ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಣಿಗೆ ನೀಡಿದವರ ಮಾಹಿತಿ ಇಲ್ಲ

ಪಿಎಂಕೇರ್ಸ್‌: ಲೆಕ್ಕಪರಿಶೋಧನಾ ವರದಿ ಬಿಡುಗಡೆ
Last Updated 2 ಸೆಪ್ಟೆಂಬರ್ 2020, 21:30 IST
ಅಕ್ಷರ ಗಾತ್ರ

ನವದೆಹಲಿ: ಪಿಎಂಕೇರ್ಸ್‌ ನಿಧಿಗೆ ಸಂಬಂಧಿಸಿದ ಲೆಕ್ಕಪರಿಶೋಧನಾ ವರದಿಯನ್ನು, ನಿಧಿಯ ಅಧಿಕೃತ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ. ನಿಧಿ ಆರಂಭವಾದ ಮೊದಲ ಐದು ದಿನದಲ್ಲಿ (2020ರ ಮಾರ್ಚ್‌ 27ರಿಂದ ಮಾರ್ಚ್‌ 31) ನಿಧಿಗೆ ಒಟ್ಟು ₹ 3,076 ಕೋಟಿ ಜಮೆಯಾಗಿದೆ. ಲೆಕ್ಕಪರಿಶೋಧನೆಯ ಆರು ಪುಟಗಳ ವರದಿಯಲ್ಲಿ ಒಂದು ಪುಟವನ್ನಷ್ಟೇ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಉಳಿದ ಪುಟಗಳನ್ನು ಬಹಿರಂಗಪಡಿಸದೇ ಇರುವುದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

₹ 2.25 ಲಕ್ಷವನ್ನು ಜಮೆ ಮಾಡಿ ನಿಧಿಯನ್ನು ಆರಂಭಿಸಲಾಗಿತ್ತು.ಮೊದಲ ಐದು ದಿನದಲ್ಲಿ ₹ 3,075.85 ಕೋಟಿಯಷ್ಟು ಹಣವು ದೇಶೀಯವಾಗಿ ದೇಣಿಗೆ ಬಂದಿದೆ. ₹ 39.67 ಲಕ್ಷದಷ್ಟು ಹಣವು ವಿದೇಶಿ ಮೂಲಗಳಿಂದ ದೇಣಿಗೆ ಬಂದಿದೆ. ದೇಣಿಗೆ ನೀಡಿದವರ ವಿವರವು 4ನೇ ಪುಟದಲ್ಲಿ ಇದೆ. ಈ ದೇಣಿಗೆಗೆ ಬಡ್ಡಿಯ ರೂಪದಲ್ಲಿ ₹ 35.32 ಲಕ್ಷದಷ್ಟು ಬಡ್ಡಿ ಬಂದಿದೆ. ಇದಕ್ಕೆ ಸಂಬಂಧಿಸದ ವಿವರವು ಲೆಕ್ಕಪರಿಶೋಧನೆಯ ವರದಿಯ 5ನೇ ಪುಟದಲ್ಲಿ ಇದೆ. ನಿಧಿಯ ಖಾತೆಯ ವಿವರವು ವರದಿಯ ಮೂರನೇ ಪುಟದಲ್ಲಿ ಇದೆ. ಈ ಎಲ್ಲಾ ಪುಟಗಳು ವರದಿಯಲ್ಲಿ ಇವೆ ಎಂಬ ಮಾಹಿತಿ ವರದಿಯಲ್ಲಿ ಇದೆ.

ಆದರೆ, ಆರು ಪುಟಗಳ ವರದಿಯಲ್ಲಿ ಒಂದು ಪುಟವನ್ನು ಮಾತ್ರ ಪಿಎಂಕೇರ್ಸ್‌ನ ಅಧಿಕೃತ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಈ ಪುಟದಲ್ಲಿ ಪುಟ ಸಂಖ್ಯೆ ಸಹ ಇಲ್ಲ. 3, 4 ಮತ್ತು 5ನೇ ಪುಟದಲ್ಲಿ ಇದೆ ಎನ್ನಲಾದ ವಿವರಗಳು ಈ ಪುಟದಲ್ಲಿ ಇಲ್ಲ. ಹೀಗಾಗಿ ಇದು 1ನೇ ಪುಟವೇ ಅಥವಾ 2ನೇ ಪುಟವೇ ಅಥವಾ 6ನೇ ಪುಟವೇ ಎಂಬುದು ತಿಳಿಯುವುದಿಲ್ಲ.

ಲೆಕ್ಕಪರಿಶೋಧನೆಯ ವರದಿಯ ಎಲ್ಲಾ ಪುಟಗಳು ಜಾಲತಾಣದಲ್ಲಿ ಲಭ್ಯವಿಲ್ಲದೇ ಇರುವುದನ್ನು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಅವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಚಿದಂಬರಂ ಅವರು, ದೇಣಿಗೆ ನೀಡಿದವರ ಹೆಸರನ್ನು ಬಹಿರಂಗಪಡಿಸಿ ಎಂದು ಆಗ್ರಹಿಸಿದ್ದಾರೆ. ಚಿದಂಬರಂ ಅವರು ಮಾಡಿರುವ ಟ್ವೀಟ್‌ಗಳನ್ನು ಸಾವಿರಾರು ಮಂದಿ ರಿಟ್ವೀಟ್ ಮಾಡಿದ್ದಾರೆ. ವರದಿಯ ಪೂರ್ಣಪಾಠ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.

‘ದೇಣಿಗೆ ನೀಡಿದವರು ಯಾರು ಎಂಬುದು ತಿಳಿದಿದೆ. ದೇಣಿಗೆ ಪಡೆದ ಟ್ರಸ್ಟಿಗಳು ಯಾರು ಎಂಬುದೂ ತಿಳಿದಿದೆ. ಆದರೆ, ದೇಣಿಗೆ ನೀಡಿದವರ ವಿವರ ಇರುವ ನಾಲ್ಕನೇ ಪುಟವನ್ನು ಅಪ್‌ಲೋಡ್‌ ಮಾಡದೇ ಇರುವುದು ಏಕೆ? ದೇಣಿಗೆದಾರರ ಹೆಸರನ್ನು ಬಹಿರಂಗಪಡಿಸಲು ನಿಧಿಯ ಟ್ರಸ್ಟಿಗಳು ಹೆದರುತ್ತಿರುವುದು ಏಕೆ’ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.

ಪಿಎಂಕೇರ್ಸ್‌ ನಿಧಿಗೆ ಐದು ದಿನದಲ್ಲಿ ಬಂದಿರುವ ನಿಧಿಯ ಬಗ್ಗೆ ಮಾತ್ರ ವರದಿ ನೀಡಿರುವುದು ಏಕೆ?ನಿಧಿಗೆ ಈವರೆಗೆ ಬಂದಿರುವ ದೇಣಿಗೆಗಳ ಲೆಕ್ಕಪರಿಶೋಧನೆಯ ವರದಿಯನ್ನು ಯಾವಾಗ ನೀಡುತ್ತೀರಿ ಎಂದು ಹಲವು ಟ್ವೀಟಿಗರು ಪ್ರಶ್ನಿಸಿದ್ದಾರೆ.

ಪಿಎಂಕೇರ್ಸ್‌, ಕೋವಿಡ್‌ನಂತಹ ವಿಕೋಪಗಳನ್ನು ಎದುರಿಸಲು ರಚಿಸಲಾದ ಒಂದು ಚಾರಿಟಬಲ್ ಟ್ರಸ್ಟ್‌ ಎಂದು ಕೇಂದ್ರ ಸರ್ಕಾರ ಹೇಳಿದೆ. ಇಂತಹ ವಿಕೋಪಗಳನ್ನು ಎದುರಿಸಲು ಈಗಾಗಲೇ ಪ್ರಧಾನಮಂತ್ರಿ ಪರಿಹಾರ ನಿಧಿ ಇದೆ. ಹೀಗಿದ್ದೂ ಇನ್ನೊಂದು ನಿಧಿ ಸ್ಥಾಪಿಸುವ ಅಗತ್ಯವೇನಿತ್ತು ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಲೇ ಇವೆ.

ಇದು ಸರ್ಕಾರದ ನಿಧಿ ಅಲ್ಲ. ಹೀಗಾಗಿ ಈ ನಿಧಿಗೆ ಸಂಬಂಧಿಸಿದ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ನೀಡಲು ಸಾಧ್ಯವಿಲ್ಲ ಎಂದೂ ಸರ್ಕಾರ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT