ಗುರುವಾರ , ಸೆಪ್ಟೆಂಬರ್ 16, 2021
29 °C

ಬಡ್ತಿಯಲ್ಲಿ ಪರಿಶಿಷ್ಟರಿಗೆ ಮೀಸಲಾತಿ: ತೀರ್ಪು ಮರುಶೀಲನೆಗೆ ‘ಸುಪ್ರೀಂ’ ನಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಡ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳವರಿಗೆ ಮೀಸಲಾತಿ ನೀಡುವ ಕುರಿತು ತಾನು ನೀಡಿರುವ ತೀರ್ಪಿನ ಮರುಪರಿಶೀಲನೆ ನಡೆಸಲು ಸುಪ್ರೀಂಕೋರ್ಟ್‌ ಮಂಗಳವಾರ ನಿರಾಕರಿಸಿತು.

ಅಲ್ಲದೆ,  ಎಸ್‌ಸಿ ಹಾಗೂ ಎಸ್‌ಟಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವುದನ್ನು ಯಾವ ರೀತಿ ಅನುಷ್ಠಾನಗೊಳಿಸಬೇಕು ಎಂಬ ವಿಷಯ ಕುರಿತು ರಾಜ್ಯಗಳೇ ತೀರ್ಮಾನಿಸಬೇಕು ಎಂದೂ ಹೇಳಿತು.

ಈ ವಿಷಯ ಕುರಿತು ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ನಾಗೇಶ್ವರರಾವ್, ಸಂಜೀವ್‌ ಖನ್ನಾ ಹಾಗೂ ಬಿ.ಆರ್‌.ಗವಾಯಿ ಅವರಿರುವ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಬಡ್ತಿಯಲ್ಲಿ ಮೀಸಲಾತಿ ನೀಡುವಲ್ಲಿ ರಾಜ್ಯಗಳು ಎದುರಿಸುತ್ತಿರುವ ವಿಶಿಷ್ಟವಾದ ಸಮಸ್ಯೆಗಳನ್ನು ಗುರುತಿಸಬೇಕು. ಎರಡು ವಾರಗಳ ಒಳಗಾಗಿ ಅವುಗಳ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಗಳ ಪರ ವಕೀಲರಿಗೆ ನ್ಯಾಯಪೀಠ ಸೂಚನೆ ನೀಡಿತು.

‘ಈ ವಿಷಯದಲ್ಲಿ ರಾಜ್ಯ ಸರ್ಕಾರಗಳು ಏನು ಮಾಡಬೇಕು ಎಂದು ಸಲಹೆ ನೀಡುವುದು ನಮ್ಮ ಕೆಲಸವಲ್ಲ. ಈ ವಿಷಯಕ್ಕೆ ಸಂಬಂಧಿಸಿದ ನೀತಿಯನ್ನು ಹೇಗೆ ಜಾರಿಗೊಳಿಸಬೇಕು ಎಂದೂ ನಾವು ಹೇಳುವುದಿಲ್ಲ’ ಎಂದು ನ್ಯಾಯಪೀಠ ಹೇಳಿತು.

‘ಹಿಂದುಳಿದಿರುವಿಕೆ ಹಾಗೂ ಹಿಂದುಳಿದವರಿಗೆ ಪ್ರಾತಿನಿಧ್ಯ ನೀಡುವುದನ್ನು ಪರಿಗಣಿಸಿ, ಮೀಸಲಾತಿಯನ್ನು ಹೇಗೆ ಜಾರಿಗೊಳಿಸಬೇಕು ಎಂಬುದನ್ನು ಈಗಾಗಲೇ ಸ್ಪಷ್ಟವಾಗಿ ತಿಳಿಸಲಾಗಿದೆ. ನ್ಯಾಯಾಲಯದ ಪರಿಶೀಲನೆಗೆ ಒಳಪಟ್ಟು ಈ ನೀತಿಯನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ರಾಜ್ಯಗಳೇ ನಿರ್ಧರಿಸಬೇಕು’ ಎಂದೂ ನ್ಯಾಯಪೀಠ ಹೇಳಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು