ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ನಿರ್ಮೂಲನೆ ಕಷ್ಟಸಾಧ್ಯ ‘ಲೋಕಲ್‌ ಸರ್ಕಲ್‌’ ಸಮೀಕ್ಷೆ

ಲೋಕಲ್‌ ಸರ್ಕಲ್‌ ಸಮೀಕ್ಷೆಯಲ್ಲಿ ಮುಕ್ಕಾಲು ಭಾಗದಷ್ಟು ಜನರ ಅಭಿಪ್ರಾಯ
Last Updated 15 ಆಗಸ್ಟ್ 2020, 21:53 IST
ಅಕ್ಷರ ಗಾತ್ರ

ನವದೆಹಲಿ: ಇನ್ನು ಎರಡು ವರ್ಷಗಳಲ್ಲಿ (2022ರ ಡಿಸೆಂಬರ್‌ ವೇಳೆಗೆ) ದೇಶವನ್ನು ಭ್ರಷ್ಟಾಚಾರ ಹಾಗೂ ಲಂಚಗುಳಿತನದಿಂದ ಮುಕ್ತಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ, ‘ಈ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ’ ಎಂಬ ಅಭಿಪ್ರಾಯವನ್ನುದೇಶದ ಮುಕ್ಕಾಲು ಭಾಗದಷ್ಟು ಜನರು ವ್ಯಕ್ತಪಡಿಸಿದ್ದಾರೆ ಎಂಬುದು ‘ಲೋಕಲ್‌ ಸರ್ಕಲ್‌’ ಸಂಸ್ಥೆಯವರು ನಡೆಸಿದ ಈಚಿನ ಸಮೀಕ್ಷೆಯಿಂದ ತಿಳಿದುಬಂದಿದೆ.

ಸಂಸ್ಥೆಯು ನಡೆಸಿದ್ದ ಹಿಂದಿನ ಎರಡು ವರ್ಷಗಳ ಸಮೀಕ್ಷೆಗೆ ಹೋಲಿಸಿದರೆ, ದೇಶದ ಭ್ರಷ್ಟಾಚಾರ ನಿರ್ಮೂಲನಾ ಸಾಮರ್ಥ್ಯದ ಬಗ್ಗೆ ಜನರು ನಿರಾಶಾವಾದಿಗಳಾಗುತ್ತಿದ್ದಾರೆ ಎಂಬ ಅಂಶ ಗಮನಕ್ಕೆ ಬರುತ್ತದೆ. 2018ರ ಮತ್ತು 19ರ ಸಮೀಕ್ಷೆಗಳಲ್ಲಿ ಕ್ರಮವಾಗಿ ಶೇ 29 ಹಾಗೂ ಶೇ 31ರಷ್ಟು ಜನರು ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಲಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ವರ್ಷದ ಸಮೀಕ್ಷೆಯಲ್ಲಿ ಅದರ ಪ್ರಮಾಣ ಶೇ 44ಕ್ಕೆ ಏರಿಕೆಯಾಗಿದೆ. ‘ಇದು ಆತಂಕದ ವಿಚಾರವಾಗಿದ್ದು, ಸರ್ಕಾರವು ತುರ್ತಾಗಿ ಈ ಕಡೆಗೆ ಗಮನ ಹರಿಸಬೇಕಾಗಿದೆ’ ಎಂದು ಸಮೀಕ್ಷೆ ಹೇಳಿದೆ.

ಆದರೆ, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಜನರು ಆಶಾವಾದಿಗಳಾಗಿದ್ದಾರೆ. ಸಮೀಕ್ಷೆಗೆ ಒಳಪಟ್ಟವರಲ್ಲಿ ಶೇ 69ರಷ್ಟು ಮಂದಿ, ಮುಂದಿನ ಎರಡು ವರ್ಷಗಳಲ್ಲಿ ಈ ದಿಕ್ಕಿನಲ್ಲಿ ಸಾಕಷ್ಟು ಅಭಿವೃದ್ಧಿ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ 11ರಷ್ಟು ಮಂದಿ ಇದಕ್ಕೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಶೇ 16ರಷ್ಟು ಮಂದಿ ಈಗಿರುವ ಸ್ಥಿತಿಯೇ ಮುಂದುವರಿಯಬಹುದು ಎಂದಿದ್ದಾರೆ.

‘ಕೋವಿಡ್‌– 19ರಿಂದಾಗಿ ದೇಶದ ಆರ್ಥಿಕತೆಗೆ ಧಕ್ಕೆಯಾಗಿದ್ದು, 2022ರವೇಳೆಗೆ ಇದರಿಂದ ಚೇತರಿಸಿಕೊಳ್ಳಲು ಸಾಧ್ಯವೇ’ ಎಂಬ ಪ್ರಶ್ನೆಗೆ, ಶೇ 37ರಷ್ಟು ಮಂದಿ ‘ಆರ್ಥಿಕತೆಯು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದೆ. ಅಷ್ಟೇ ಅಲ್ಲ, ಜಿಡಿಪಿ ಮಟ್ಟವು ಕೋವಿಡ್‌ಪೂರ್ವ ಸ್ಥಿತಿಯನ್ನು ಮೀರಿ ಹೋಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶೇ 17ರಷ್ಟು ಮಂದಿ, ‘ಆರ್ಥಿಕತೆ ಚೇತರಿಕೆ ಕಾಣಬಹುದು ಆದರೆ, ಕೋವಿಡ್‌ಪೂರ್ವ ಮಟ್ಟವನ್ನು ಮೀರಿ ಹೋಗಲಾರದು’ ಎಂದಿ ದ್ದಾರೆ. ಶೇ 2ರಷ್ಟು ಮಂದಿ ಆರ್ಥಿ ಕತೆ ಚೇತರಿಸಿಕೊಳ್ಳಲಾರದು ಎಂದಿದ್ದಾರೆ.

ಸಾಮಾಜಿಕ ಸ್ಥಿರತೆಯ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಸುಧಾರಣೆ ಆಗಲಿದೆ ಎಂದು ಶೇ 26ರಷ್ಟು ಮಂದಿ ವಿಶ್ವಾಸ ವ್ಯಕ್ತಪಡಿಸಿದ್ದರೆ, ಶೇ 43ರಷ್ಟು ಮಂದಿ ಯಾವುದೇ ಬದಲಾವಣೆ ಆಗಲಾರದು ಎಂದಿದ್ದಾರೆ. ಶೇ 28ರಷ್ಟು ಮಂದಿ ಈ ಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದಿದ್ದಾರೆ.

2018 ಮತ್ತು 19ರ ಸಮೀಕ್ಷೆಗಳಿಗೆ ಹೋಲಿಸಿದರೆ ಸಾಮಾಜಿಕ ಸ್ಥಿರತೆಯ ವಿಚಾರ ದಲ್ಲೂ ಜನರಿಗೆ ಇರುವ ವಿಶ್ವಾಸ ಕುಂದುತ್ತಿರುವುದು ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT