ಗುರುವಾರ , ಆಗಸ್ಟ್ 18, 2022
26 °C
ಕಾನೂನು ರೂಪಿಸಲು ಸಂಸತ್‌ಗೆ ‘ಸುಪ್ರೀಂ’ ನ್ಯಾ. ಪರ್ದಿವಾಲಾ ಸಲಹೆ

ಸಾಮಾಜಿಕ ಮಾಧ್ಯಮಕ್ಕೆ ನಿಯಂತ್ರಣ ಅಗತ್ಯ: ಸುಪ್ರೀಂ ನ್ಯಾಯಮೂರ್ತಿ ಪರ್ದಿವಾಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸೂಕ್ಷ್ಮ ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಡಿಜಿಟಲ್‌ ಮತ್ತು ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಭಾನುವಾರ ಹೇಳಿದರು.

ಇಲ್ಲಿ ಭಾನುವಾರ ನಡೆದ ಸುಪ್ರೀಂಕೋರ್ಟ್‌ನ ಎರಡನೇ ನ್ಯಾಯಮೂರ್ತಿ ಎಚ್‌.ಆರ್‌. ಖನ್ನಾ ಸ್ಮಾರಕ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ವೋಕ್ಸ್‌ ಪೊಪುಲಿ ವರ್ಸ್‌ಸ್‌ ರೂಲ್‌ ಆಫ್‌ ಲಾ: ದಿ ಸುಪ್ರೀಂಕೋರ್ಟ್‌ ಆಫ್‌ ಇಂಡಿಯಾ’ ವಿಷಯ ಕುರಿತು ಮಾತನಾಡಿದರು.

ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಅನವಶ್ಯಕವಾಗಿ ಮಧ್ಯಪ್ರವೇಶಿಸಿ ಮಾಧ್ಯಮಗಳೇ ವಿಚಾರಣೆ  ನಡೆಸುವುದನ್ನು ನಿಯಂತ್ರಿಸಲು ಸಂಸತ್ತು ಕಾನೂಗಳನ್ನು ಜಾರಿಗೆ ತರಬೇಕು ಎಂದರು.

ತೀರ್ಪುಗಳನ್ನು ಟೀಕಿಸುವ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಬದಲು, ನ್ಯಾಯಾಧೀಶರ ವಿರುದ್ಧ ವೈಯಕ್ತಿಕ ದಾಳಿಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಲಾಗುತ್ತಿದೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ. ತಾವು ನೀಡುತ್ತಿರುವ ತೀರ್ಪುಗಳಿಗಾಗಿ ನ್ಯಾಯಾಧೀಶರ ಮೇಲೆ ನಡೆಯುತ್ತಿರುವ ವೈಯಕ್ತಿಕ ದಾಳಿಗಳು ಅಪಾಯಕಾರಿ ಬೆಳವಣಿಗೆ. ಕಾನೂನು ಏನು ಹೇಳುತ್ತದೆ ಎಂದು ಯೋಚಿಸುವ ಬದಲು, ಮಾಧ್ಯಮದ ಯೋಚನೆ ಏನಿರಬಹುದೆಂದು ನ್ಯಾಯಾಧೀಶರು ಯೋಚಿಸುವಂತಾಗಲಿದೆ. ಇದರಿಂದ ದೇಶದ ನ್ಯಾಯಾಂಗ ವ್ಯವಸ್ಥೆಗೆ ಹಾನಿಯಾಗಲಿದೆ ಎಂದು ಹೇಳಿದರು.

ಪ್ರವಾದಿ ಮಹಮ್ಮದ್‌ ಅವಹೇಳನ ಸಂಬಂಧ ಬಿಜೆಪಿಯ ಉಚ್ಚಾಟಿತ ನಾಯಕಿ ನೂಪುರ್‌ ಶರ್ಮಾ ವಿರುದ್ಧ ದೇಶದ ವಿವಿಧೆಡೆ ದಾಖಲಾಗಿರುವ ಹಲವು ಎಫ್‌ಐಆರ್‌ಗಳನ್ನು ಒಟ್ಟುಗೂಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ‘ನಾನು ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರಿದ್ದ ಪೀಠವು ಕಳೆದ ವಾರ ವಜಾಗೊಳಿಸಿತ್ತು. ಅಲ್ಲದೇ, ಉದಯಪುರದ ಟೇಲರ್‌ ಹತ್ಯೆಗೆ ಹೊಣೆ ಎಂದು ನೂಪುರ್‌ ಶರ್ಮಾ ಅವರಿಗೆ ದೇಶದ ಕ್ಷಮೆಯಾಚಿಸುವಂತೆ ಸೂಚಿಸಲಾಗಿತ್ತು. ಪೀಠದಲ್ಲಿದ್ದ ಇಬ್ಬರೂ ನ್ಯಾಯಾಧೀಶರು ಸಾಮಾಜಿಕ ಮಾಧ್ಯಮಗಳಲ್ಲಿ ದೂಷಣೆಯ ದಾಳಿಯನ್ನು ಎದುರಿಸುತ್ತಿದ್ದೇವೆ ಎಂದರು.

‘ಮಾಧ್ಯಮಗಳ ಪಾತ್ರದ ಬಗ್ಗೆಯೂ ನಾನು ಮಾತನಾಡುವೆ. ಪ್ರಕರಣಗಳ ವಿಚಾರಣೆ ನ್ಯಾಯಾಲಯಗಳಲ್ಲಿ ನಡೆಯಬೇಕು. ಡಿಜಿಟಲ್‌ ಮಾಧ್ಯಮಗಳಲ್ಲಿ ನಡೆಸುವುದು ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡಿದಂತೆ. ಕೇವಲ ಅರ್ಧ ಸತ್ಯವನ್ನು ಅನುಸರಿಸಿದರೆ ಅದೇ ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಲಕ್ಷ್ಮಣ ರೇಖೆಯನ್ನೂ ದಾಟಿದಂತಾಗುತ್ತದೆ. ಭಾರತದ ಸಂವಿಧಾನವೇ ಪವಿತ್ರ ಗ್ರಂಥ ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯೂ ನೆನಪಿನಲ್ಲಿಟ್ಟುಕೊಳ್ಳಲಿ’ ಎಂದು ಹೇಳಿದರು.

‘ತೀರ್ಪುಗಳು ಯಾವುದೇ ಕಾರಣಕ್ಕೂ ಸಾರ್ವಜನಿಕರ ಅಭಿಪ್ರಾಯದ ಪ್ರಭಾವಕ್ಕೆ ಒಳಗಾಗಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯ ನೀಡುವ ತೀರ್ಪಿನಂತೆಯೇ ನಾವು ಬದುಕುತ್ತೇವೆ. ಹಾಗೆಂದ ಮಾತ್ರಕ್ಕೆ ಕೋರ್ಟ್‌ ನೀಡುವ ತೀರ್ಪುಗಳೆಲ್ಲವೂ ಸರಿ ಎಂದರ್ಥವಲ್ಲ. ಆದಾಗ್ಯೂ ಅವುಗಳನ್ನು ಒಪ್ಪಿಕೊಂಡು ಬದುಕುತ್ತಿದ್ದೇವೆ. ಇದಕ್ಕೆ ನವತೇಜ್‌ ಸಿಂಗ್‌ ಜೋಹರ್‌ ಪ್ರಕರಣ ಮತ್ತು ಶಬರಿಮಲೆ ಪ್ರಕರಗಳ ತೀರ್ಪು ಉತ್ತಮ ಉದಾಹರಣೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು