ಬುಧವಾರ, ಸೆಪ್ಟೆಂಬರ್ 29, 2021
21 °C
ತುರ್ತು ಸಾಲ ಖಾತರಿ ಯೋಜನೆಗೆ ಹೆಚ್ಚುವರಿಯಾಗಿ ₹ 1.5 ಲಕ್ಷ ಕೋಟಿ

ಮತ್ತೊಂದು ಸುತ್ತಿನ ಕೋವಿಡ್ ಪ್ಯಾಕೇಜ್ ಘೋಷಿಸಿದ ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅರ್ಥ ವ್ಯವಸ್ಥೆಯಲ್ಲಿ ಹೊಸ ಚೈತನ್ಯ ತರುವ ಉದ್ದೇಶದಿಂದ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ಯಮಗಳಿಗೆ ಸಾಲ ನೀಡಲು ಹೆಚ್ಚುವರಿಯಾಗಿ ₹ 1.5 ಲಕ್ಷ ಕೋಟಿ ನಿಗದಿ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಪ್ರಕಟಿಸಿದರು.

ಅಲ್ಲದೆ, ಆರೋಗ್ಯಸೇವಾ ಕ್ಷೇತ್ರಕ್ಕೆ ಹೆಚ್ಚಿನ ಹಣಕಾಸಿನ ನೆರವು ಒದಗಿಸಲಾಗುವುದು, ಪ್ರವಾಸೋದ್ಯಮಕ್ಕೆ ಸಾಲದ ರೂಪದಲ್ಲಿ ಸಹಾಯ ಮಾಡಲಾಗುವುದು ಎಂದೂ ಅವರು ಪ್ರಕಟಿಸಿದರು. ಸೋಮವಾರ ಪ್ರಕಟಿಸಿದ ವಿವಿಧ ಕ್ರಮಗಳನ್ನು ಪರಿಗಣಿಸಿದರೆ, ಕೋವಿಡ್‌ ಸಾಂಕ್ರಾಮಿಕದಿಂದಾಗಿ ತೊಂದರೆಗೆ ಒಳಗಾಗಿರುವ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಕೇಂದ್ರ ಘೋಷಿಸಿರುವ ಆರ್ಥಿಕ ಪ್ಯಾಕೇಜ್‌ನ ಮೊತ್ತವು ₹ 6.29 ಲಕ್ಷ ಕೋಟಿ ಆಗುತ್ತದೆ.

ಬಡವರಿಗೆ ನವೆಂಬರ್‌ವರೆಗೆ ಉಚಿತವಾಗಿ ಆಹಾರ ಧಾನ್ಯ ನೀಡಲು ಈ ಹಿಂದೆಯೇ ಘೋಷಿಸಿರುವ ₹ 93 ಸಾವಿರ ಕೋಟಿ, ಆಹಾರ ಧಾನ್ಯ ನೀಡಲು ಸೋಮವಾರ ಘೋಷಿಸಿದ ಹೆಚ್ಚುವರಿ ₹ 14,775 ಕೋಟಿ ಹಾಗೂ ಹಣಕಾಸು ವಲಯವು ಕೋವಿಡ್‌ನಿಂದ ತೊಂದರೆಗೆ ಒಳಗಾಗಿರುವ ವಲಯಗಳಿಗೆ ಕೊಡುವ ಸಾಲಕ್ಕೆ ಖಾತರಿ ನೀಡಲು ನಿಗದಿ ಮಾಡಿರುವ ಮೊತ್ತ ಈ ಪ್ಯಾಕೇಜ್‌ನಲ್ಲಿ ಒಳಗೊಂಡಿದೆ.

ತುರ್ತು ಸಾಲ ಖಾತರಿ ಯೋಜನೆಯ ಮೊತ್ತವನ್ನು ಕೇಂದ್ರವು ₹ 4.5 ಲಕ್ಷ ಕೋಟಿಗೆ ಹೆಚ್ಚಿಸಿದೆ. ಇದರ ಮೊತ್ತ ₹ 3 ಲಕ್ಷ ಕೋಟಿ ಆಗಿತ್ತು. ಈ ಯೋಜನೆಯ ಅಡಿಯಲ್ಲಿ ಸಣ್ಣ ಉದ್ದಿಮೆಗಳಿಗೆ ಅಡಮಾನ ಇಲ್ಲದೆಯೇ ಸಾಲ ನೀಡಲಾಗುತ್ತದೆ, ಸಾಲಕ್ಕೆ ಕೇಂದ್ರವು ಖಾತರಿದಾರ ಆಗಿರುತ್ತದೆ.

ಕೋವಿಡ್‌ನಿಂದಾಗಿ ತೀವ್ರ ತೊಂದರೆ ಅನುಭವಿಸಿರುವ ವಲಯಗಳ ನೆರವಿಗಾಗಿ ₹ 1.1 ಲಕ್ಷ ಕೋಟಿ ಮೊತ್ತದ ಸಾಲ ಖಾತರಿ ಯೋಜನೆಯನ್ನು ಕೂಡ ನಿರ್ಮಲಾ ಅವರು ಸೋಮವಾರ ಪ್ರಕಟಿಸಿದರು. ಈ ಯೋಜನೆಯ ಅಡಿಯಲ್ಲಿ ಆರೋಗ್ಯ ಸೇವಾ ವಲಯಕ್ಕಾಗಿ ₹ 50 ಸಾವಿರ ಕೋಟಿ ನಿಗದಿ ಮಾಡಲಾಗಿದೆ.

ಕಿರು ಹಣಕಾಸು ಸಂಸ್ಥೆಗಳು ಒಟ್ಟು 25 ಲಕ್ಷ ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ ₹ 1.25 ಲಕ್ಷದವರೆಗೆ ಸಾಲ ವಿತರಣೆ ಮಾಡಲಿವೆ ಎಂದು ನಿರ್ಮಲಾ ಹೇಳಿದರು.

₹ 19,041 ಕೋಟಿ: ಭಾರತ್‌ನೆಟ್‌ ಯೋಜನೆಯ ಅಡಿಯಲ್ಲಿ ದೇಶದ ಎಲ್ಲ ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸಲು ಸೋಮವಾರ ನಿಗದಿ ಮಾಡಿದ ಹೆಚ್ಚುವರಿ ಮೊತ್ತ. ಹೆಚ್ಚುವರಿ ಮೊತ್ತ ನಿಗದಿ ಮಾಡಿರುವ ಕಾರಣ, ಭಾರತ್‌ನೆಟ್‌ ಯೋಜನೆಗಾಗಿ ವೆಚ್ಚ ಮಾಡುವ ಒಟ್ಟು ಮೊತ್ತವು ₹ 61,109 ಕೋಟಿಗೆ ಹೆಚ್ಚಳವಾಗಲಿದೆ.

₹ 23,220 ಕೋಟಿ: ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಮೀಸಲಾದ ಹಾಸಿಗೆಗಳನ್ನು, ಅರೋಗ್ಯ ಸೌಲಭ್ಯಗಳನ್ನು ಸಿದ್ಧಪಡಿಸಲು ನೀಡುವುದಾಗಿ ಘೋಷಿಸಿರುವ ಮೊತ್ತ. ಈ ಮೊತ್ತವನ್ನು ಹಾಲಿ ಹಣಕಾಸು ವರ್ಷದಲ್ಲಿಯೇ ವೆಚ್ಚ ಮಾಡುವುದಾಗಿ ಸಚಿವೆ ಪ್ರಕಟಿಸಿದ್ದಾರೆ. ಈ ಮೊತ್ತವು ಆರೋಗ್ಯ ಸಚಿವಾಲಯಕ್ಕೆ ತಕ್ಷಣದಿಂದಲೇ ಲಭ್ಯವಾಗುವಂತೆ ಮಾಡಲಾಗಿದೆ.

₹ 14,775 ಕೋಟಿ: ರೈತರಿಗೆ ಡಿಎಪಿ ಮತ್ತು ಇತರ ರಸಗೊಬ್ಬರ ಖರೀದಿಸಲು ಸಬ್ಸಿಡಿಗೆ ಹೆಚ್ಚುವರಿಯಾಗಿ ನೀಡಲಾಗುವ ಮೊತ್ತ

ಪ್ರವಾಸೋದ್ಯಮ ಕ್ಷೇತ್ರಕ್ಕೆ...
ಕೋವಿಡ್‌ನಿಂದಾಗಿ ತೊಂದರೆ ಅನುಭವಿಸಿರುವ ಪ್ರವಾಸೋದ್ಯಮ ಕ್ಷೇತ್ರದ ಏಜೆನ್ಸಿಗಳಿಗೆ ₹ 10 ಲಕ್ಷದವರೆಗೆ ಸಾಲ ನೀಡಲಾಗುವುದು ಎಂದು ನಿರ್ಮಲಾ ಅವರು ಪ್ರಕಟಿಸಿದರು. ಅಲ್ಲದೆ, ಪ್ರವಾಸಿಗರಿಗೆ ಗೈಡ್ ಆಗಿ ಕೆಲಸ ಮಾಡುವವರಿಗೆ ₹ 1 ಲಕ್ಷದವರೆಗೆ ಸಾಲ ನೀಡಲಾಗುತ್ತದೆ ಎಂದೂ ಅವರು ಪ್ರಕಟಿಸಿದರು.

ಕೋವಿಡ್‌ ನಿರ್ಬಂಧಗಳು ತೆರವಾದ ನಂತರ ಭಾರತಕ್ಕೆ ಬರುವ ಮೊದಲ ಐದು ಲಕ್ಷ ಪ್ರವಾಸಿಗರಿಗೆ ಪ್ರವಾಸಿ ವೀಸಾ ಶುಲ್ಕ ವಿನಾಯಿತಿ ನೀಡಲಾಗುತ್ತದೆ. ವೀಸಾ ಶುಲ್ಕಕ್ಕೆ ವಿನಾಯಿತಿ ನೀಡುವುದರಿಂದ ಕೇಂದ್ರ ಸರ್ಕಾರಕ್ಕೆ ₹ 100 ಕೋಟಿ ವೆಚ್ಚವಾಗಲಿದೆ.

* ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆಯನ್ನು ಬೃಹತ್ ಪ್ರಮಾಣದ ಎಲೆಕ್ಟ್ರಾನಿಕ್ಸ್‌ ಉತ್ಪನ್ನ ತಯಾರಿಕೆ ವಲಯಕ್ಕೆ 2025–26ರವರೆಗೆ ವಿಸ್ತರಣೆ ಮಾಡಲಾಗಿದೆ.

* ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಉದ್ದೇಶದ ಆತ್ಮನಿರ್ಭರ ಭಾರತ ರೋಜಗಾರ್ ಯೋಜನೆಯನ್ನು ಮುಂದಿನ ವರ್ಷದ ಮಾರ್ಚ್‌ 31ರವರೆಗೆ ವಿಸ್ತರಿಸಲಾಗುತ್ತದೆ. ಈ ವರ್ಷದ ಜೂನ್‌ 18ರವರೆಗೆ ಈ ಯೋಜನೆಯ ಅಡಿಯಲ್ಲಿ ಒಟ್ಟು 21.42 ಲಕ್ಷ ಜನ ಪ್ರಯೋಜನ ಪಡೆದಿದ್ದಾರೆ.

***
ಸಾಂಕ್ರಾಮಿಕದಿಂದಾಗಿ ತೊಂದರೆಗೆ ಒಳಗಾದ ವಲಯಗಳಿಗೆ ನೆರವಾಗುವತ್ತ ಗಮನ ನೀಡಿರುವ ಹೊಸ ಕ್ರಮಗಳೂ ಇದರಲ್ಲಿ ಇವೆ, ಹಳೆಯ ಯೋಜನೆಗಳ ಮುಂದುವರಿಕೆಯೂ ಇದೆ. ಹಾಗೆಯೇ, ಈಚೆಗೆ ಮಾಡಿದ್ದ ಕೆಲವು ಘೋಷಣೆಗಳನ್ನು ಪುನರುಚ್ಚರಿಸಲಾಗಿದೆ.
-ಅದಿತಿ ನಾಯರ್, ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು