ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುರೈನ ಪುದುಕುಳಂ ಕನ್ಮೋಯಿ ಕೆರೆ ಪುನಶ್ಚೇತನಗೊಳಿಸಲು ಎನ್‌ಜಿಟಿ ನಿರ್ದೇಶನ

ತಮಿಳುನಾಡು ಸರ್ಕಾರ
Last Updated 1 ಸೆಪ್ಟೆಂಬರ್ 2021, 10:55 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡಿನ ಮದುರೈನಲ್ಲಿರುವ ಪುದುಕುಳಂ ಕನ್ಮೋಯಿ ಕೆರೆ ಬತ್ತಿ ಹೋಗಿದೆ ಎಂಬ ಕಾರಣಕ್ಕೆ ಆ ಜಾಗವನ್ನು ನಿವೇಶವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಬದಲಿಗೆ ಆ ಕೆರೆಯನ್ನು ಪುನಶ್ಚೇತನಗೊಳಿಸುವಂತೆ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಮದುರೈನಲ್ಲಿ ಬತ್ತಿ ಹೋಗಿರುವ ‘ಪುದುಕುಳಂ ಕನ್ಮೋಯಿ‘ ಕೆರೆಯ ಜಾಗವನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ‌ (ಪಿಐಎಲ್‌) ವಿಚಾರಣೆ ವೇಳೆ ಎನ್‌ಜಿಟಿ ಈ ರೀತಿ ನಿರ್ದೇಶನ ನೀಡಿದೆ.

ಈ ಅರ್ಜಿಯ ವಿಚಾರಣೆ ವೇಳೆ, ‘ಜಲ ಮೂಲವೊಂದು ಬತ್ತಿ ಹೋಗಿದೆ ಎಂಬ ಕಾರಣಕ್ಕೆ, ಆ ಜಾಗವನ್ನು ವಸತಿ ನಿವೇಶಗಳನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ‘ ಎಂದು ಅಭಿಪ್ರಾಯಪಟ್ಟಿದೆ. ಇದೇ ವೇಳೆ, ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿದ ಎನ್‌ಜಿಟಿ, ‘ನೈಸರ್ಗಿಕ ಸಂಪನ್ಮೂಲಗಳ ಪರಿಸರ ಮೌಲ್ಯವನ್ನು ರಕ್ಷಿಸುವ ಹೊಣೆ ರಾಜ್ಯ ಸರ್ಕಾರದ್ದು‘ ಎಂದು ಹೇಳಿದೆ.

ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಭೂ ವಿಲೇವಾರಿ ಘಟಕದವರು ಬತ್ತಿ ಹೋಗಿದ್ದ ಪುದುಕುಲಂ ಕನ್ಮೊಯಿ ಕೆರೆಯ ಜಾಗವನ್ನು ನಿವೇಶನವನ್ನಾಗಿ ಪರಿವರ್ತಿಸಿ, ಅದನ್ನು ಕೆಲವು ಪತ್ರಕರ್ತರಿಗೆ ಮಂಜೂರು ಮಾಡಲು ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಎ.ಎಂ ವಿನೋದ್‌ ಅವರು ಎನ್‌ಜಿಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ಪೀಠ, ‘ಪರಿಸರ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವ, ಮೈಕ್ರೋ ಕ್ಲೈಮೆಟ್‌, ಅಂತರ್ಜಲ ಮರುಪೂರಣಗೊಳಿಸುವ ಹಾಗೂ ಕುಡಿಯುವ ನೀರು ಪೂರೈಸುವಲ್ಲಿ ಜಲಮೂಲಗಳು ಪ್ರಮುಖ ಪಾತ್ರವಹಿಸುತ್ತವೆ‘ ಎಂದು ಹೇಳಿದ್ದಾರೆ.

‘ಈ ಪ್ರಕರಣದಲ್ಲಿ ಜಲಮೂಲ ಒಣಗಿಹೋಗಿದೆ ಎಂಬ ಕಾರಣಕ್ಕೆ, ಅದನ್ನು ವಸತಿ ಪ್ರದೇಶವನ್ನಾಗಿ ಪರಿವರ್ತಿಸಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ, ನಮ್ಮ ಅಭಿಪ್ರಾಯದಲ್ಲಿ ಉತ್ತರ ನಕಾರಾತ್ಮಕವಾಗಿರುತ್ತದೆ‘ ಎಂದು ನ್ಯಾಯಮೂರ್ತಿ ಗಳಾದ ಸುಧೀರ್ ಅಗರ್‌ವಾಲ್‌ ಮತ್ತು ಬ್ರಿಜೇಶ್ ಸೇಥಿ ಅವರನ್ನೊಳಗೊಂಡ ಪೀಠ ಹೇಳಿತು.

‘ಪತ್ರಕರ್ತರಿಗೆ ವಸತಿ ನಿವೇಶನ ಹಂಚುವ ಅಗತ್ಯ ಹಾಗೂ ಕೆರೆ ಬತ್ತಿ ಹೋಗಿದೆ ಎಂಬ ಎರಡು ಕಾರಣಗಳನ್ನು ಹೊರತು ಪಡಿಸಿ, ಜಲಮೂಲವನ್ನು ಮುಚ್ಚಲು ಇನ್ನಾವುದೇ ಬಲವಾದ ಸಾಮಾಜಿಕ ಅಗತ್ಯವನ್ನು ಇಲ್ಲಿ ಉಲ್ಲೇಖಿಸಿಲ್ಲ‘ ಎಂದು ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT