ಶನಿವಾರ, ಮೇ 21, 2022
27 °C

ಅತ್ಯಾಚಾರ ಆರೋಪಿಗಳಿಗೆ ಟಿಕೆಟ್‌ ಬೇಡವೆಂಬ ಕೂಗು ನಿರ್ಲಕ್ಷಿಸಿದ ಕಾಂಗ್ರೆಸ್‌: ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾಗಿರುವ ‘ನಿರ್ಭಯಾ ಜ್ಯೋತಿ ಟ್ರಸ್ಟ್‌’ನ ಪ್ರಧಾನ ಕಾರ್ಯದರ್ಶಿ ಸರ್ವೇಶ್ ತಿವಾರಿ, ಪಕ್ಷದ ವಿರುದ್ಧ ಶುಕ್ರವಾರ ಆಕ್ರೋಶ ಹೊರಹಾಕಿದ್ದಾರೆ. ಮಹಿಳೆಯರ ಮೇಲಿನ ಅಪರಾಧದ ಆರೋಪವುಳ್ಳವರಿಗೆ ಟಿಕೆಟ್ ನಿರಾಕರಿಸಬೇಕೆಂಬ ಆಗ್ರಹಗಳನ್ನು ಪಕ್ಷ ನಿರ್ಲಕ್ಷಿಸಿದೆ ಎಂದು ತಿವಾರಿ ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಯುವತಿಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಸಾವು ಪ್ರಕರಣದಿಂದ ಇಡೀ ರಾಷ್ಟ್ರ ಆಘಾತಕ್ಕೊಳಗಾಗಿರುವ ಸಂದರ್ಭದಲ್ಲಿ, ಅತ್ಯಾಚಾರದ ಆರೋಪ ಹೊತ್ತಿದ್ದ ಬ್ರಜೇಶ್ ಪಾಂಡೆಗೆ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ತಿವಾರಿ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ನಿರ್ಭಯಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ತಿವಾರಿ ಅವರು, ಬಿಹಾರದ ಗೋವಿಂದಗಂಜ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್‌ ಅಲ್ಲಿ ಬ್ರಜೇಶ್‌ ಪಾಂಡೆ ಅವರಿಗೆ ಟಿಕೆಟ್‌ ನೀಡಿದೆ.

ಆದರೆ, ಈ ಆರೋಪಗಳನ್ನು ಪಾಂಡೆ ತಿರಸ್ಕರಿಸಿದ್ದಾರೆ. ಟಿಕೆಟ್ ನಿರಾಕರಿಸಿರುವುದರಿಂದ ತಿವಾರಿ ಹೀಗೆ ಮಾತನಾಡುತ್ತಿದ್ದಾರೆ. ತಿವಾರಿ ಉಲ್ಲೇಖಿಸುತ್ತಿರುವ ಪ್ರಕರಣವನ್ನು ಪೊಲೀಸರು ಈಗಾಗಲೇ ಮುಕ್ತಾಯಗೊಳಿಸಿದ್ದಾರೆ. ಪ್ರಕರಣದಲ್ಲಿ ನನ್ನ ಹೆಸರನ್ನು ಎಫ್‌ಐಆರ್‌ನಲ್ಲೂ ದಾಖಲಿಸಿಲ್ಲ,’ ಎಂದು ಪಾಂಡೆ ಹೇಳಿದರು.

ಇದೇ ವಿಚಾರವಾಗಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪವಿರುವ ವ್ಯಕ್ತಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ ಎಂದೂ ಅವರು ಆರೋಪಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು