ಎಂಟು ರಾಜ್ಯಗಳಲ್ಲಿ ಶೇ. 10ಕ್ಕಿಂತ ಹೆಚ್ಚು ಜನರಿಗೆ ಎರಡೂ ಡೋಸ್ ಲಸಿಕೆ ವಿತರಣೆ

ನವದೆಹಲಿ: ದೇಶದಲ್ಲಿ ಕೋವಿಡ್-19 ಲಸಿಕಾ ಕಾರ್ಯಕ್ರಮ ಆರಂಭವಾದ ಮೊದಲ ಆರು ತಿಂಗಳಲ್ಲಿ ಎಂಟು ರಾಜ್ಯಗಳಲ್ಲಿ ಒಟ್ಟು ಜನಸಂಖ್ಯೆಯ ಶೇ. 10ಕ್ಕಿಂತ ಹೆಚ್ಚು ಮಂದಿಗೆ ಎರಡು ಡೋಸ್ ಲಸಿಕೆ ವಿತರಿಸುವಲ್ಲಿ ಯಶಸ್ವಿಯಾಗಿವೆ.
ಜನಸಂಖ್ಯೆ ಹೆಚ್ಚಿರುವ ರಾಜ್ಯಗಳ ಪೈಕಿ ಕೇರಳ (13.2%) ಹಾಗೂ ಗುಜರಾತ್ (13.07%) ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇನ್ನು ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಶೇಕಡಾ 5ಕ್ಕಿಂತಲೂ ಕಡಿಮೆ ಲಸಿಕೆ ಮಾತ್ರ ನೀಡಲಾಗಿದೆ.
ಇದನ್ನೂ ಓದಿ: ಸಣ್ಣ ನಿರ್ಲಕ್ಷ್ಯವೂ ಕೋವಿಡ್ ವಿರುದ್ಧದ ಹೋರಾಟ ದುರ್ಬಲಗೊಳಿಸಬಲ್ಲದು: ಮೋದಿ ಕಳವಳ
ಉಳಿದಂತೆ ಜನಸಂಖ್ಯೆ ಕಡಿಮೆ ಇರುವ ಹಿಮಾಚಲ ಪ್ರದೇಶ (14.66%), ಉತ್ತರಾಖಂಡ (10.35%), ದೆಹಲಿ (12.57%), ತ್ರಿಪುರ (22.85%), ಸಿಕ್ಕಿಂ (23.6%) ಮತ್ತು ಅರುಣಾಚಲ ಪ್ರದೇಶಗಳಲ್ಲಿ (10.62%)ರಷ್ಟು ಲಸಿಕೆ ನೀಡಲಾಗಿದೆ.
ಡೆಕ್ಕನ್ ಹೆರಾಲ್ಡ್ ವಿಶ್ಲೇಷಣೆಯ ಪ್ರಕಾರ ಹೆಚ್ಚಿನ ರಾಜ್ಯಗಳು ಲಸಿಕೆಗೆ ಅರ್ಹರಾಗಿರುವ ಜನರಿಗೆ ಮೊದಲ ಡೋಸ್ ನೀಡುವಲ್ಲಿ ಯಶಸ್ವಿಯಾಗಿದೆ. ಆದರೆ ಎರಡನೇ ಡೋಸ್ ಹಾಕಿಸುವಲ್ಲಿ ಹಿಂದೆ ಬಿದ್ದಿವೆ.
ಉದಾಹರಣೆಗೆ ಹಿಮಾಚಲ ಪ್ರದೇಶದಲ್ಲಿ 54.79 ಲಕ್ಷ ಜನಸಂಖ್ಯೆಯ ಪೈಕಿ ಶೇಕಡಾ 62ಕ್ಕಿಂತ ಹೆಚ್ಚು ಮೊದಲ ಡೋಸ್ ನೀಡಲಾಗಿದೆ. ಆದರೆ ಶೇಕಡಾ 14.66ರಷ್ಟು ಎರಡೂ ಡೋಸ್ ನೀಡುವಲ್ಲಿ ಯಶಸ್ವಿಯಾಗಿವೆ.
ಕರ್ನಾಟಕದಲ್ಲೂ ಇದಕ್ಕೆ ಸಮಾನವಾದ ಪರಿಸ್ಥಿತಿಯಿದ್ದು, 4.72 ಕೋಟಿ ಜನಸಂಖ್ಯೆಯ ಪೈಕಿ ಶೇಕಡಾ 43.2ರಷ್ಟು ಮೊದಲ ಡೋಸ್ ಮತ್ತು ಶೇ. 9.36ರಷ್ಟು ಎರಡೂ ಡೋಸ್ ಹಾಕಿಸಲಾಗಿದೆ.
ಹೆಚ್ಚಿನ ರಾಜ್ಯಗಳು ಕೋವಿಡ್-19 ಲಸಿಕೆ ಪೂರೈಕೆಯಲ್ಲಿ ಕೊರತೆಯನ್ನು ಎದುರಿಸುತ್ತಿದ್ದು, ಇದರಿಂದಾಗಿ ಅನೇಕ ಲಸಿಕೆ ವಿತರಣೆ ಕೇಂದ್ರಗಳನ್ನು ಮುಚ್ಚಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.