ಸೋಮವಾರ, ಡಿಸೆಂಬರ್ 5, 2022
23 °C

ಚಮಚಾಗಿರಿ ಮಾಡುವುದಕ್ಕೂ ಒಂದು ಮಿತಿಯಿದೆ: ಮುರ್ಮು ಬಗ್ಗೆ ಉದಿತ್ ರಾಜ್ ವಿವಾದ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಮೊದಲ ದಲಿತ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ಉದಿತ್ ರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

‘ದ್ರೌಪದಿ ಮುರ್ಮು ಅವರಂತಹ ರಾಷ್ಟ್ರಪತಿ ಯಾವ ದೇಶಕ್ಕೂ ಸಿಗಬಾರದು. ಚಮಚಾಗಿರಿ ಮಾಡುವುದಕ್ಕೂ ಒಂದು ಮಿತಿಯಿದೆ. ಶೇ 70ರಷ್ಟು ಜನರು ಗುಜರಾತ್ ಉಪ್ಪನ್ನು ತಿನ್ನುತ್ತಾರೆ ಎಂದು ಹೇಳಲಾಗುತ್ತದೆ. ಉಪ್ಪು ತಿಂದು ಇಲ್ಲಿಯೇ ಜೀವನ ನಡೆಸಿದರೆ ನಮ್ಮ ಜನರ ಸಮಸ್ಯೆ ಗೊತ್ತಾಗುತ್ತದೆ’ ಎಂದು ಉದಿತ್ ರಾಜ್ ಟ್ವೀಟ್ ಮಾಡಿದ್ದಾರೆ. 

ಟ್ವೀಟ್ ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ರಾಜ್ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದಾರೆ.

ಉದಿತ್ ರಾಜ್ ಟ್ವೀಟ್‌ಗೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ‘ಮುರ್ಮು ಅವರಿಗೆ ಕಾಂಗ್ರೆಸ್ ನಾಯಕ ಉದಿತ್ ರಾಜ್ ಬಳಸಿದ ಪದಗಳು ಆತಂಕಕಾರಿ, ದುರದೃಷ್ಟಕರ. ಕಾಂಗ್ರೆಸ್ಸಿಗರು ಇಂತಹ ಪದಗಳನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅಧೀರ್ ರಂಜನ್ ಚೌಧರಿ ಕೂಡ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಅವರ ಬುಡಕಟ್ಟು ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದ್ದಾರೆ. 

‘ದೇಶದ ಅತ್ಯುನ್ನತ ಹುದ್ದೆ ಮತ್ತು ಬುಡಕಟ್ಟು ಸಮಾಜವನ್ನು ಪದೇ ಪದೇ ಅವಮಾನಿಸುವುದು ಕಾಂಗ್ರೆಸ್‌ನ ಲಕ್ಷಣವಾಗಿದೆ. ಕಾಂಗ್ರೆಸ್ ಯಾವಾಗಲೂ ಬುಡಕಟ್ಟು ಸಮಾಜದ ವಿರುದ್ಧವಿದೆ. ಉದಿತ್ ರಾಜ್ ಅವರು ಬುಡಕಟ್ಟು ಸಮಾಜಕ್ಕೆ ಮಾಡಿರುವ ಈ ಅವಮಾನವನ್ನು ಕಾಂಗ್ರೆಸ್ ಬೆಂಬಲಿಸುತ್ತದೆಯೇ? ಎಂದು ಬಿಜೆಪಿ ವಕ್ತಾರ ಶಹಜಾದ್ ಪೂನವಾಲಾ ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗ ಉದಿತ್ ರಾಜ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಓದಿ... ಮುರ್ಮು ಬಗ್ಗೆ ಉದಿತ್ ರಾಜ್ ವಿವಾದಾತ್ಮಕ ಹೇಳಿಕೆ: ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು