗೆ ಓವೈಸಿ ತಿರುಗೇಟು

ಹೈದರಾಬಾದ್: ಮುಸ್ಲಿಮರು ಕಾಂಡೋಮ್‌ಗಳನ್ನು ಹೆಚ್ಚು ಬಳಸುತ್ತಾರೆ, ಜನಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಆಲ್ ಇಂಡಿಯಾ ಮಜಿಲಿಸ್-ಇ-ಇತ್ಹೇದುಲ್ ಮುಸ್ಲೀಮೀನ್ (ಎಐಎಂಐಎಂ) ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಭಾನುವಾರ ಹೇಳಿದ್ದಾರೆ.
ಜನಸಂಖ್ಯೆ ಅಸಮತೋಲನದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಓವೈಸಿ ತಿರುಗೇಟು ನೀಡಿದ್ದು, ಮುಸ್ಲಿಮರು ಇಬ್ಬರು ಮಕ್ಕಳ ನಡುವೆ ಅಂತರ ಕಾಯ್ದುಕೊಳ್ಳುವ ಮೂಲಕ ಉತ್ತಮ ಕುಟುಂಬ ಯೋಜನೆ ಹೊಂದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಭಾರತ ಸರ್ವತೋಮುಖ ಬೆಳವಣಿಗೆ ಆರ್‌ಎಸ್‌ಎಸ್ ಧ್ಯೇಯ: ಮೋಹನ್ ಭಾಗವತ್
ಹೈದರಾಬಾದ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಭಾಗವತ್ ಈ ಕುರಿತು ಚರ್ಚಿಸುವುದಿಲ್ಲ, ಜನಸಂಖ್ಯೆ ಹೆಚ್ಚಳದ ಬಗ್ಗೆ ಚರ್ಚಿಸುವ ಮುನ್ನ ಅಂಕಿಅಂಶಗಳನ್ನು ಮುಂದಿಡಬೇಕು ಎಂದು ಹೇಳಿದರು.
ಮುಸ್ಲಿಮರ ಜನಸಂಖ್ಯೆ ಹೆಚ್ಚಳವಾಗುತ್ತಿಲ್ಲ. ಈ ಬಗ್ಗೆ ಯಾವುದೇ ಆತಂಕ ಬೇಡ. ಮುಸ್ಲಿಮರ ಜನಸಂಖ್ಯೆ ಇಳಿಮುಖವಾಗುತ್ತಿದೆ. ಇಬ್ಬರು ಮಕ್ಕಳ ನಡುವೆ ಹೆಚ್ಚು ಅಂತರ ಕಾಯ್ದುಕೊಳ್ಳುವವರು ಯಾರು ಗೊತ್ತಾ? ಮುಸ್ಲಿಮರೇ ಹೆಚ್ಚು ಅಂತರ ಕಾಯ್ದುಕೊಳ್ಳುತ್ತಾರೆ. ಕಾಂಡೋಮ್‌ಗಳನ್ನು ಯಾರು ಹೆಚ್ಚು ಬಳಸುತ್ತಾರೆ ? ನಮ್ಮವರೇ ಹೆಚ್ಚು ಬಳಸುತ್ತಾರೆ. ಭಾಗವತ್ ಈ ಕುರಿತು ಮಾತನಾಡುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಭಾಗವತ್– ಇಮಾಮ್ ಸಂಘದ ಅಧ್ಯಕ್ಷರ ಭೇಟಿ: ಆರ್‌ಎಸ್‌ಎಸ್ ಸಮರ್ಥನೆ
ನಾಗ್ಪುರದಲ್ಲಿ ದಸರಾ ವೇಳೆ ಹೇಳಿಕೆ ನೀಡಿದ್ದ ಭಾಗವತ್, ದೇಶದಲ್ಲಿ ಸಮುದಾಯ ಆಧಾರಿತ ಜನಸಂಖ್ಯಾ ಅಸಮತೋಲನವನ್ನು ಕಡೆಗಣಿಸುವಂತಿಲ್ಲ. ಜನಸಂಖ್ಯೆಯ ಅಸಮತೋಲನವು ಭೌಗೋಳಿಕ ಗಡಿಗಳ ಬದಲಾವಣೆಗೆ ಕಾರಣವಾಗುತ್ತದೆ. ದೇಶದಲ್ಲಿ ಎಲ್ಲ ಧಾರ್ಮಿಕ ಸಮುದಾಯಗಳಿಗೆ ಅನ್ವಯವಾಗುವಂತೆ ಜನಸಂಖ್ಯಾ ನೀತಿಯನ್ನು ಜಾರಿಗೆ ತರಬೇಕು ಎಂದು ಹೇಳಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.