ಶುಕ್ರವಾರ, ಮೇ 20, 2022
23 °C

ನಾಗಾಲ್ಯಾಂಡ್ ನಾಗರಿಕರ ಹತ್ಯೆ: ಅಮಿತ್ ಶಾ ಕ್ಷಮೆಗೆ ಕೊನ್ಯಾಕ್ ಸಂಘಟನೆಯ ಪಟ್ಟು

ಪಿಟಿಐ Updated:

ಅಕ್ಷರ ಗಾತ್ರ : | |

ಕೊಹಿಮಾ: ನಾಗಾಲ್ಯಾಂಡ್‌ನಲ್ಲಿ ನಾಗರಿಕರ ಹತ್ಯೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ತಪ್ಪು ಹೇಳಿಕೆ ನೀಡಿದ್ದು, ಕೂಡಲೇ ಕ್ಷಮೆಯಾಚಿಸಬೇಕೆಂದು ಕೊನ್ಯಾಕ್ ಬುಡಕಟ್ಟು ಸಂಘಟನೆ ಪಟ್ಟು ಹಿಡಿದಿದೆ.

ತಪ್ಪಾದ ತಿಳುವಳಿಕೆಯಿಂದ ಈ ಘಟನೆ ಸಂಭವಿಸಿದ್ದು, ಸೇನಾ ಕಾರ್ಯಾಚರಣೆಯ ವೇಳೆಯಲ್ಲಿ ಪಿಕಪ್ ಟ್ರಕ್ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದಾಗ ಭದ್ರತಾ ಪಡೆಯು ಗುಂಡಿನ ದಾಳಿ ನಡೆಸಿದೆ ಎಂದು ಸಂಸತ್ತಿನಲ್ಲಿ ಅಮಿತ್ ಶಾ ಮಾಹಿತಿ ನೀಡಿದ್ದರು.

ಸೈನಿಕರಿಂದ ನಾಗರಿಕರ ಹತ್ಯೆಯನ್ನು ಖಂಡಿಸಿ ನಾಗಾಲ್ಯಾಂಡ್‌ನ ಹಲವು ಬುಡಕಟ್ಟು ಜನರ ಸಂಘಟನೆಗಳಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಡಿಸೆಂಬರ್ 13ರ ವರೆಗೆ ಶೋಕಾಚರಣೆ ಘೋಷಿಸಿರುವ ಕೊನ್ಯಾಕ್ ಬುಡಕಟ್ಟು ಜನಾಂಗವು, ಸೇನೆಗೆ ವಿಶೇಷಾಧಿಕಾರ ನೀಡುವ 'ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (ಅಫ್‌ಸ್ಪ) 1958'ಯನ್ನು ತಕ್ಷಣ ಹಿಂಪಡೆಯಲು ಆಗ್ರಹಿಸಿವೆ. ಅಲ್ಲದೆ ಅಫ್‌ಸ್ಪ ರದ್ದುಗೊಳಿಸದಿದ್ದಲ್ಲಿ ರಾಜ್ಯದ ಹೊರಗಡೆಯು ಪ್ರತಿಭಟನೆಯನ್ನು ವಿಸ್ತರಿಸುವುದಾಗಿ ಎಚ್ಚರಿಸಿದೆ.

ನಿರಾಯುಧ ನಾಗರಿಕರನ್ನು ಗಂಡಿಕ್ಕಿ ಕೊಲ್ಲಲಾಗಿದೆ. ಹಾಗಾಗಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ ಎಂಬ ಗೃಹ ಸಚಿವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಕೊನ್ಯಾಕ್ ಸಂಘಟನೆಯ ವಕ್ತಾರ ಟಿ ಯಾನ್ಲೆಮ್ ತಿಳಿಸಿದ್ದಾರೆ.

21 ಪ್ಯಾರಾ ಕಮಾಂಡೋಗಳು ಏನನ್ನೂ ಪರಿಶೀಲಿಸದೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಆರು ಯುವಕರನ್ನು ಹತ್ಯೆಗೈದಿದ್ದಾರೆ. ಸಂಸತ್ತಿನಲ್ಲಿ ಶಾ ನೀಡಿರುವ ತಪ್ಪಾದ ಹೇಳಿಕೆಯು ಅವಮಾನಕರ ಎಂದು ಮಗದೊರ್ವ ವಕ್ತಾರ ವಿಂಗ್‌ಪೆ ಕೊನ್ಯಾಕ್ ಹೇಳಿದ್ದಾರೆ.

ಅಫ್‌ಸ್ಪ ಕಾನೂನು ಚಿತ್ರಹಿಂಸೆ, ಅತ್ಯಾಚಾರ ಹಾಗೂ ಹತ್ಯೆಯ ಕಾನೂನು ಆಗಿದೆ. ನಾಗಾಲ್ಯಾಂಡ್‌ ಮತ್ತು ಈಶಾನ್ಯ ಭಾಗದ ಜನರನ್ನು ನಾಲ್ಕನೇ ಲಿಂಗವಾಗಿ ಪರಿಗಣಿಸುವುದನ್ನು ನಿಲ್ಲಿಸಿ. ಈ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಗೃಹ ಸಚಿವರು ನಿಜಾಂಶವನ್ನು ಪರಿಶೀಲಿಸದೇ ಅಂತಹ ಬಾಲಿಶ ಹೇಳಿಕೆಗಳನ್ನು ನೀಡಲು ಹೇಗೆ ಸಾಧ್ಯ? ಅವರು ಕೊನ್ಯಾಕ್ ಜನಾಂಗದ ಕ್ಷಮೆಯಾಚಿಸಬೇಕಿದೆ ಎಂದು ಮನವಿ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು