ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ಪ್ರಕರಣ: ಶಾರುಕ್ ಖಾನ್ ಮಗ ಆರ್ಯನ್ ಖಾನ್‌ಗೆ ಜಾಮೀನು

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಸೇವನೆ ಆರೋಪ: 25 ದಿನಗಳ ಬಳಿಕ ಬಿಡುಗಡೆ ಅವಕಾಶ
Last Updated 28 ಅಕ್ಟೋಬರ್ 2021, 18:46 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಕ್‌ ಖಾನ್ ಅವರ ಮಗ ಆರ್ಯನ್‌ ಖಾನ್‌ಗೆ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಸೇವನೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ ಗುರುವಾರ ಜಾಮೀನು ಮಂಜೂರು ಮಾಡಿದೆ.

ಮುಂಬೈ ಕರಾವಳಿ ಸಮೀಪ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿತ್ತು ಎನ್ನಲಾದ ಡ್ರಗ್ಸ್‌ ಪಾರ್ಟಿಗೆ ಮಾದಕ ಪದಾರ್ಥ ನಿಯಂತ್ರಣ ಬ್ಯೂರೊದ (ಎನ್‌ಸಿಬಿ) ಅಧಿಕಾರಿಗಳು ಈ ತಿಂಗಳ 3ರಂದು ದಾಳಿ ನಡೆಸಿದ್ದರು. ಈ ದಾಳಿಯ ಸಂದರ್ಭದಲ್ಲಿ ಆರ್ಯನ್‌ ಅವರನ್ನು ಬಂಧಿಸಲಾಗಿತ್ತು. 25 ದಿನಗಳ ಬಳಿಕ ಅವರಿಗೆ ಜಾಮೀನು ದೊರೆತಿದೆ.

ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್‌ ಅವರು ಮುಂಬೈನ ಆರ್ಥರ್‌ ರೋಡ್‌ ಜೈಲಿನಲ್ಲಿದ್ದಾರೆ. ಜಾಮೀನು ಷರತ್ತುಗಳನ್ನು ಒಳಗೊಂಡ ಆದೇಶವನ್ನು ನ್ಯಾಯಾಲಯವು ಶುಕ್ರವಾರ ಪ್ರಕಟಿಸಲಿದೆ. ಹಾಗಾಗಿ, ಆರ್ಯನ್‌ ಅವರು ಜೈಲಿನಿಂದ ಶುಕ್ರವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.

ನ್ಯಾಯಮೂರ್ತಿ ಎನ್‌.ಡಬ್ಲ್ಯು. ಸಾಂಬ್ರೆ ಅವರ ಏಕಸದಸ್ಯ ಪೀಠವು ಆರ್ಯನ್‌ ಅವರಲ್ಲದೆ ಇತರ ಆರೋಪಿಗಳಾದ ಅರ್ಬಾಜ್‌ ಮರ್ಚಂಟ್‌ ಮತ್ತು ಮುನ್‌ಮುನ್‌ ದಮೇಚಾ ಅವರಿಗೂ ಜಾಮೀನು ನೀಡಿದೆ.

ಗುರುವಾರ ಮಧ್ಯಾಹ್ನ ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಾಗ, ಹೆಚ್ಚುವರಿ ಸಾಲಿಸಿಟರ್ ಜನರಲ್‌ ಅನಿಲ್‌ ಸಿಂಗ್‌ ಅವರು ವಾದ ಮಂಡಿಸಿದರು. ಅವರ ವಾದವು ಸಂಜೆ 4.10ರವರೆಗೆ ಮುಂದುವರಿಯಿತು. ಬಳಿಕ ರೋಹಟಗಿ ಅವರು ಪೂರಕ ವಾದ ಆರಂಭಿಸಿದರು.

ಆರ್ಯನ್‌ ಪರ ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರು ವಾದ ಮುಂದುವರಿಸುತ್ತಿದ್ದಂತೆಯೇ, ‘ಎಲ್ಲ ಮೂವರಿಗೆ ಜಾಮೀನು ಅಂಗೀಕರಿಸಲಾಗಿದೆ’ ಎಂದು ನ್ಯಾಯಮೂರ್ತಿ ಪ್ರಕಟಿಸಿದರು.

‘ವಿವರವಾದ ಆದೇಶವನ್ನು ನಾಳೆ ನೀಡಲಾಗುವುದು’ ಎಂದು ನ್ಯಾಯಮೂರ್ತಿ ಹೇಳಿದರು. ನಗದು ಭದ್ರತೆ ಸಲ್ಲಿಕೆಗೆ ಅವಕಾಶ ನೀಡಬೇಕು ಎಂದು ವಕೀಲರು ಕೋರಿದರೂ ಪೀಠವು ಅದಕ್ಕೆ ಅವಕಾಶ ಕೊಡಲಿಲ್ಲ. ಜಾಮೀನು ಭದ್ರತೆ ಏನು ಎಂಬುದನ್ನೇ ಹೇಳಿಲ್ಲ ಎಂದು ಪೀಠವು ಹೇಳಿತು. ಜಾಮೀನು ಅರ್ಜಿ ವಿಚಾರಣೆಯು ಮಂಗಳವಾರ ಆರಂಭವಾಗಿತ್ತು.

ಆರ್ಯನ್‌ ಮತ್ತು ಇತರರಿಗೆ ಜಾಮೀನು ನೀಡುವುದನ್ನು ಎನ್‌ಸಿಬಿ ಬಲವಾಗಿ ವಿರೋಧಿಸಿತ್ತು.

‌ಮಹಿಳಾ ಆಯೋಗಕ್ಕೆ ದೂರು
ಸಮೀರ್ ವಾಂಖೆಡೆ ಅವರ ಸಹೋದರಿ ಯಾಸ್ಮೀನ್‌ ವಾಂಖೆಡೆ ಅವರು ಸಚಿವ ನವಾಬ್‌ ಮಲಿಕ್ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಮಾನಹಾನಿ, ಬೆದರಿಕೆ, ಅವಮಾನ, ಮಹಿಳೆಯರ ಘನತೆಗೆ ಕುತ್ತು ಸೇರಿದಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳಡಿ ಮಲಿಕ್‌ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು. ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿಯೂ ದೂರು ದಾಖಲಿಸಲು ಸೂಚಿಸಬೇಕು ಎಂದು ಕೋರಲಾಗಿದೆ.

‘ಸಮೀರ್‌ರನ್ನು ದಾವೂದ್‌ ಎನ್ನುತ್ತಿದ್ದರು’
‘ಸಮೀರ್ ವಾಂಖೆಡೆಯನ್ನು ಆತನ ತಾಯಿ ಝಹೀದಾ ಅವರು ದಾವೂದ್‌ ಎಂದು ಕರೆಯುತ್ತಿದ್ದುದು ನಿಜ’ ಎಂದು ಸಮೀರ್‌ ಅವರ ತಂದೆ ಧ್ಯಾನದೇವ್‌ ವಾಂಖೆಡೆ ಹೇಳಿದ್ದಾರೆ. ಧ್ಯಾನದೇವ್‌ ಅವರು ಮತಾಂತರಗೊಂಡ ಮುಸ್ಲಿಂ ಎಂಬ ಆರೋಪಗಳ ನಡುವೆಯೇ ಅವರು ಈ ಹೇಳಿಕೆ ನೀಡಿದ್ದಾರೆ. ಸಮೀರ್‌ ವಾಂಖೆಡೆ ಅವರ ಹೆಸರು ದಾವೂದ್‌ ವಾಂಖೆಡೆ ಎಂದು ಇತ್ತು ಎಂದು ನವಾಬ್‌ ಮಲಿಕ್‌ ಅವರು ಆರೋಪ ಮಾಡಿದ್ದರು.

ತಮ್ಮ ಹೆಂಡತಿಯು ಪ್ರೀತಿಯಿಂದ ಒಮ್ಮೊಮ್ಮೆ ದಾವೂದ್ ಎಂದು ಕರೆಯುತ್ತಿದ್ದದ್ದು ಹೌದು. ಆದರೆ, ಸಮೀರ್‌ ಮುಸ್ಲಿಂ ಅಲ್ಲ, ಆತ ಪರಿಶಿಷ್ಟ ಪಂಗಡದ ವ್ಯಕ್ತಿ ಎಂದು ಧ್ಯಾನದೇವ್‌ ಹೇಳಿದ್ದಾರೆ. ‘ನಾನು ದಲಿತ. ಎಂದೂ ಮತಾಂತರ ಆಗಿಲ್ಲ. ನಾನು ಮುಸ್ಲಿಂ ಮಹಿಳೆಯನ್ನು ಮದುವೆ ಆಗಿದ್ದೇನೆ. ನನ್ನ ಹೆಂಡತಿಯು ತನ್ನ ಹೆಸರನ್ನು ಝಹೀದಾ ಧ್ಯಾನದೇವ್‌ ಎಂದೇ ಬರೆಯುತ್ತಿದ್ದಳು. ತಮ್ಮ ಖಾಸಗಿ ವಿಚಾರಗಳಲ್ಲಿನ ಹಸ್ತಕ್ಷೇಪವನ್ನು ನವಾಬ್‌ ಮಲಿಕ್ ಮುಂದುವರಿಸಿದರೆ ಮಾನಹಾನಿ ಪ್ರಕರಣ ದಾಖಲಿಸಲಾಗುವುದು’ ಎಂದೂ ಅವರು ಹೇಳಿದ್ದಾರೆ.

ಬಾಲಿವುಡ್‌ ಸಂಭ್ರಮ
ಬಾಲಿವುಡ್‌ನ ಪ್ರಮುಖರಾದ ಸೋನಮ್‌ ಕಪೂರ್‌, ಸ್ವರಾ ಭಾಸ್ಕರ್‌, ಆರ್‌.ಮಾಧವನ್‌, ರಾಹುಲ್‌ ಧೋಲಾಕಿಯಯಾ ಮಂತಾದವರು ಆರ್ಯನ್‌ ಖಾನ್‌ಗೆ ಜಾಮೀನು ದೊರೆತದ್ದಕ್ಕೆ ಸಂತಸ ವ್ಯಕ್ತಪಡಿಸಿದವರಲ್ಲಿ ಸೇರಿದ್ದಾರೆ.

ಇವರೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

‘ಕಾಲದ ನ್ಯಾಯದಾನದಲ್ಲಿ ಸಾಕ್ಷಿಗಳ ಅಗತ್ಯ ಇಲ್ಲ’ ಎಂದು ನಟ ಸೋನು ಸೂದ್‌ ಟ್ವೀಟ್‌ ಮಾಡಿದ್ದಾರೆ. ಸಿನಿಮಾ ನಿರ್ದೇಶಕ ಸಂಜಯ್‌ ಗುಪ್ತಾ ಅವರು ‘ಬಹಳ ಸಂತಸವಾಗಿದೆ’ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಶಾರುಕ್‌ ಅವರ ನಿವಾಸದ ಮುಂದೆ ಸೇರಿದ್ದ ಭಾರಿ ಸಂಖ್ಯೆಯ ಅಭಿಮಾನಿಗಳು ಸಂಭ್ರಮ ಆಚರಿಸಿದ್ದಾರೆ.

ಡ್ರಗ್ಸ್‌ ಪ್ರಕರಣದ ಸಾಕ್ಷಿ ಗೋಸಾವಿ ಸೆರೆ
ಪುಣೆ
: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಪ್ರಕರಣದ ಸಾಕ್ಷಿ ಕಿರಣ್‌ ಗೋಸಾವಿಯನ್ನು ಪುಣೆ ಪೊಲೀಸರು ಹಳೆಯ ಪ್ರಕರಣವೊಂದರಲ್ಲಿ ಬಂಧಿಸಿದ್ದಾರೆ.

2018ರ ವಂಚನೆ ಪ್ರಕರಣವೊಂದರಲ್ಲಿ ಆತ ಪ್ರಮುಖ ಆರೋಪಿ. ಆತನ ಮೇಲೆ 2019ರಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಆತ ಪೊಲೀಸರೆದುರು ಶರಣಾಗುವುದಾಗಿ ಹೇಳಿದ್ದರೂ ಆಗಿರಲಿಲ್ಲ. ಆತನನ್ನು ಇಲ್ಲಿಯ ಕತ್ರಾಜ್ ಪ್ರದೇಶದ ಲಾಡ್ಜ್‌ ಒಂದರಲ್ಲಿ ಬೆಳಗ್ಗಿನ ‌ಜಾವ ಮೂರು ಗಂಟೆಗೆ ಬಂಧಿಸಲಾಗಿದೆ. ಆತನನ್ನು ಕೋರ್ಟ್ ಎದುರು ಹಾಜರುಪಡಿಸಲಾಯಿತು ಎಂದು ಪುಣೆ ಪೊಲೀಸ್‌ ಆಯುಕ್ತ ಅಮಿತಾಭ್‌ ಗುಪ್ತಾ ಹೇಳಿದ್ದಾರೆ.

‘ಕಳೆದ ಹತ್ತು ದಿನಗಳಿಂದ ಗೋಸಾವಿಗಾಗಿ ನಾವು ಹುಡುಕಾಟ ನಡೆಸಿದ್ದೆವು. ಆತ ಲಖನೌ, ಹೈದರಾಬಾದ್‌, ಫತೇಪುರ್‌, ಜಲಗಾಂವ್‌, ಮುಂಬೈ, ಲೋನವಾಲ ಮತ್ತಿತರ ನಗರಗಳ ಮಧ್ಯೆ ಓಡಾಡುತ್ತಾ ತಲೆಮರೆಸಿಕೊಂಡಿದ್ದ’ ಎಂದಿದ್ದಾರೆ.

ಮಲೇಷ್ಯಾದಲ್ಲಿ ಹೋಟೆಲ್‌ ಉದ್ಯಮದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಗೋಸಾವಿ ತಮ್ಮಿಂದ ₹3.09 ಲಕ್ಷ ಪಡೆದು ನಂತರ ಮೋಸ ಮಾಡಿದ್ದಾನೆ ಎಂದು ಚಿನ್ಮಯ್‌ ದೇಶ್‌ಮುಖ್‌ ಎಂಬುವವರು ಪುಣೆಯ ಫಾರಸ್ಖಾನ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ಗೋಸಾವಿ ತಮ್ಮನ್ನು ಬೆದರಿಸುತ್ತಿದ್ದ ಎಂದು ದೂರುದಾರ ದೇಶ್‌ಮುಖ್ ಹೇಳಿದ್ದಾರೆ. ಅವರೇನಾದರೂ ಮತ್ತೊಂದು ದೂರು ನೀಡಿದರೆ ಮತ್ತೊಂದು ಮೊಕದ್ದಮೆ ದಾಖಲಿಸಲಾಗುವುದು ಎಂದು ಗುಪ್ತಾ ಹೇಳಿದ್ದಾರೆ.

ಆರ್ಯನ್‌ ಖಾನ್‌ ಪ್ರಕರಣದಲ್ಲಿ ಎನ್‌ಸಿಬಿ ಅಧಿಕಾರಿಗಳು ಮತ್ತು ಇತರರು ₹25 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದಲ್ಲಿಯೂ ಗೋಸಾವಿ ಹೆಸರು ಕೇಳಿ ಬಂದಿತ್ತು.

‘ನೋಟಿಸ್ ನೀಡದೆ ಸಮೀರ್ ಬಂಧನವಿಲ್ಲ’
ಮುಂಬೈ: ಮಾದಕಪದಾರ್ಥ ನಿಯಂತ್ರಣ ಬ್ಯೂರೊದ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಅವರನ್ನು ಮೂರು ದಿನಗಳ ನೋಟಿಸ್‌ ನೀಡದೆ ಬಂಧಿ

ಸುವುದಿಲ್ಲ ಎಂಬ ಭರವಸೆಯನ್ನು ಬಾಂಬೆ ಹೈಕೋರ್ಟ್‌ಗೆ ಮಹಾರಾಷ್ಟ್ರ ಪೊಲೀಸ್‌ ಇಲಾಖೆಯು ನೀಡಿದೆ.

ಬಾಲಿವುಡ್‌ ನಟ ಶಾರುಕ್ ಖಾನ್‌ ಅವರ ಮಗ ಆರ್ಯನ್‌ ಖಾನ್‌ ಆರೋಪಿಯಾಗಿರುವ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದೆ. ಪೊಲೀಸರು ತಮ್ಮನ್ನು ಬಂಧಿಸುವ ಅಪಾಯ ಇದೆ. ಹಾಗಾಗಿ ಬಂಧನದಿಂದ ರಕ್ಷಣೆ ನೀಡಬೇಕು ಎಂದು ಕೋರಿ ಸಮೀರ್‌ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಸಮೀರ್ ವಿರುದ್ಧದ ಆರೋಪಗಳ ಬಗೆಗಿನ ತನಿಖೆಯನ್ನು ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆಯಂತಹ (ಎನ್‌ಐಎ) ಕೇಂದ್ರದ ಸ್ವತಂತ್ರ ತನಿಖಾ ಸಂಸ್ಥೆಯೊಂದಕ್ಕೆ ಒಪ್ಪಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿತ್ತು.

ಮುಂಬೈ ಪೊಲೀಸರ ತನಿಖೆಯಯು ಪೂರ್ವಗ್ರಹಪೀಡಿತವಾಗಬಹುದು ಮತ್ತು ನ್ಯಾಯಯುತ ಆಗಿಲ್ಲದೇ ಇರಬಹುದು. ಸಮೀರ್ ಅವರು ಎನ್‌ಸಿಬಿಯ ಅತ್ಯುತ್ತಮ ಅಧಿಕಾರಿಗಳಲ್ಲಿ ಒಬ್ಬರು. ಆರ್ಯನ್‌ ಖಾನ್‌ ಬಂಧನದ ಬಳಿಕ ಅವರನ್ನು ಸಾರ್ವಜನಿಕವಾಗಿ ತೇಜೋವಧೆ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಹೆಂಡತಿಯ ಪತ್ರ:ಸಮೀರ್‌ ವಾಂಖೆಡೆ ಅವರ ವಿರುದ್ಧ ಲಂಚ ಮತ್ತು ಅಧಿಕಾರ ದುರ್ಬಳಕೆಯ ಆರೋಪ ಕೇಳಿ ಬಂದ ಬೆನ್ನಿಗೇ, ಅವರ ಹೆಂಡತಿ ಕ್ರಾಂತಿ ರೇಡ್ಕರ್‌ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಪತ್ರ ಬರೆದು ನ್ಯಾಯ ದೊರಕಿಸಿಕೊಂಡುವಂತೆ ಕೋರಿದ್ದಾರೆ.

ವಾಂಖೆಡೆ ಕುಟುಂಬವನ್ನು ಗುರಿ ಮಾಡಿ ದಾಳಿ ನಡೆಸಲಾಗುತ್ತಿದೆ ಎಂದು ಮರಾಠಿಯಲ್ಲಿ ಬರೆಯಲಾದ ಒಂದು ಪುಟದ ಪತ್ರದಲ್ಲಿ ಹೇಳಲಾಗಿದೆ.

ಮಹಾರಾಷ್ಟ್ರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮತ್ತು ಎನ್‌ಸಿಪಿ ಮುಖ್ಯ ವಕ್ತಾರ ನವಾಬ್‌ ಮಲಿಕ್‌ ಅವರು, ಸಮೀರ್ ಅವರ ವಿರುದ್ಧ ನಿತ್ಯವೂ ಒಂದಲ್ಲ ಒಂದು ಆರೋಪ ಮಾಡುತ್ತಿದ್ದಾರೆ. ಮಲಿಕ್‌ ಅವರ ಅಳಿಯನನ್ನೂ ಸಮೀರ್‌ ಡ್ರಗ್ಸ್‌ ಪ್ರಕರಣದಲ್ಲಿ ಬಂಧಿಸಿದ್ದರು.

‘ಜನರ ಮುಂದೆ ನಮ್ಮನ್ನು ದಿನವೂ ಅವಮಾನಿಸಲಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯದಲ್ಲಿ ಮಹಿಳೆಯರ ಘನತೆಯ ಜೊತೆ ಆಟವಾಡಲಾಗುತ್ತಿದೆ. ಬಾಳಾ ಸಾಹೇಬ್‌ (ಉದ್ಧವ್‌ ಅವರ ತಂದೆ ಬಾಳಾ ಠಾಕ್ರೆ) ಅವರು ಇದ್ದಿದ್ದರೆ ಅವರು ಇದನ್ನು ಸಹಿಸುತ್ತಿರಲಿಲ್ಲ’ ಎಂದು ಸಿನಿಮಾ ನಟಿಯೂ ಆಗಿರುವ ರೇಡ್ಕರ್‌ ಹೇಳಿದ್ದಾರೆ.

‘ಅವರು ಇಲ್ಲ, ಆದರೆ ನೀವು ಇದ್ದೀರಿ. ನಿಮ್ಮಲ್ಲಿ ನಾವು ಅವರನ್ನು ಕಾಣುತ್ತಿದ್ದೇವೆ. ನಿಮ್ಮ ಮೇಲೆ ನಮಗೆ ನಂಬಿಕೆ ಇದೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಆಗುತ್ತಿರುವ ಅನ್ಯಾಯವನ್ನು ನೀವು ತಡೆಯುತ್ತೀರಿ ಎಂಬ ನಂಬಿಕೆ ಇದೆ’ ಎಂದಿದ್ದಾರೆ.

‘ನನ್ನ ಗಂಡ (ಸಮೀರ್‌ ವಾಂಖೆಡೆ) ಪ್ರಾಮಾಣಿಕ ಅಧಿಕಾರಿ. 15 ವರ್ಷಗಳಿಂದ ಅವರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಮೀರ್‌ ಅವರು ಯಾವುದೇ ರಾಜಕೀಯ ಪಕ್ಷದ ಜತೆ ಸಂಪರ್ಕ ಹೊಂದಿಲ್ಲ. ಕೇಂದ್ರ ಸರ್ಕಾರದ ಉದ್ಯೋಗಿಯಾಗಿರುವ ಅವರು ತಮ್ಮ ಕೆಲಸವನ್ನಷ್ಟೇ ನಿರ್ವಹಿಸುತ್ತಿದ್ದಾರೆ. ಅವರ ಕೆಲಸದ ಬಗ್ಗೆ ಕೆಲವರಿಗೆ ಸಮಸ್ಯೆ ಇದೆ. ಅದುವೇ ಈಗಿನ ಎಲ್ಲ ಸಮಸ್ಯೆಗಳಿಗೆ ಕಾರಣ’ ಎಂದು ರೇಡ್ಕರ್ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT