ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ರಿಂದ 18 ವರ್ಷದೊಳಗಿನ 3 ಕೋಟಿ ಮಂದಿಗೆ ಕೋವಿಡ್ ಲಸಿಕೆಯ 2ನೇ ಡೋಸ್ ವಿತರಣೆ

Last Updated 5 ಮಾರ್ಚ್ 2022, 10:29 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ಇದುವರೆಗೆ 15 ರಿಂದ 18 ವರ್ಷದ 3 ಕೋಟಿ ಹದಿಹರೆಯದವರಿಗೆ ಕೋವಿಡ್-19 ವಿರುದ್ಧದ ಲಸಿಕೆಗಳ ಎರಡೂ ಡೋಸ್‌ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ವಯೋಮಾನದವರಿಗೆ ಲಸಿಕೆ ನೀಡುವ ಅಭಿಯಾನ ಜನವರಿ 3 ರಂದು ಪ್ರಾರಂಭವಾಗಿತ್ತು. ಶನಿವಾರ ಬೆಳಿಗ್ಗೆವರೆಗೆ ಲಭ್ಯವಾದ ಮಾಹಿತಿ ಪ್ರಕಾರ, 15 ರಿಂದ 18 ವಯಸ್ಸಿನ 3,01,57,910 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ ಮತ್ತು 5,52,63,296 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.

'ನಮ್ಮ ಯುವ ಯೋಧರು ತುಂಬಾ ದೊಡ್ಡ ಸಾಧನೆ ಮಾಡಿದ್ದಾರೆ! 15 ರಿಂದ 18 ವರ್ಷದೊಳಗಿನ 3 ಕೋಟಿಗೂ ಹೆಚ್ಚು ಹದಿಹರೆಯದವರು ಈಗ ಕೋವಿಡ್-19 ವಿರುದ್ಧದ ಲಸಿಕೆಯನ್ನು ಸಂಪೂರ್ಣವಾಗಿ ಪಡೆದುಕೊಂಡಿದ್ದಾರೆ. ಯುವ ಭಾರತವು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದೆ' ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಟ್ವೀಟ್‌ನಲ್ಲಿ ತಿಳಿಸಿದೆ.

2 ಕೋಟಿಗೂ ಅಧಿಕ ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ (ಬೂಸ್ಟರ್ ಡೋಸ್) ಅನ್ನು ನೀಡಲಾಗಿದೆ. ಹೆಚ್ಚುವರಿಯಾಗಿ, ಭಾರತದ ವಯಸ್ಕ ಜನಸಂಖ್ಯೆಯ ಶೇ 97 ಕ್ಕಿಂತಲೂ ಅಧಿಕ ಜನರು ತಮ್ಮ ಮೊದಲ ಡೋಸ್ ಕೋವಿಡ್-19 ವಿರುದ್ಧದ ಲಸಿಕೆಯನ್ನು ಪಡೆದಿದ್ದಾರೆ.

ಕಳೆದ 24 ಗಂಟೆಗಳಲ್ಲಿ 24.62 ಲಕ್ಷ ಡೋಸ್ ನೀಡುವುದರೊಂದಿಗೆ ಶನಿವಾರದ ವೇಳೆಗೆ ದೇಶದಲ್ಲಿ 178.55 ಕೋಟಿಗೂ ಅಧಿಕ ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಲೇ ಸಾಗಿದ್ದು, ಶನಿವಾರ 24 ಗಂಟೆಗಳ ಅವಧಿಯಲ್ಲಿ 5,921 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ 289 ಜನರು ಸಾವಿಗೀಡಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 5,14,878ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT