ಭಾನುವಾರ, ಜೂನ್ 13, 2021
21 °C

ಕೋವಿಡ್ ನಿರ್ವಹಣೆ: ‘ಒಂದು ರಾಷ್ಟ್ರ ಒಂದು ನೀತಿ’ ಪಾಲಿಸಲು ಎನ್‌ಸಿಪಿ ಒತ್ತಾಯ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದಲ್ಲಿ ದಿನೇದಿನೇ ಉಲ್ಬಣಿಸುತ್ತಿರುವ ಕೋವಿಡ್‌–19 ಸಾಂಕ್ರಾಮಿಕ ರೋಗ ಪರಿಸ್ಥಿತಿಯನ್ನು ನಿರ್ವಹಿಸಲು ಕೇಂದ್ರ ಸರ್ಕಾರವು ‘ಒಂದು ರಾಷ್ಟ್ರ, ಒಂದು ನೀತಿ’ ಯೋಜನೆಯನ್ನು ಪಾಲಿಸಬೇಕೆಂದು ಮಹಾರಾಷ್ಟ್ರದ ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒತ್ತಾಯಿಸಿವೆ.

ಈ ಯೋಜನೆಯನ್ನು ಜಾರಿಗೆ ತರಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸರ್ವ ಪಕ್ಷಗಳ ಸಭೆಯನ್ನು ಕರೆದು ಚರ್ಚಿಸಿ ನಿರ್ಣಯ ಕೈಗೊಳ್ಳಬೇಕೆಂದು ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮತ್ತು ಎನ್‌ಸಿಪಿ ಮುಖಂಡ ನವಾಬ್ ಮಲ್ಲಿಕ್ ಅವರು ಒತ್ತಾಯಿಸಿದ್ದಾರೆ.

‘ಪ್ರಸ್ತುತ ಕೋವಿಡ್‌–19 ಪರಿಸ್ಥಿತಿಯನ್ನು ಪರಿಗಣಿಸಿ ‘ಒಂದು ರಾಷ್ಟ್ರ, ಒಂದು ನೀತಿ’ಯನ್ನು ರೂಪಿಸಲು ಅಗತ್ಯವಿರುವ ಈ ಸಮಯದಲ್ಲಿ ಕೇವಲ ಜಾಹೀರಾತುಗಳ ಮೂಲಕ ಕೊರೊನಾ ವೈರಸ್ ಅನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ’ ಎಂದು ಮಲ್ಲಿಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಸ್ಥಿತಿ ಹೇಗಿದೆಯೆಂದರೆ ಕೋವಿಡ್‌ನಿಂದ ಮೃತರಾದವರ ಅಂತ್ಯಸಂಸ್ಕಾರವನ್ನು ಶವಾಗಾರದ ಬದಲಿಗೆ ನದಿಗಳಲ್ಲಿ ನಡೆಸಲಾಗುತ್ತಿದೆ. ‘ಒಂದು ರಾಷ್ಟ್ರ, ಒಂದು ನೀತಿ’ ಜಾರಿಗೆ ತರದ ಹೊರತು ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ. ಪ್ರಧಾನಿ ಅವರು ಸರ್ವ ಪಕ್ಷಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳಿಗೆ ಆಮ್ಲಜನಕ ಹಂಚಿಕೆ ಮತ್ತು ಸಾರ್ವಜನಿಕ ಆರೋಗ್ಯ ಪ್ರಕ್ರಿಯೆಯನ್ನು ಸುಗಮಗೊಳಿಸುವ ಕಾರ್ಯ ಕೇಂದ್ರದಿಂದ ಸಾಧ್ಯವಾಗಲಿಲ್ಲ. ಹಾಗಾಗಿ, ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ 12 ತಜ್ಞ ವೈದ್ಯ ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ರಚಿಸಬೇಕಾಯಿತು. ಕೇಂದ್ರವು ತನ್ನ ಕೆಲಸಗಳನ್ನು ಮಾಡುತ್ತಿಲ್ಲ. ನ್ಯಾಯಾಲಯದ ಆದೇಶದ ಮೇರೆಗೆ ಮಾತ್ರ ತನ್ನ ಕೆಲಸಗಳನ್ನು ಮಾಡುತ್ತಿದೆ’ ಎಂದೂ ಅವರು ಆರೋಪಿಸಿದ್ದಾರೆ.

ಲಸಿಕಾ  ಅಭಿಯಾನವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮಹಾರಾಷ್ಟ್ರದ ಅಬಕಾರಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಬಾಳಾಸಾಹೇಬ್ ತೋರಟ್ ಅವರು ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯಾವುದೇ ಲಸಿಕಾ ನೀತಿಯನ್ನು ಹೊಂದಿಲ್ಲ. ಜನರಿಗೆ ಲಸಿಕೆ ನೀಡುವಲ್ಲಿ ವಿಫಲವಾಗಿರುವುದೇ ಇದಕ್ಕೆ ಸಾಕ್ಷಿ’ ಎಂದು ದೂರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು