ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ರೈತರಿಂದ ನೂತನ ಕೃಷಿ ಕಾಯ್ದೆಗಳ ಪ್ರತಿಯನ್ನು ಸುಡುವ ಮೂಲಕ ಲೋಹ್ರಿ ಆಚರಣೆ

Last Updated 13 ಜನವರಿ 2021, 19:01 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರವು ಇತ್ತೀಚೆಗೆ ಜಾರಿಗೆ ತಂದ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳ ಪ್ರತಿಗಳನ್ನುಪ್ರತಿಭಟನಾನಿರತ ರೈತರುಕೊಯ್ಲು ಹಬ್ಬ ಲೊಹ್ರಿಯ ಭಾಗವಾಗಿ ಬುಧವಾರ ಸುಟ್ಟರು. ಈ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ 50 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ ಕಾಯ್ದೆಗಳು ರೈತರಿಗೆ ಹೇಗೆ ಪ್ರಯೋಜನಕಾರಿ ಎಂಬುದನ್ನು ಮನವರಿಕೆ ಮಾಡಲು ಈ 50 ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ರೈತರು ಹೇಳಿದ್ದಾರೆ.

ಪಂಜಾಬ್‌ನ ಅತ್ಯಂತ ಜನಪ್ರಿಯ ಜನಪದ ಹಬ್ಬ ಲೊಹ್ರಿಯನ್ನು ಕೂಡರೈತರು ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಲು ಬಳಸಿಕೊಂಡರು. ದೊಡ್ಡದಾಗಿ ಬೆಂಕಿ ಹಚ್ಚಿ, ಕಾಯ್ದೆಗಳ ಪ್ರತಿಗಳನ್ನು ಅದಕ್ಕೆ ಹಾಕಿದರು.

ಪ್ರತಿಭಟನಕಾರರು ಪಟ್ಟು ಸಡಿಲಿಸದೇ ಇದ್ದರೂ ಸರ್ಕಾರವು ಮಾತುಕತೆಯ ಬಾಗಿಲನ್ನು ತೆರೆದೇ ಇಟ್ಟಿದೆ. ಮಾತುಕತೆಗೆ ಸರ್ಕಾರ ಸದಾ ಸಿದ್ಧವಿದೆ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವ ಪುರುಷೋತ್ತಮ ರೂಪಾಲಾ ಅವರು ಹೇಳಿದ್ದಾರೆ. ಸಮಸ್ಯೆಗೆ ಮಾತುಕತೆಯ ಮೂಲಕ ಮಾತ್ರ ಪರಿಹಾರ ಸಾಧ್ಯ ಎಂದು ಸರ್ಕಾರವು ನಂಬಿದೆ ಎಂದು ಅವರು ಹೇಳಿದ್ದಾರೆ.

ಈತನಕ, ಸರ್ಕಾರ ಮತ್ತು ರೈತರ ನಡುವೆ ಎಂಟು ಸುತ್ತು ಮಾತುಕತೆ ನಡೆದಿದೆ. ಮುಂದಿನ ಮಾತುಕತೆ ಶುಕ್ರವಾರಕ್ಕೆ ನಿಗದಿಯಾಗಿದೆ.

ಕೇಂದ್ರವು ಮೂರು ಹೊಸಕಾಯ್ದೆಗಳನ್ನು ಜಾರಿಗೆ ತರುವುದರೊಂದಿಗೆ ತಂತ್ರಜ್ಞಾನದ ಬಳಕೆ, ಹೂಡಿಕೆ, ಮೌಲ್ಯವರ್ಧನೆ ಮತ್ತು ಪ್ರಗತಿಯ ವಿಚಾರಗಳೆಲ್ಲವೂ ಸ್ಥಗಿತಗೊಂಡವು. ಖಾಸಗಿ ಹೂಡಿಕೆಗೆ ನೆರವಾಗಲು ಕೇಂದ್ರವು ₹1 ಲಕ್ಷ ಕೋಟಿಯನ್ನು ತೆಗೆದಿರಿಸಿದೆ. ಆದರೆ, ತಂತ್ರಜ್ಞಾನ ಮೇಲ್ದರ್ಜೆಗೆ ಏರಿಕೆ, ಹೂಡಿಕೆ, ಮೌಲ್ಯವರ್ಧನೆಯಂತಹ ಕೆಲಸದಲ್ಲಿ ರೈತರಿಗೆ ನೆರವಾಗುವ ದಿಸೆಯಲ್ಲಿ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಲು ಸರ್ಕಾರ ಸಿದ್ಧವಿಲ್ಲ.ಉದ್ಯಮ ಸಂಸ್ಥೆಗಳು ಕೃಷಿ ಕ್ಷೇತ್ರದಲ್ಲಿ ಮಾಡುವ ಹೂಡಿಕೆಯ ಮುಖ್ಯ ಉದ್ದೇಶ ಭಾರಿ ಪ್ರಮಾಣದ ಲಾಭ ಗಳಿಕೆ ಮತ್ತು ಭೂಮಿ ಹಾಗೂ ನೀರು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳನ್ನು ತನ್ನ ಕೈಗೆ ತೆಗೆದುಕೊಳ್ಳುವುದು ಎಂದು ಸಮನ್ವಯ ಸಮಿತಿಯು ಹೇಳಿಕೆಯಲ್ಲಿ ಆರೋಪಿಸಿದೆ.

ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಹೇಳಿಕೆಯ ಬಗ್ಗೆಯೂ ಸಮಿತಿಯು ಆಕ್ಷೇಪ ವ್ಯಕ್ತ ಪಡಿಸಿದೆ. ಕಾಯ್ದೆಗಳಿಂದಾಗಿ ರೈತರ ಹಿತಾಸಕ್ತಿಗೆ ಮಾರಕವಾಗುವ ಒಂದೇ ಒಂದು ಅಂಶವನ್ನು ಪ್ರತಿಭಟನಕಾರರು ಗುರುತಿಸಿಲ್ಲ ಎಂದು ಸರ್ಕಾರ ಹೇಳಿರುವುದು ಸುಪ್ರೀಂ ಕೋರ್ಟ್‌ ಆದೇಶವನ್ನು ಓದಿದಾಗ ತಿಳಿದಿದೆ. ಇದು ಸಂಪೂರ್ಣವಾಗಿ ಸುಳ್ಳು ಎಂದು ಸಮಿತಿಯು ತಿಳಿಸಿದೆ.

ಕಾಯ್ದೆಗಳಲ್ಲಿ ರೈತರ ಹಿತಾಸಕ್ತಿಗೆ ಮಾರಕವಾಗಿ ಇರುವ ಎಲ್ಲ ಅಂಶಗಳನ್ನೂ ಲಿಖಿತವಾಗಿ, ಮಾತುಕತೆ ಸಂದರ್ಭದಲ್ಲಿ ಸರ್ಕಾರಕ್ಕೆ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಟ್ರ್ಯಾಕ್ಟರ್‌ ಜಾಥಾಕ್ಕೆ ಸಿದ್ಧತೆ

ದೆಹಲಿಯಿಂದ 300 ಕಿ.ಮೀ.ಗಿಂತ ಒಳಗಿರುವ ಎಲ್ಲ ಜಿಲ್ಲೆಗಳಲ್ಲಿ ಇರುವ ರೈತರು ಸಾವಿರಾರು ಟ್ರ್ಯಾಕ್ಟರ್‌ಗಳ ಜತೆಗೆ ಗಣರಾಜ್ಯೋತ್ಸವ ದಿನ ದೆಹಲಿಗೆ ಬರಬೇಕು ಎಂದು ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿಯು ಕರೆ ಕೊಟ್ಟಿದೆ. 250ಕ್ಕೂ ಹೆಚ್ಚು ರೈತ ಸಂಘಟನೆಗಳು ಈ ಸಮಿತಿಯ ನೇತೃತ್ವದಲ್ಲಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ.

ಇದೇ 18ರಂದು ಮಹಿಳಾ ಕಿಸಾನ್‌ ಕಾರ್ಯಕ್ರಮಗಳನ್ನು ಪ್ರತಿಭಟನಕಾರರು ಹಮ್ಮಿಕೊಂಡಿದ್ದಾರೆ. ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕೇರಳದ ರಾಜಭವನದ ಮುಂದೆ ಜನವರಿ 23–25ರವರೆಗೆ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಮಹಾರಾಷ್ಟ್ರದಲ್ಲಿ ಇದೇ 24–26ರವರೆಗೆ ಮತ್ತು ಒಡಿಶಾದಲ್ಲಿ ಇದೇ 23ರಂದು ಇಂತಹುದೇ ಪ್ರತಿಭಟನೆ ನಡೆಯಲಿದೆ ಎಂದು ರೈತ ಸಂಘಟನೆಗಳು ಹೇಳಿವೆ.

ಅಲೀಗಡ ವಿದ್ಯಾರ್ಥಿಗಳಿಂದ ಆರೋಗ್ಯ ಶಿಬಿರ

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವುದರ ಭಾಗವಾಗಿ, ಪ್ರತಿಭಟನಾ ಸ್ಥಳದಲ್ಲಿ ಆರೋಗ್ಯ ಶಿಬಿರ ಮತ್ತು ಕಿರು ಗ್ರಂಥಾಲಯ ಸ್ಥಾಪಿಸುವುದಾಗಿ ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ವಿದ್ಯಾರ್ಥಿಗಳ ಸಮನ್ವಯ ಸಮಿತಿಯು ತಿಳಿಸಿದೆ.ಎಎಂಯುನಲ್ಲಿ ಕಳೆದ ಮೂರು ವರ್ಷಗಳಿಂದ ಚುನಾಯಿತ ವಿದ್ಯಾರ್ಥಿ ಸಂಘಟನೆ ಇಲ್ಲ. ಹಾಗಾಗಿ, ವಿದ್ಯಾರ್ಥಿ ಸಂಘದ ಈ ಹಿಂದಿನ ಪದಾಧಿಕಾರಿಗಳು ವಿದ್ಯಾರ್ಥಿ ಸಮನ್ವಯ ಸಮಿತಿಯನ್ನು ರಚಿಸಿಕೊಂಡಿದ್ದಾರೆ. ಈ ಸಮಿತಿಯ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಶಿಬಿರ ಮತ್ತು ಕಿರು ಗ್ರಂಥಾಲಯ ಸ್ಥಾಪನೆಯ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT