ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಬೆದರಿಕೆಗೆ ಹೆದರಲ್ಲ: ಎನ್‌ಸಿಪಿ

Last Updated 26 ಆಗಸ್ಟ್ 2021, 12:50 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕೇಂದ್ರ ಸಚಿವ ನಾರಾಯಣ್ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಮಹಾ ವಿಕಾಸ ಅಘಾಡಿಯ (ಎಂವಿಎ) ಸಚಿವರು ಮತ್ತು ನಾಯಕರಿಗೆಬಿಜೆಪಿಯು ಬೆದರಿಕೆ ಹಾಕುತ್ತಿದೆ ಎಂದುರಾಜ್ಯದಲ್ಲಿ ಶಿವಸೇನೆ ಜತೆಗೆ ಅಧಿಕಾರ ಹಂಚಿಕೊಂಡಿರುವ ಎನ್‌ಸಿಪಿಯು ಗುರುವಾರ ಆರೋಪಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಸಿಪಿ ವಕ್ತಾರ ಮತ್ತು ರಾಜ್ಯದ ಸಚಿವ ನವಾಬ್ ಮಲಿಕ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಳ್ಳಬಹುದು. ಬಿಜೆಪಿಯು ಎಂವಿಎ ಸಚಿವರು ಮತ್ತು ನಾಯಕರಿಗೆ ಬೆದರಿಕೆ ಹಾಕುತ್ತಿದೆ. ಆದರೆ ಮಹಾರಾಷ್ಟ್ರದ ಯಾವುದೇ ನಾಯಕರು ಬಿಜೆಪಿಯ ಈ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.

‘ಅಧಿಕಾರ ದುರುಪಯೋಗಪಡಿಸಿಕೊಂಡು ಸುಳ್ಳು ದೂರುಗಳನ್ನು ದಾಖಲಿಸುವುದು ಮತ್ತು ನಮ್ಮ ನಾಯಕರನ್ನು ಜೈಲಿಗೆ ಕಳುಹಿಸುವುದು ಬಿಜೆಪಿಗೆ ಸರಾಗವಾಗಿದೆ. ಬಿಜೆಪಿ ಆಡಳಿತದಲ್ಲಿ ಇದೇನು ಹೊಸದಲ್ಲ’ ಎಂದು ನವಾಬ್‌ ಟೀಕಿಸಿದ್ದಾರೆ.

ಜನಾಶೀರ್ವಾದ ಯಾತ್ರೆಯ ಭಾಗವಾಗಿ ರಾಯಗಡ ಜಿಲ್ಲೆಯಲ್ಲಿ ಸೋಮವಾರ ಕೇಂದ್ರ ಸಚಿವ ರಾಣೆ ಅವರು, ‘ಠಾಕ್ರೆ ಅವರು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಷಣ ಮಾಡುವಾಗ, ದೇಶಕ್ಕೆ ಸ್ವಾತಂತ್ರ್ಯ ಬಂದು ಎಷ್ಟು ವರ್ಷ ಆಗಿದೆ ಎಂಬುದನ್ನೇ ಮರೆತು ಹೋದರು. ಪಕ್ಕದಲ್ಲಿ ಇರುವವರನ್ನು ಕೇಳಿ, ಭಾಷಣ ಮುಂದುವರಿಸಿದ್ದರು. ನಾನು ಅಲ್ಲಿ ಇದ್ದಿದ್ದರೆ, ಅವರ ಕೆನ್ನೆಗೆ ಬಾರಿಸುತ್ತಿದ್ದೆ’ ಎಂದು ಹೇಳಿಕೆ ನೀಡಿದ್ದರು.

ರತ್ನಗಿರಿ ಜಿಲ್ಲೆಯಲ್ಲಿ ಜನಾಶೀರ್ವಾದ ಯಾತ್ರೆ ನಡೆಸುತ್ತಿದ್ದ ರಾಣೆ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದರು. ರಾಣೆ ಅವರಿಗೆ ರಾಯಗಡದ ಮಹದ್‌ ನ್ಯಾಯಾಲಯವು ಜಾಮೀನು ನೀಡಿತ್ತು. ಈ ವಿಚಾರದಲ್ಲಿ ಶಿವಸೇನಾ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ನಡೆಯುತ್ತಿದ್ದು, ರಾಜ್ಯದಾದ್ಯಂತ ಪ್ರತಿಭಟನೆಗಳೂ ನಡೆಯುತ್ತಿವೆ. ಶಿವಸೇನೆ ಮತ್ತು ಬಿಜೆಪಿಯ ಕಾರ್ಯಕರ್ತರು ವಿವಿಧ ಕಾರಣಗಳನ್ನು ಪ್ರಸ್ತಾಪಿಸಿ, ತಮ್ಮ ಪ್ರತಿಸ್ಪರ್ಧಿ ಪಕ್ಷದ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುಗಳನ್ನು ದಾಖಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT