ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹೀನ್‌ ಬಾಗ್‌: ಸಿಪಿಎಂಗೆ ಸುಪ್ರೀಂ ಕೋರ್ಟ್‌ ತರಾಟೆ

Last Updated 9 ಮೇ 2022, 18:54 IST
ಅಕ್ಷರ ಗಾತ್ರ

ನವದೆಹಲಿ: ಶಹೀನ್‌ ಬಾಗ್‌ ಪ್ರದೇಶದಲ್ಲಿ ದಕ್ಷಿಣ ದೆಹಲಿ ನಗರ ಪಾಲಿಕೆ ಸೋಮವಾರ ಆರಂಭಸಿದ್ದ ಒತ್ತುವರಿ ತೆರವು ಕಾರ್ಯಾಚರಣೆಗೆ ತಡೆ ನೀಡಿ ಎಂದು ಅರ್ಜಿ ಸಲ್ಲಿಸಿದ್ದ ಸಿಪಿಎಂ ಪಕ್ಷವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

‘ಸಿಪಿಎಂ ಈ ಅರ್ಜಿಯನ್ನೇಕೆ ಸಲ್ಲಿಸಿದೆ? ಪಕ್ಷದ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆಯೇ? ರಾಜಕೀಯ ಪಕ್ಷಗಳ ಮನವಿಯ ಮೇರೆಗೆ ಇಂತಹ ಆದೇಶ ಹೊರಡಿಸಲು ಸಾಧ್ಯವಿಲ್ಲ. ಇದು ಅದಕ್ಕೆ ಸರಿಯಾದ ವೇದಿಕೆಯಲ್ಲ’ ಎಂದು ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರಿದ್ದ ಪೀಠವು ಹೇಳಿದೆ.

‘ಈ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಸಲ್ಲಿಸಲಾಗಿದೆ. ಜತೆಗೆ ಬೀದಿ ವ್ಯಾಪಾರಿಗಳು ಎರಡನೇ ವಾದಿಗಳಾಗಿದ್ದಾರೆ’ ಎಂದು ಸಿಪಿಎಂ ಪರ ವಕೀಲ ಪಿ.ವಿ.ಸುರೇಂದ್ರನಾಥ್ ಅವರು ಹೇಳಿದರು. ಆಗ ಪೀಠವು, ‘ಬೀದಿ ವ್ಯಾಪಾರಿಗಳು ಒತ್ತುವರಿ ಮಾಡಿದ್ದರೆ, ಅದನ್ನು ತೆರವು ಮಾಡಲಾಗುತ್ತದೆ. ತೆರವು ಕಾರ್ಯಾಚರಣೆ ವೇಳೆ ಕಾನೂನು ಉಲ್ಲಂಘನೆಯಾಗಿದ್ದರೆ, ಬೀದಿ ವ್ಯಾಪಾರಿಗಳು ಹೈಕೋರ್ಟ್‌ಗೆ ಹೋಗಲಿ’ ಎಂದು ಪೀಠವು ಹೇಳಿತು.

‘ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದ್ದ ಆದೇಶಗಳ ಅನ್ವಯವೇ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರಲ್ಲಿ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ’ ಎಂದು ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ಆಗ ಸುರೇಂದ್ರನಾಥ್ ಅವರು, ‘ಜಹಾಂಗೀರ್‌ಪುರಿಯಲ್ಲಿ ತೆರವು ಕಾರ್ಯಾಚರಣೆ ಸ್ಥಗಿತಕ್ಕೆ ಕೋರ್ಟ್‌ ತಡೆ ನೀಡಿತ್ತು’ ಎಂದು ಉಲ್ಲೇಖಿಸಿದರು. ಆಗ ಪೀಠವು, ‘ಅಲ್ಲಿ ಕಟ್ಟಡಗಳನ್ನು ತೆರವು ಮಾಡಲಾಗುತ್ತಿತ್ತು. ಹೀಗಾಗಿ ತಡೆ ನೀಡಲಾಗಿತ್ತು. ಆ ಆದೇಶವನ್ನು ಎಲ್ಲದಕ್ಕೂ ಅನ್ವಯಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಕಾನೂನುಬಾಹಿರವಾಗಿ ಕಟ್ಟಡ ನಿರ್ಮಿಸಿ, ನಾವು ಅದನ್ನು ರಕ್ಷಿಸುತ್ತೇವೆ ಎಂದುಕೊಂಡಿದ್ದೀರಾ. ನಾವು ಎಲ್ಲಾ ಒತ್ತುವರಿ ತೆರವು ಕಾರ್ಯಾಚರಣೆಗೆ ತಡೆ ನೀಡಿಲ್ಲ’ ಎಂದು ಹೇಳಿತು.

ಆಗ ಸುರೇಂದ್ರನಾಥ್ ಅವರು, ‘ಹೈಕೋರ್ಟ್‌ ಈ ವಿಷಯವನ್ನು ವಿಚಾರಣೆಗೆ ಎತ್ತಿಕೊಳ್ಳುವುದಿಲ್ಲ’ ಎಂದರು. ಆಗ ಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ‘ಇದು ಸರಿಯಲ್ಲ. ಈ ರೀತಿ ಅರ್ಜಿ ಸಲ್ಲಿಸುವುದು ಸರಿಯಲ್ಲ. ನೀವು ಇಡೀ ಒಂದು ದಿನವನ್ನು ಇಲ್ಲಿ ಕಳೆದಿದ್ದೀರಿ, ಬದಲಿಗೆ ಹೈಕೋರ್ಟ್‌ಗೆ ಹೋಗಬಹುದಿತ್ತು. ಆದರೆ, ಇಲ್ಲಿಗೆ ಬಂದಿದ್ದೀರಿ. ಒಂದು ರಾಜಕೀಯ ಪಕ್ಷವು ಇಲ್ಲಿಗೆ ಬಂದು, ಹೈಕೋರ್ಟ್‌ ವಿಚಾರಣೆ ನಡೆಸುವುದಿಲ್ಲ ಎಂದು ಹೇಳುವುದು ತೀರಾ ಅತಿಯಾಯಿತು. ನೀವು ಹೀಗೆ ಹೇಗೆ ಹೇಳುತ್ತೀರಿ? ಇದು ಹೈಕೋರ್ಟ್‌ಗೆ ತೋರಿಸುತ್ತಿರುವ ಅಗೌರವ’ ಎಂದು ಪೀಠವು ಆಕ್ಷೇಪ ವ್ಯಕ್ತಪಡಿಸಿತು.

ಇಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸುವುದಿಲ್ಲ. ಅದರಲ್ಲೂ ರಾಜಕೀಯ ಪಕ್ಷದ ಮನವಿಯ ಮೇರೆಗೆ ಮಧ್ಯಪ್ರವೇಶ ಸಾಧ್ಯವೇ ಇಲ್ಲ
ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT