ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸಿಬ್ಬಂದಿ ನೇಮಕ ವಿಳಂಬ: 'ಸುಪ್ರೀಂ' ಅಸಮಾಧಾನ

Last Updated 22 ಅಕ್ಟೋಬರ್ 2021, 8:29 IST
ಅಕ್ಷರ ಗಾತ್ರ

ನವದೆಹಲಿ: ಜಿಲ್ಲಾ ಮತ್ತು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಿಬ್ಬಂದಿ ನೇಮಕಾತಿ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ‘ಸರ್ಕಾರಕ್ಕೆ ನ್ಯಾಯಾಧಿಕರಣದ ಅಗತ್ಯವಿಲ್ಲದಿದ್ದರೆ, ಆ ಕಾಯ್ದೆಯನ್ನೇ ರದ್ದುಗೊಳಿಸಲಿ’ ಎಂದು ಕಟುವಾಗಿ ಹೇಳಿದೆ.

ಆಯೋಗದ ಅಧ್ಯಕ್ಷರು, ಸದಸ್ಯರು, ಇತರ ಸಿಬ್ಬಂದಿ ನೇಮಕಾತಿಗೆ ಸರ್ಕಾರಗಳು ಕ್ರಮಕೈಗೊಳ್ಳದೆ ಇರುವ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಎಂ.ಎಂ. ಸುಂದರೇಶ್ ಅವರನ್ನೊಳಗೊಂಡ ಪೀಠ, ‘ನೇಮಕಾತಿಗಾಗಿ ಅರ್ಜಿ ಕರೆದು, ಪರೀಕ್ಷೆ ನಡೆಸಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿರುವುದು ದುರದೃಷ್ಟಕರ‘ ಎಂದು ಹೇಳಿದೆ.

‘ಸರ್ಕಾರಕ್ಕೆ ನ್ಯಾಯಾಧಿಕರಣದ ಅಗತ್ಯವಿಲ್ಲದಿದ್ದರೆ ಈ ಕಾಯ್ದೆಯನ್ನೇ ರದ್ದುಗೊಳಿಸಬೇಕಾಗುತ್ತದೆ. ಆಯೋಗದಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ ನಾವು ನಮ್ಮ ನ್ಯಾಯ ತೀರ್ಮಾನದ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆ. ನೇಮಕಾತಿಗೆ ಸಂಬಂಧಪಟ್ಟ ವಿಚಾರವನ್ನೂ ನ್ಯಾಯಾಂಗ ನೋಡಬೇಕಾಗಿ ಬಂದಿರುವುದು ದುರದೃಷ್ಟಕರ. ಇದು ಸಂತಸಪಡುವ ವಿಚಾರವಲ್ಲ‘ ಎಂದು ಅಭಿಪ್ರಾಯಪಟ್ಟಿದೆ.

ಖಾಲಿ ಇರುವ ಎಲ್ಲ ಹುದ್ದೆಗಳನ್ನು ಎಂಟು ವಾರಗಳಲ್ಲಿ ಭರ್ತಿ ಮಾಡುವಂತೆ ಆಗಸ್ಟ್ 11ರಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಇತ್ತೀಚೆಗೆ ಬಾಂಬೆ ಹೈಕೋರ್ಟ್‌ ಗ್ರಾಹಕ ಸಂರಕ್ಷಣಾ ನಿಯಮಗಳನ್ನು ರದ್ದುಗೊಳಿಸಿ ನೀಡಿದ ಆದೇಶ, ಈ ನೇಮಕಾತಿ ಪ್ರಕ್ರಿಯೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

‘ಈಗಾಗಲೇ ಆರಂಭಿಸಿರುವ ಪ್ರಕ್ರಿಯೆಯನ್ನು ತಡೆಹಿಡಿಯಬಾರದು. ನಿಗದಿಪಡಿಸಿದ ಸಮಯದೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಬೇಕು‘ ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT