ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಅಸ್ಸಾಮಿ ಅಸ್ಮಿತೆ ರಕ್ಷಣೆ: ಅಮಿತ್‌ ಶಾ

Last Updated 24 ಜನವರಿ 2021, 18:07 IST
ಅಕ್ಷರ ಗಾತ್ರ

ಗುವಾಹಟಿ: ‘ನುಸುಳುಕೋರ’ರಿಂದ ಅಸ್ಸಾಂ ಅನ್ನು ರಕ್ಷಿಸಲು ಬಿಜೆಪಿಗೆ ಮಾತ್ರ ಸಾಧ್ಯ. ಕಾಂಗ್ರೆಸ್‌ ಮತ್ತು ಬದ್ರುದ್ದೀನ್‌ ಅಜ್ಮಲ್ ಅವರ ಎಐಯುಡಿಎಫ್‌ ಅಧಿಕಾರಕ್ಕೆ ಬಂದರೆ ನುಸುಳುಕೋರರಿಗೆ ಎಲ್ಲ ಬಾಗಿಲುಗಳನ್ನು ತೆರೆದಿಡಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಚುನಾವಣೆಯ ಹೊಸ್ತಿಲಲ್ಲಿರುವ ಅಸ್ಸಾಂನಲ್ಲಿ ಭಾನುವಾರ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಎಐಯುಡಿಎಫ್‌ ನಡುವೆ ಮೈತ್ರಿ ಇದೆ.

‘ಬಿಜೆಪಿಯನ್ನು ಕೋಮುವಾದಿ ಎಂದು ಕಾಂಗ್ರೆಸ್ ಪಕ್ಷವು ಟೀಕಿಸುತ್ತದೆ. ಆದರೆ, ಆ ಪಕ್ಷವು ಕೇರಳದಲ್ಲಿ ಮುಸ್ಲಿಂ ಲೀಗ್‌ ಜತೆಗೆ, ಅಸ್ಸಾಂನಲ್ಲಿ ಬದ್ರುದ್ದೀನ್‌ ಅಜ್ಮಲ್ ಜತೆಗೆ ಮೈತ್ರಿ ಮಾಡಿಕೊಂಡಿದೆ. ಇದು ಯಾವ ರೀತಿಯ ಜಾತ್ಯತೀತ ನೀತಿ? ಅಜ್ಮಲ್‌ ಅವರ ಕೈಯಲ್ಲಿ ಅಸ್ಸಾಂ ಸುರಕ್ಷಿತವಾಗಿ ಇರುವುದು ಸಾಧ್ಯವೇ? ಅಸ್ಸಾಂಗೆ ಹೊರಗಿನವರಿಂದ ರಕ್ಷಣೆ ಬೇಕು ಎಂದಿದ್ದರೆ ಕೇಂದ್ರ ಮತ್ತು ರಾಜ್ಯ ದಲ್ಲಿ ಬಿಜೆಪಿ ಸರ್ಕಾರವೇ ಇರಬೇಕು’ ಎಂದು ಶಾ ಪ್ರತಿಪಾದಿಸಿದ್ದಾರೆ.

ಬ್ರಿಟಿಷರ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್‌ ಅನುಸರಿಸುತ್ತಿದೆ. ಬುಡಕಟ್ಟು ಜನರು ಮತ್ತು ಬುಡಕಟ್ಟೇತರರ ನಡುವೆ, ಬೋಡೊ ಮತ್ತು ಬೋಡೋ ಅಲ್ಲದವರ ನಡುವೆ ಬಿರುಕು ಮೂಡಿಸುವ ಕೆಲಸವನ್ನು ಈ ಹಿಂದೆ ಇಲ್ಲಿ ಇದ್ದ ಕಾಂಗ್ರೆಸ್ ನೇತೃತ್ವದ‌ ಸರ್ಕಾರ ಮಾಡಿದೆ. ದಶಕಗಳ ಕಾಲ ಅಸ್ಸಾಂ ಅನ್ನು ಪ್ರಕ್ಷುಬ್ಧವಾಗಿಯೇ ಇರಿಸಿತ್ತು. ಕಳೆದ ವರ್ಷದ ಜನವರಿಯಲ್ಲಿ ಬೋಡೊಲ್ಯಾಂಡ್‌ ಒಪ್ಪಂದ ಮಾಡಿಕೊಳ್ಳುವ ಮೂಲಕ ಸಂಘರ್ಷ ವನ್ನು ಕೊನೆಗೊಳಿಸುವ ಕೆಲಸವನ್ನು ಬಿಜೆಪಿ ನೇತೃತ್ವದ ಸರ್ಕಾರವು ಮಾಡಿದೆ ಎಂದು ಶಾ ಹೇಳಿದ್ದಾರೆ.

ಶಾ ಅವರಿಗಿಂತಲೂ ಮೊದಲು ಮಾತನಾಡಿದ ಸಚಿವ ಹಿಮಂತ ವಿಶ್ವ ಶರ್ಮಾ ಅವರು ಕೂಡ ಕಾಂಗ್ರೆಸ್‌ ಮತ್ತು ಎಐಯುಡಿಎಫ್‌ ಮೇಲೆ ಹರಿಹಾಯ್ದರು. ಈ ಎರಡೂ ಪಕ್ಷಗಳು ಜತೆಯಾಗಿ ಅಸ್ಸಾಂ ನಲ್ಲಿ ‘ಬಾಬರ್‌ ಆಳ್ವಿಕೆ’ ತರಲು ಹೊರ ಟಿವೆ. ಆದರೆ, ಬಿಜೆಪಿಯ ಹನುಮಾನ್‌ ಗಳು ಇರುವವರೆಗೆ ಬಾಬರ್‌ ಆಳ್ವಿಕೆ ಸ್ಥಾಪಿಸಲು ಬಿಡುವುದಿಲ್ಲ ಎಂದು ಹೇಳಿದರು.

ಸಿಎಎ ಉಲ್ಲೇಖ ಇಲ್ಲ

‘ಅಸ್ಸಾಮಿ ಜನರ ಅಸ್ಮಿತೆ ಮತ್ತು ವೈಶಿಷ್ಟ್ಯಕ್ಕೆ ಹೊರಗಿನವರಿಂದ ದೊಡ್ಡ ಅಪಾಯ ಇದೆ. ಇಂತಹ ಹೊರಗಿನವರಿಗೆ ರಕ್ಷಣೆ ಕೊಡುವ ಕೆಲಸವನ್ನು ಕಾಂಗ್ರೆಸ್‌ ಮತ್ತು ಎಐಯುಡಿಎಫ್‌ ಮಾಡುತ್ತಿವೆ ಎಂದು ಶಾ ಹೇಳಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷವು ಈ ಆರೋಪಕ್ಕೆ ತಿರುಗೇಟು ನೀಡಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಮೂಲಕ ಅಸ್ಸಾಂಗೆ ಬಿಜೆಪಿ ಅತ್ಯಂತ ದೊಡ್ಡ ಬೆದರಿಕೆ ಒಡ್ಡಿದೆ ಎಂದು ಹೇಳಿದೆ. ಶಾ ಅವರು ತಮ್ಮ ಭಾಷಣದಲ್ಲಿ ಸಿಎಎ ಬಗ್ಗೆ ಉಲ್ಲೇಖವನ್ನೇ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT